ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ?
-ಮಲ್ಲಿಕಾರ್ಜುನ ಮುದನೂರ್
ಟಿ.ಎನ್.ಶೇಷನ್ ಅವರ ಕಾಲದಿಂದ ಚುನಾವಣೆಗಳನ್ನು ನೋಡಿದಾಗ ಚುನಾವಣ ಆಯೋಗ ಬಿಗಿಯಾಗಿದೆ. ನಾನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಇನ್ನು ಮುಂದಿನ ಚುನಾವಣೆಗಳು ಇನ್ನೂ ಶಿಸ್ತುಬದ್ಧವಾಗಿ ನಡೆಯಲಿವೆ. ರಾಜಕಾರಣಿಗಳಿಗಿನ್ನು ಉಳಿಗಾಲವಿಲ್ಲ, ಜನಸೇವೆ ಮೂಲಕವೇ ಮತಕೇಳುವ ಕಾಲ ಬಂದೇ ಬರುತ್ತದೆಂದು ಭಾವಿಸಲಾಗಿತ್ತು. ಆದರೆ, ಪೊಲೀಸರು ಚಾಪೆ ಕೆಳಗೆ ತೂರಿದರೆ ಕಳ್ಳರು ರಂಗೋಲಿ ಕೆಳಗೇ ತೂರುತ್ತಾರೆ ಎಂಬ ಮಾತೀಗ ಸತ್ಯವಾಗುತ್ತ ಸಾಗಿದೆ.
ಚುನಾವಣೆ ಆಯೋಗ ಚುನಾವಣ ದಿನಾಂಕ ಘೋಷಿಸುವ ಮುನ್ನವೇ ರಾಜಕೀಯ ನಾಯಕರು ಅರ್ಧ ಚುನಾವಣೆಯನ್ನು ಮುಗಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷಗಳು ಆರು ತಿಂಗಳು ಮೊದಲೇ ಸಮಾವೇಶಗಳನ್ನು ಆಯೋಜಿಸುತ್ತಿವೆ. ಆಡಳಿತ ಪಕ್ಷ ಸರ್ಕಾರಿ ಹಣದಲ್ಲೇ ಕಾರ್ಯಕ್ರಮ ನಡೆಸಿ ಪಕ್ಷದ ಪ್ರಚಾರ ಮಾಡುತ್ತಿವೆ.
ನಿನ್ನೆಯಷ್ಟೇ ಚಿತ್ರದುರ್ಗದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರೇ ಖುದ್ದಾಗಿ ಮಾಜಿ ಶಾಸಕರಿಬ್ಬರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಅಲ್ಲದೆ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಮಾಜಿ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ನಮ್ಮ ಅಬ್ಯರ್ಥಿ ಇಲ್ಲಿ ಗೆಲ್ಲುವುದು ಖಚಿತ. ಎಲ್ಲರೂ ಕಾಂಗ್ರೆಸ್ಸಿಗೆ ಮತನೀಡಿ ಮತ್ತೊಮ್ಮೆ ಅಧಿಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇದು ಕೇವಲ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಮಾತ್ರವಲ್ಲ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಪಕ್ಷದ ಪರ ಪ್ರಚಾರ ನಡೆಸುವ ಕೆಲಸ ನಡೆದಿದೆ ಎಂಬ ಆರೋಪಗಳಿವೆ. ಹೀಗೆ ಜನರಲ್ಲಿ ನಾನಾ ಕನಸುಗಳನ್ನು ಬಿತ್ತಿ ಅಧಿಕಾರ ಹಿಡಿದ ರಾಜಕಾರಣಿಗಳು ಜನರ ಹಣವನ್ನೇ ಕೊಳ್ಳೆ ಹೊಡೆದು ತಮ್ಮ ಬೇಳೆ ಬೇಯಿಸಿಕೊಳ್ಳ ತೊಡಗಿದ್ದಾರೆ. ಯಾವುದೇ ಅಂಜಿಕೆ ಅಳುಕಿಲ್ಲದೆ ಜನರೆದುರೇ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರಾದರೂ ಪ್ರಶ್ನೆ ಮಾಡುವುವರು ಯಾರು?
