ಯಾದಗಿರಿಃ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು
ಶಹಾಪುರಃ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು
ಶಹಾಪುರ: ಹೊಲವೊಂದರಲ್ಲಿ ದನ ಮೇಯಿಸಲು ತೆರಳಿದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಅಯ್ಯಪ್ಪ (22)ಎಂಬ ಯುವಕನೇ ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟ ದುರ್ದೈವಿ. ಈತ ಬೆಳಗ್ಗೆ ತಮ್ಮ ದನಕರುಗಳನ್ನು ಹೊಡೆದುಕೊಂಡು ಮೇಯಿಸಲು ತೆರಳಿದ್ದಾಗ, ಹೊಲದ ದಂಡೆಯಲ್ಲಿರುವ ಹಳ್ಳದ ಹತ್ತಿರ ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಅವಘಡ ನಡೆದಿದೆ. ಹಳ್ಳದ ಸಮೀಪ ಮೇನ್ ಲೈನ್ ವಿದ್ಯುತ್ ವೈರ್ ತೂಗು ಬಿದ್ದಿದ್ದು, ಅಯ್ಯಪ್ಪ ವೈರಿನ ಸಮೀಪ ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಘಟನೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹೀಗಾಗಿ ಯುವಕ ಸ್ಥಳದಲ್ಲಿಯೇ ಸಾವನ್ನಪಿದ ದುರ್ಘಟನೆ ಜರುಗಿದೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತ ದೇಹವನ್ನು ಶವ ಪರೀಕ್ಷೆ ಕೇಂದ್ರಕ್ಕೆ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿರುವುದು ಕಂಡು ಬಂದಿತು.