ರೈತ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಪತ್ರ ಚಳುವಳಿ
ಪೋಸ್ಟ್ ಕಾರ್ಡ ಅಭಿಯಾನ
ಕಲ್ಬುರ್ಗಿಃ ಕರ್ನಾಟಕ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಮಸೂದೆ ಹಾಗೂ ಎಪಿಎಂಸಿ ಕಾಯಿದೆಗಳ ವಿರುದ್ದ ಬೃಹತ್ ಪೋಸ್ಟ್ ಕಾರ್ಡ್ ಅಭಿಯಾನ ಕೈಗೊಳ್ಳಲಾಗಿತ್ತು.ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಒಟ್ಟು 25,000 ಪೋಸ್ಟ್ ಕಾರ್ಡ್ ಗಳ ಮೂಲಕ ರೈತರು ತಮ್ಮ ವಿರೋಧ ವ್ಯಕ್ತಪಡಿಸಿ ಈ ಕೂಡಲೇ ಕಾಯಿದೆ ವಾಪಸ್ ಪಡೆಯುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೇಂದ್ರದ ಮೋದಿ ಸರಕಾರ ರೈತ ವಿರೋಧಿ ಧೋರಣೆ ಅನುಸರಿಸುವ ಮೂಲಕ ಅನ್ನದಾತನ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಹೊಸ ಕಾಯಿದೆಗಳು ರೈತರ ಪಾಲಿಗೆ ಮರಣ ಶಾಸನವಾಗಲಿವೆ. ಕಾಂಗ್ರೆಸ್ ಪಕ್ಷ ಈ ರೈತವಿರೋಧಿ ಕಾಯಿದೆಗಳನ್ನು ವಾಪಸ್ ಪಡೆದುಕೊಳ್ಳುವವರೆಗೆ ರೈತರೊಂದಿಗೆ ಜೊತೆಗೂಡಿ ಹೋರಾಡುತ್ತದೆ . ಈ ನಿಟ್ಟಿನಲ್ಲಿ ರೈತರಿಂದ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗಳಿಗೆ ಕಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಿದ್ದು ಜಿಲ್ಲೆಯಿಂದ ಒಟ್ಟು 25,000 ಪೋಸ್ಟ್ ಕಾರ್ಡ್ಗಳನ್ನು ಒಳಗೊಂಡ ಮನವಿ ಪತ್ರವನ್ನು ರಾಷ್ಟ್ರಪತಿಗೆ ಕಳಿಸಿಕೊಡಲಾಗುವುದು ಎಂದ ಅವರು,
ಜಿಲ್ಲೆಯಿಂದ ಸಂಗ್ರಹಿಸಿದ ಪೋಸ್ಟ್ ಕಾರ್ಡ್ ಗಳನ್ನು ಕೆಪಿಸಿಸಿ ಕಚೇರಿಯ ಮೂಲಕ ದೆಹಲಿಯ ರಾಷ್ಟ್ರಪತಿ ಭವನಕ್ಕೆ ಕಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಸಂಗ್ರಹಿಸಿದ ಕಾರ್ಡ್ ಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದರು.