ಅಂಗನವಾಡಿ ಕೇಂದ್ರಗಳಿಗೆ ಜಿ.ಪಂ ಸಿಇಒ ಭೇಟಿ
ಯಾದಗಿರಿಃ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕವಿತಾ ಎಸ್.ಮನ್ನಿಕೇರಿ ಅವರು ಬಳಿಚಕ್ರ ವಲಯ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ, ದಾಖಲಾತಿಗಳನ್ನು ಪರೀಶಿಲಿಸಿದರು.
ಅರಕೇರಾ ಕೆ. ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ-1ರ ಮಕ್ಕಳೊಂದಿಗೆ ಶಾಲಾ ಪೂರ್ವ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಾದ ಗರ್ಭಿಣಿ ಮತ್ತು ಬಾಣಂತಿಯರೊಂದಿಗೆ ಆಹಾರವನ್ನು ಸೇವಿಸಿದರು.
ನಂತರ ಮುಂಡರಗಿ ಗ್ರಾಮದ ಅಂಗನವಾಡಿ ಕೇಂದ್ರ-1ಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ ಪುಸ್ತಕವನ್ನು ವೀಕ್ಷಣೆ ಮಾಡಿದರು. ಎರಡು ದಿನಗಳಿಂದ ಹಾಜರಾತಿ ಹಾಕದೇ ಇರುವುದು ಕಂಡುಬಂದಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ನೋಟಿಸ್ ಜಾರಿ ಮಾಡಲು ಅವರು ನಿರ್ದೇಶಿಸಿದರು.
ಅಂಗನವಾಡಿ ಕೇಂದ್ರದ ಸುತ್ತ-ಮುತ್ತ ಕಂಪೌಂಡ್ ಇರುವುದರಿಂದ ಕಿಚನ್ ಗಾರ್ಡನ್ ಮಾಡಲು ಆದೇಶಿಸಿದರು. ಅಲ್ಲದೇ, ಶೌಚಾಲಯ ಉಪಯೋಗ ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಕಾಂತ ಕುಲಕರ್ಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ ಮತ್ತು ವಲಯ ಮೇಲ್ವಿಚಾರಕಿ ಉಪಸ್ಥಿತರಿದ್ದರು.