ಡಿಕೆಶಿ ಅಂದರ್ ; ಜೆಡಿಎಸ್ ದರ್ಬಾರ್!?
ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕೆ? ಬಿಜೆಪಿ ತಂತ್ರದಿಂದ ಜೆಡಿಎಸ್ ಗೆ ಲಾಭ?
ಕಳೆದ ನಾಲ್ಕು ದಿನಗಳಿಂದ ಐಟಿ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಾಮ್ರಾಜ್ಯದ ಮೇಲೆ ಮುಗಿಬಿದ್ದಿದ್ದಾರೆ. ಇಂಚಿಂಚೂ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸದ್ಯ ಅಕ್ರಮ ಸಂಪಾದನೆಯ ದಾಖಲೆ ಕಲೆ ಹಾಕಿದ್ದು ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗಿದೆ. ಆ ಮೂಲಕ ಇಷ್ಟರಲ್ಲೇ ಜಾರಿ ನಿರ್ದೇಶನಾಲಯ, ಸಿಬಿಐ ಅಧಿಕಾರಿಗಳೂ ಡಿಕೆಶಿ ಗ್ರಹಕ್ಕೆ ಎಂಟ್ರಿ ಆಗಲಿದ್ದಾರೆಂಬ ಮುನ್ಸೂಚನೆ ಸಿಕ್ಕಿದೆ.
ಇದೇ ವೇಳೆ ಪವರ್ ಮಿನಿಸ್ಟರ್ ಡಿಕೆಶಿ ಸಮರ್ಥನೆ ಮಾಡಿಕೊಳ್ಳುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ. ದಾಳಿಗೆ ಸಿಆರ್ ಪಿಎಫ್ ಪಡೆ ಬಳಕೆ, ರಾಜಕೀಯ ಪ್ರೇರಿತ ದಾಳಿ ಬಗ್ಗೆ ಮಾತ್ರ ಮಾತನಾಡಲು ಸೂಚಿಸಿದೆ. ಆ ಮೂಲಕ ಕಾಂಗ್ರೆಸ್ ಪಕ್ಷವೂ ಡಿಕೆಶಿ ಐಟಿ ಪ್ರಕರಣದಿಂದ ಡಿಸ್ಟೆನ್ಸ್ ಮೆಂಟೇನ್ ಮಾಡಲು ಮುಂದಾಗಿದೆ.
ಸದ್ಯ ಡಿಕೆಶಿ ಬಂಧನ ಭೀತಿಯಲ್ಲಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಬಗ್ಗೆ ಕಾಂಗ್ರೆಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಮತ್ತೊಂದು ಕಡೆ ಬಿಜೆಪಿ ನಾಯಕರ ಕೇಸುಗಳ ತನಿಖೆಗೆ ಚುರುಕು ಮುಟ್ಟಿಸುವ ಪ್ರತಿತಂತ್ರ ಹೆಣೆದಿದೆ. ಆದರೆ ಅದರಿಂದ ಇನ್ನಷ್ಟು ಕಾಂಗ್ರೆಸ್ ನಾಯಕರ ಮೇಲಿನ ದಾಳಿಗೆ ಕೊಂಚ ಬ್ರೇಕ್ ಬೀಳಬಹುದು ವಿನಹ ಡಿಕೆಶಿ ಕೇಸ್ ನಿಂದ ತಪ್ಪಿಸಿಕೊಳ್ಳಲಾಗದು.
ಚುನಾವಣಾ ವರ್ಷದಲ್ಲಿ ಡಿಕೆಶಿ ದಾಳಿಯಿಂದ ಪಕ್ಷಕ್ಕೆ ಹಾನಿಯಾಗುವ ಬಗ್ಗೆಯೂ ಚಿಂತನೆ ನಡೆದಿದ್ದು ಡಿಕೆಶಿ ರಾಜೀನಾಮೆ ಪಡೆಯುವ ಬಗ್ಗೆಯೂ ಕಾಂಗ್ರೆಸ್ ಚಿಂತಿಸುತ್ತಿದೆ . ರಾಜೀನಾಮೆ ಪಡೆದರೂ, ಪಡೆಯದಿದ್ದರೂ ಅಥವಾ ಡಿಕೆಶಿ ಬಂಧನವಾಗಲಿ, ಆಗದಿರಲಿ ಕಾಂಗ್ರೆಸ್ ಗೆ ಮಾತ್ರ ಈ ಪ್ರಕರಣ ಬಿಜೆಪಿಗೆ ಜನಾರ್ಧನರೆಡ್ಡಿ ಕೇಸ್ ಕಾಡಿದಂತೆ ಕಾಡಲಿದೆ. ಆದರೆ, ಡಿಕೆಶಿ ಬೇಟೆಯ ಲಾಭ ಮಾತ್ರ ಬಿಜೆಪಿಗೆ ಆಗುವುದಿಲ್ಲ. ಬದಲಾಗಿ ಜೆಡಿಎಸ್ ಗೆ ಆಗಲಿದೆ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
