ಹೆಚ್ಚುತ್ತಿರುವ ಕೊರೊನಾ ಸೋಂಕು ಖರ್ಗೆ ಕಳವಳ, ಡಿಸಿಎಂ, ಸಿಎಂ ಗೆ ಪತ್ರ
ಕಲಬುರಗಿಃ ಹೆಚ್ಚುತ್ತಿರುವ ಕೋವಿಡ್ 19 ಸೋಂಕಿತರು – ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಕಳವಳ.. ಸಮರ್ಪಕ ಚಿಕಿತ್ಸೆ ಹಾಗೂ ಸೌಲಭ್ಯ ಒದಗಿಸುವಂತೆ ಸಿಎಂ ಹಾಗೂ ಡಿಸಿಎಂ ಗೆ ಪತ್ರ ಬರೆದು ಆಗ್ರಹ.
ಮಾರ್ಚ್ ತಿಂಗಳಲ್ಲಿ ದೇಶದ ಮೊಟ್ಟಮೊದಲ ಕೋವಿಡ್ 19 ಸೋಂಕು ಕಲಬುರಗಿಯಲ್ಲಿ ವರದಿಯಾಗಿದ್ದರೂ ಕೂಡಾ ರಾಜ್ಯ ಸರಕಾರ ಈ ವಿಚಾರವನ್ನು ಗಂಭೀರ ವಾಗಿ ಪರಿಗಣಿಸಿ ಕ್ರಮ ಕೊಳ್ಳದೆ ಇದ್ದುದರಿಂದ ಕಲಬುರಗಿಯಲ್ಲಿ ದಿನೇ ದಿನೇ ಸೋಂಕಿತರು ಹೆಚ್ಚುತ್ತಿದ್ದಾರೆ ಎಂದು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಕೋವಿಡ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವುದರ ಜೊತೆಗೆ ನಾನ್ ಕೋವಿಡ್ ರೋಗಿಗಳಿಗೂ ಕೂಡಾ ಸೌಲಭ್ಯ ಹಾಗೂ ಚಿಕಿತ್ಸೆ ದೊರಕಿಸುವಂತೆ ಶಾಸಕರು ಸಿಎಂ ಯಡಿಯೂರಪ್ಪ ಹಾಗೂಡಿಸಿಎಂ ಗೋವಿಂದ್ ಕಾರಜೋಳ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಸಾವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕೋವಿಡ್ ಹಾಗೂ ಕೊರೋನಾಯೇತರ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಾಗಿದೆ.ಜೊತೆಗೆ, ಔಷಧಿಗಳು ಹಾಗೂ ಆಂಬುಲೆನ್ಸ್ ಸೇವೆಗಳು ಸರಿಯಾದ ಸಮಯಕ್ಕೆ ದೊರಕುತ್ತಿಲ್ಲ. ಕೆಲವು ತುರ್ತು ಶಸ್ತ್ರ ಚಿಕಿತ್ಸೆಗಳನ್ನು ಸಹ ಸೌಕರ್ಯಗಳ ಕೊರತೆಯಿಂದ ಮುಂದೂಡಲಾಗುತ್ತಿದೆ ಎಂದು ಶಾಸಕರು ದೂರಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ದಿನನಿತ್ಯ ಸಾವಿರಾರು ಜನರು ಕೊರೋನಾ ಪರೀಕ್ಷೆಗೆ ಒಳಗಾಗುತ್ತಿದ್ದು, ESIC ಆಸ್ಪತ್ರೆಗೆ ಪ್ರಕರಣಗಳನ್ನು ಪರೀಕ್ಷಿಸಲು ಹೆಚ್ಚುವರಿ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡುವಂತೆ ಈ ಹಿಂದೆಯೂ ಕೋರಿಕೊಳ್ಳಲಾಗಿತ್ತು ಆದರೂ ಕೂಡಾ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸರಕಾರದ ಧೋರಣೆಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ಪರೀಕ್ಷಾ ವರದಿಗಾಗಿ ವಾರಗಟ್ಟಲೇ ಕಾಯಬೇಕಾಗಿದ್ದು, ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರಕದಂತಾಗಿದೆ. ಜೊತೆಗೆ
ಕೊರೋನಾಯೇತರ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾದ ವೇಳೆಯಲ್ಲಿ ಅಲ್ಲಿನ ಅವ್ಯವಸ್ಥೆಯಿಂದ ಅವರಿಗೂ ಕೊರೋನಾ ಸೋಂಕು ತಗಲುವ ಆತಂಕ ಎದುರಾಗಿದೆ. ನಾನ್ ಕೊವೀಡ್ ರೋಗಿಗಳಿಗೆ ಕೊವೀಡ್ ಪರೀಕ್ಷೆ ಕಡ್ಡಾಯಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ರೋಗಿಗಳು ಭಯಭೀತರಾಗಿದ್ದು, ಚಿಕಿತ್ಸೆಗಾಗಿ ಹೈದ್ರಾಬಾದ್ ಹಾಗೂ ಬೆಂಗಳೂರಿನಂತಹ ಮಹಾನಗರಗಳ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ.
