ತರಕಾರಿ ಮಾರಾಟಕ್ಕೆ ನಿಂತ ಶಾಲಾ ಮಕ್ಕಳು.!
ತರಕಾರಿ ವ್ಯಾಪಾರ ವಹಿವಾಟು ನಡೆಸಿದ ಚಿಣ್ಣರು
ಯಾದಗಿರಿಃ ತಮಟೆ 10 ಕೆ.ಜಿ. ಹುಳ್ಳಾಗಡ್ಡಿ 40 ರೂ. ಕೆಜಿ, ಈರಿಕಾಯಿ 40 ರೂ.ಕೆ.ಜಿ. ಅಮ್ಮ ನಮ್ಮ ಹತ್ರ ತಗೊಳ್ರಿ ಉತ್ತಮ ತರಕಾರಿ ಇದೆ. ಸಮರ್ಪಕ ತೂಕ ಕೊಡ್ತೀವಿ ಎಂದು ಮಕ್ಕಳು ಬಾಯ್ತೆರೆದು ಕೂಗುತ್ತಿದ್ದಾರೆ. ತಾಯಂದಿರು ಯಾವ ಮಕ್ಕಳ ಹತ್ರ ತರಕಾರಿ ತೊಗೋಬೇಕು ಎಂಬುದು ತಿಳಿಯದೆ ಎಲ್ಲಾ ಮಕ್ಕಳಲ್ಲಿ ಒಂದಿಷ್ಟು ಮಾತಾಡಿ ಮುದ್ದಾಡ್ತಾ ತರಕಾರಿ ಖರೀದಿಸಿದರು.
ಹೌದು.. ಇದು ಜಿಲ್ಲೆಯ ಶಹಾಪುರ ನಗರದ ಬಚಪನ್ ಶಾಲಾ ಮಕ್ಕಳಿಂದ ಆವರಣದಲ್ಲಿ ವ್ಯಾಪಾರ ವಹಿವಾಟು ಬಗ್ಗೆ ಮಕ್ಕಳಿಗೆ ಒಂದಿಷ್ಟು ಜ್ಞಾನ ನೀಡುವ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿ ಮಕ್ಕಳಿಂದ ತರಕಾರಿ ವ್ಯಾಪಾರ ವಹಿವಾಟು ಮಾಡಲು ಕೃತಕ ಸಂತೆಯ ವ್ಯವಸ್ಥೆ ಮಾಡಿದ್ದರು.
ಕೆಜಿ ಮಕ್ಕಳಿಂದ ಪ್ರಾಥಮಿಕ ಶಾಲಾ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಪಾಲಕರು, ಪೋಷಕರೇ ಈ ಸಂತೆಯಲ್ಲಿ ಗ್ರಾಹಕರಾಗಿ ಭಾಗವಹಿಸಿದ್ದರು. ಶಾಲಾ ಆವರಣದಲ್ಲಿ ಅಕ್ಷರಶಃ ಸಂತೆಯಂತೆ ಕಂಡು ಬಂದಿದ್ದು, ತರಕಾರಿ ಖರೀಧಿಸುವದನ್ನು ಬಿಟ್ಟ ಪಾಲಕರು ಮಕ್ಕಳ ವ್ಯಾಪಾರ ಲೆಕ್ಕಚಾರ ಕುರಿತು ಉಬ್ಬೇರಿಸುವಂತೆ ಮಾಡಿತು. ಮಕ್ಕಳು ತಮ್ಮ ವ್ಯಾಪಾರ ಜೋರಾಗಿದೆ ಎಂದು ಲೆಕ್ಕದಲ್ಲಿ ಮುಳುಗಿದ್ದರೆ, ತಾಯಂದಿರು ಮಕ್ಕಳ ಲೆಕ್ಕಾಚಾರ ವ್ಯಾಪಾರ ಚಾಕಚಕ್ಯತೆ ಕಂಡು ಸಂತಸ ಪಟ್ಟರು.
ಚಿಕ್ಕಂದಿನಿಂದಲೇ ಮನೆಗೆ ತರಕಾರಿ ತರುವ ವ್ಯಾಪಾರ ವಹಿವಾಟು ಬಗ್ಗೆ ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿ ಕೊಡುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು. ಮಕ್ಕಳಿಗೆ ತರಕಾರಿ ಖರೀದಿ, ಮಾರಾಟ ಕುರಿತು ಪ್ರಾಯೋಗಿಕ ಜ್ಞಾನ ಅರಿವು ಮೂಡಿಸಲು ಈ ಕಾರ್ಯಕ್ರಮ ಯಶಸ್ವಿಯಾಗಿದೆ.
–ಶಿವಕುಮಾರ ಆದೋನಿಮಠ.
ಬಚಪನ್ ಶಾಲೆ ಮುಖ್ಯಸ್ಥ.