ಮತ್ತೊಂದು ಕಡೆ ಬಹುತೇಕ ಸ್ಪರ್ದಾಕಾಂಕ್ಷಿಗಳು ಈಗಾಗಲೇ ಮನೆಮನೆಗೆ ತಲುಪುತ್ತಿದ್ದಾರೆ. ಪ್ರತಿ ಮತದಾರರಿಗೆ ಆಮಿಷವೊಡ್ಡುವ ಕೆಲಸವನ್ನು ಭರದಿಂದ ನಡೆಸಿದ್ದಾರೆ. ಹಣ, ಹೆಂಡ, ಸೀರೆ , ಪಂಚೆ ಮತ್ತಿತರೆ ವಸ್ತುಗಳನ್ನು ಹಂಚುವ ಕೆಲಸ ಬಹಿರಂಗವಾಗಿಯೇ ನಡೆಯುತ್ತಿದೆ. ಚುನಾವಣ ನೀತಿ ಸಂಹಿತೆ ಜಾರಿಯಿಲ್ಲದ ಕಾರಣ ಖಡಕ್ ಅಧಿಕಾರಿಗಳು ಸಹ ಕಣ್ಣೆದುರೇ ಅಕ್ರಮ ನಡೆದರೂ ಹಲ್ಲು ಕಿತ್ತ ಹಾವಿನಂತಿರಬೇಕಾದ ಸ್ಥಿತಿಯಿದೆ.
ರಾಜಕೀಯ ಪಕ್ಷದ ನಾಯಕರು ಪ್ರಚಾರಕ್ಕಾಗಿ ಹೆಲಿಕಾಪ್ಟರ್ ನಲ್ಲಿ ಹಾರಾಡುತ್ತಿದ್ದಾರೆ. ರಾಜ್ಯ ಹೊರರಾಜ್ಯಗಳಿಂದಲೂ ನಾಯಕರು ಬಂದು ಬಿಡಾರ ಹೂಡಿದ್ದಾರೆ. 2018ರ ಕರ್ನಾಟಕ ಚುನಾವಣೆ ಅಂತೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆ ಪ್ರತಿಷ್ಠೆಯ ಚುನಾವಣೆ ಆಗಿದೆ. ಪರಿಣಾಮ ಕರ್ನಾಟಕ ಗೆಲ್ಲಲು ಯಾವುದೇ ತಂತ್ರಗಾರಿಕೆಗೂ ಸಿದ್ಧ ಎಂಬ ಸಂದೇಶವನ್ನು ಈಗಾಗಲೇ ರಾಜಕೀಯ ನಾಯಕರು ರವಾನಿಸಿದ್ದಾರೆ.
ಜಾತಿ, ಧರ್ಮ ರಾಜಕಾರಣ, ಕುಟುಂಬ ರಾಜಕಾರಣ, ಪಕ್ಷಾಂತರ ಪರ್ವ ಶುರುವಾಗಿದೆ. ಟೆಂಪಲ್ ರನ್, ಸರಳ ಸಜ್ಜನಿಕೆಯ ಪ್ರದರ್ಶನ. ಮತ್ತೊಂದು ಕಡೆ ಕೋಮು ಕಿಡಿ ಹೊತ್ತಿಸುವುದು. ಹಣ ಬಲ, ತೋಳ್ಬಲ, ಜಾತಿ ಬಲ ಬಳಸುವುದು. ಒಳ ಒಪ್ಪಂದಗಳು, ಹೊಂದಾಣಿಕೆಗಳು ಎಲ್ಲವೂ ಖುಲ್ಲಂ ಖುಲ್ಲಾ ನಡೆಯುತ್ತಲಿವೆ. ಎರಡನೇ ಹಂತದ ನಾಯಕರ ಖರೀದಿಯೂ ಜೋರಾಗಿದೆ. ಎಲ್ಲೆಡೆ ಅಬ್ಯರ್ಥಿ ಆಕಾಂಕ್ಷಿಗಳ ಬ್ಯಾನರ್, ಬಟ್ಟಿಂಗ್ಸ್ ತುಂಬಿ ತುಳುಕುತ್ತಿದ್ದು ಪರಿಸರ ಮಾಲಿನ್ಯ ಹೇಳತೀರದಾಗಿದೆ.
ನೀವು ಚಾಪೆ ಕೆಳಗಡೆ ತೂರಿದರೆ ನಾವು ರಂಗೋಲಿ ಕೆಳಗಡೆನೇ ತೂರುತ್ತೇವೆ ಎಂಬುದನ್ನು ರಾಜಕಾರಣಿಗಳು ಸಾಧಿಸಿ ತೋರುತ್ತಿದ್ದಾರೆ. ಪರಿಣಾಮ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಪ್ರಜ್ಞಾವಂತ ಮತದಾರರಲ್ಲಿ ಮೂಡಿದೆ. ಚುನಾವಣ ಆಯೋಗ ನ್ಯಾಯ ಬದ್ಧ ಚುನಾವಣೆಗೆ ಮತ್ತಷ್ಟು ನಿಯಮಗಳನ್ನು ರೂಪಿಸಲಿ. ನಿಯಮಗಳಿಗಿಂತ ಮೊದಲು ಮತದಾರರು ಜಾಗೃತರಾಗುವ ಮೂಲಕ ಮತಗಳನ್ನು ಮಾರಿಕೊಳ್ಳುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕಿದೆ.