ಪ್ರಮುಖ ಸುದ್ದಿ

YADGIRI- ಕೋವಿಡ್-19 ಟೆಸ್ಟ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಯಾದಗಿರಿ– ಕೋವಿಡ್-19 ಪರಿಣಾಮಕಾರಿ ತಡೆಗೆ ಕೊರೊನಾ ಸೋಂಕಿತರನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಕೋವಿಡ್ ಟೆಸ್ಟ್)ಗಳನ್ನು ನಡೆಸಿ, ಸ್ಥಳದಲ್ಲಿಯೆ ವರದಿಗಳನ್ನು ನೀಡಲಾಗುತ್ತಿದ್ದು, ಪ್ರಯುಕ್ತ ನಗರದ ಅಜೀಜ್ ಕಾಲೊನಿಯಲ್ಲಿರುವ ಉರ್ದು ಶಾಲೆಯ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಂಟಲು ದ್ರವ ಮಾದರಿ ಸಂಗ್ರಹಿಸುವ ತಂಡದ ತಪಾಸಣೆ ಕಾರ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವುದನ್ನು ಕಂಡು ಶ್ಲಾಘಿಸಿದರು. ಗಂಟಲು ದ್ರವ ತಪಾಸಣೆ ಮಾಡಿದ ನಂತರ ಅದನ್ನು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರೆ ಮಾಹಿತಿಯ ಡಾಟಾ ಎಂಟ್ರಿ ಮಾಡಬೇಕು.

ನಂತರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‍ನಲ್ಲಿ ಗಂಟಲು ದ್ರವ ತಪಾಸಣೆಯ ವರದಿ ನಕಾರಾತ್ಮಕ ಬಂದು, ಆ ವ್ಯಕ್ತಿಗೆ ರೋಗ ಲಕ್ಷಣಗಳೇನಾದರೂ ಇದ್ದಲ್ಲಿ ಅದನ್ನು ಪುನಃ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕೈಗೊಳ್ಳತಕ್ಕದ್ದು. ಒಂದು ವೇಳೆ ಸಕಾರಾತ್ಮಕ ವರದಿ ಬಂದರೆ ಅದನ್ನು ಮತ್ತೆ ಆರ್.ಟಿ.ಪಿ.ಸಿ.ಆರ್ ನಲ್ಲಿ ಪರೀಕ್ಷೆ ನಡೆಸುವ ಅಗತ್ಯ ಇರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪಾಸಿಟಿವ್ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರು, 65 ವಯಸ್ಸು ಮೇಲ್ಪಟ್ಟವರು, ಗರ್ಭಿಣಿಯರು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ತೊಂದರೆ, ಅಸ್ತಮಾ, ಹೃದಯ ತೊಂದರೆ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಗಳಿದ್ದವರನ್ನು ಸಹ ಪರೀಕ್ಷೆಗೆ ಒಳಪಡಿಸಬೇಕೆಂದು ತಿಳಿಸಿದರು.
ಕೋವಿಡ್-19 ನಿಯಂತ್ರಣದಲ್ಲಿ ವಾರ್ಡ್ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಹಾಗೂ ಇನ್ನಿತರೆ ಸ್ಥಳೀಯ ನಾಯಕರುಗಳ ಪಾಲ್ಗೊಳ್ಳುವಿಕೆ ಅಗತ್ಯವಾಗಿರುತ್ತದೆ ಎಂದು ತಿಳಿಸಿದರು. ಅಲ್ಲದೇ, ಮೊಬೈಲ್ ತಂಡಗಳು ಆದ್ಯತೆ ಮೇರೆಗೆ ಕ್ಲಸ್ಟರ್, ನಿರ್ಬಂಧಿತ ವಲಯಗಳ ಮಾಹಿತಿಯನ್ನು ವಾರದೊಳಗಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಯಾದಗಿರಿ ನಗರಸಭೆ ಪ್ರಭಾರ ಪೌರಾಯುಕ್ತರಾದ ಬಕ್ಕಪ್ಪ ಅವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button