ಹೌದು, ಒಕ್ಕಲಿಗರ ಪ್ರಾಭಲ್ಯವಿರುವ ಬೆಂಗಳೂರು, ಮೈಸೂರು ಭಾಗದಲ್ಲಿ ದೇವೇಗೌಡರ ಕುಟುಂಬಕ್ಕೆ ಪರ್ಯಾಯ ನಾಯಕನಾಗಿ ಬೆಳೆದವರು ಡಿಕೆಶಿ. ಆ ಮೂಲಕ ಜೆಡಿಎಸ್ ಶಕ್ತಿ ಕುಂದಿಸುವಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರವಹಿಸಿದ್ದರು. ಪರಿಣಾಮ ಪದೇ ಪದೇ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿಕೆಶಿ ಮದ್ಯೆ ವಾರ್ ನಡೆಯುತ್ತಲೇ ಇತ್ತು. ಕೆಲ ದಿನಗಳ ಹಿಂದಷ್ಟೇ ನಾನು ಉನ್ನತ ಸ್ಥಾನಕ್ಕೇರುವಾಗ ಸಮುದಾಯ ಬೆನ್ನೆಲುಬಾಗಿ ನಿಲ್ಲಬೇಕೆನ್ನುವ ಮೂಲಕ ನಾನೂ ಸಿಎಂ ಆಗ್ತೀನಿ ಅನ್ನುವ ಸಂದೇಶವನ್ನು ರವಾನಿಸಿದ್ದರು ಡಿಕೆಶಿ. ಡಿಕೆಶಿಯ ಗತ್ತಿನ ಮಾತು ಜೆಡಿಎಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ಇದೀಗ ಡಿಕೆಶಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಜೈಲು ಪಾಲಾಗುವ ಭೀತಿಯೂ ಎದುರಾಗಿದೆ. ಜೈಲು ಪಾಲಾಗದಿದ್ದರೂ ಮುಖ್ಯಮಂತ್ರಿಯಂಥ ಸ್ಥಾನವಂತೂ ಡಿಕೆಶಿಗೆ ಪಾಲಿಗೆ ಈಗ ಗಗನಕುಸುಮವೇ ಸರಿ. ಮತ್ತೊಂದು ಕಡೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವೂ ಸಹ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಡಿಕೆಶಿಯನ್ನು ಮುನ್ನೆಲೆಗೆ ಬಿಟ್ಟುಕೊಳ್ಳುವುದು ಕಷ್ಟ. ಇದು ಜೆಡಿಎಸ್ ಪಾಲಿಗೆ ವರದಾನವಾಗಲಿದೆ. ಮತ್ತೊಂದು ಕಡೆ ಡಿಕೆಶಿ ಸಾಮ್ರಾಜ್ಯದ ಮೇಲೆ ದಾಳಿ ಇಟ್ಟು ಪ್ರಬಲ ಒಕ್ಕಲಿಗ ನಾಯಕನನ್ನು ಕೇಂದ್ರ ಬಿಜೆಪಿ ಮಟ್ಟಹಾಕಿದೆ ಎಂಬ ಕಾರಣಕ್ಕೆ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ಧ ಕೆಂಗಣ್ಣು ಬೀರಲಿದೆ.
ಡಿಕೆಶಿ ಅವರ ಅಮ್ಮ ಗೌರಮ್ಮ ಅವರ ಹೇಳಿಕೆಯನ್ನು ಗಮನಿಸಿದರೆ ಇಡೀ ಸಮುದಾಯ ಕಾಂಗ್ರೆಸ್ ಹಾಗೂ ಸಿಎಂ ಸಿದ್ಧರಾಮಯ್ಯ ವಿರುದ್ಧವೂ ತಿರುಗಿ ಬೀಳುವುದು ಸ್ಪಷ್ಟವಾಗಿದೆ. ಆಗ ಸಹಜವಾಗಿಯೇ ಒಕ್ಕಲಿಗ ಸಮುದಾಯದ ಅಧಿನಾಯಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಒಕ್ಕಲಿಗ ಸಮುದಾಯ ಒಕ್ಕೋರಲಿನಿಂದ ಬೆಂಬಲ ನೀಡಲಿದೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ ಬೆಂಗಳೂರು, ಮೈಸೂರು ಭಾಗದಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂಬುದು ರಾಜಕೀಯ ವಿಶ್ಲೇಷಕರು, ಹಿರಿಯ ಪತ್ರಕರ್ತರ ಅಭಿಪ್ರಾಯವಾಗಿದೆ.
ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40 ಸ್ಥಾನಗಳನ್ನು ಪಡೆದಿದ್ದರೆ ಕೆಜೆಪಿ 06, ಬಿಎಸ್ ಆರ್ ಪಕ್ಷ 4ಸ್ಥಾನ ಪಡೆದಿದ್ದವು. ಆದರೆ, ಬರುವ ಚುನಾವಣೆಯಲ್ಲಿ ಚಿತ್ರಣ ಸಂಪೂರ್ಣ ಬದಲಾಗಲಿದೆ. ಜೆಡಿಎಸ್ ಶಾಸಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆಯಿದೆ. ಪರಿಣಾಮ ಮತ್ತೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರೂ ಅಚ್ಚರಿ ಪಡಬೇಕಿಲ್ಲ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
-ಸಂ