ಸಾಂಸ್ಥಿಕ ಕ್ವಾರೆಂಟೈನ್ ಗಳಲ್ಲಿ ಅಸ್ತವ್ಯಸ್ತದ ಕುರಿತು ಒತ್ತಿ ಹೇಳಿರುವ ಶಾಸಕರು, ಮೂಲಭೂತ ಸೌಕರ್ಯ, ಆಹಾರ, ನೀರು, ಹಾಗೂ ಅಗತ್ಯ ಸಂದರ್ಭದಲ್ಲಿ ಚಿಕಿತ್ಸೆಯ ಕೊರತೆಯಿದ್ದು, ಅಲ್ಲಿನ ಜನರು ಸಂಕಷ್ಟದಲ್ಲಿದ್ದಾರೆ. ಇನ್ನೂ ಮನೆಯಲ್ಲಿ ಕ್ವಾರಂಟೈನ್ ಆಗಿರುವ ರೋಗಿಗಳು ಪ್ರತಿದಿನ ಬದಲಾಗುತ್ತಿರುವ ಸರ್ಕಾರದ ಮಾರ್ಗಸೂಚಿಗಳಿಂದ ತೊಂದರೆಗೀಡಾಗುತ್ತಿದ್ದಾರೆ.
ಪ್ರತಿಯೊಂದು ಮಾರ್ಗಸೂಚಿಗಳಿಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕಷ್ಟಕರವಾಗುತ್ತಿದೆ ಎಂದಿದ್ದಾರೆ.
ಕಲಬುರಗಿಯ GIMS ICUನಲ್ಲಿ ಕೇವಲ 45 ಹಾಸಿಗೆಯ ಸೌಕರ್ಯವಿದ್ದು, ನ್ಯುಮೋನಿಯಾ ಹಾಗೂ ಇತರೆ ಗಂಭೀರ ಖಾಯಿಲೆಯಿಂದ ಆಸ್ಪತ್ರೆಗೆ ಒಳಪಡುವ ರೋಗಿಗಳಿಗೆ ICUನಲ್ಲಿ ಪ್ರವೇಶ ದೊರಕದಂತಾಗಿದೆ. ಇದರೊಂದಿಗೆ, ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಎದುರಾಗಿದೆ.
ಕೇವಲ ಸಾರ್ವಜನಿಕರಲ್ಲದೇ, ಸರ್ಕಾರಿ ನೌಕರರು, ಪೊಲೀಸರು ಸೇರಿದಂತೆ ಇತರೆ ಕೊರೋನಾ ವಾರಿಯರ್ಸ್‌ಗಳೂ ಕೊರೋನಾಗೆ ತುತ್ತಾಗಿದ್ದು ರೋಗಿಗಳ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಚಿಕಿತ್ಸೆ ದೊರಕದಂತಾಗಿದೆ.
ಈ ಎಲ್ಲಾ ಕಾರಣಗಳಿಂದ ಜಿಮ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳು ಕಡಿಮೆ ಪ್ರಮಾಣದಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸಿಗೆಗಳು, ವಿಶೇಷವಾಗಿ ಆಕ್ಸಿಜನ್ & ವೆಂಟಿಲೇಟರ್ ಸೌಲಭ್ಯದೊಂದಿಗೆ ಐಸಿಯು ಹಾಸಿಗೆಗಳ ಹೆಚ್ಚಿನ ಅವಶ್ಯಕತೆಯಿದೆ.
ಹೆಚ್ಚುತ್ತಿರುವ ಕೋವಿಡ್ 19 ರೋಗಿಗಳಿಗೆ ತುರ್ತು ಹಾಗೂ ಸೂಕ್ತ ಚಿಕಿತ್ಸೆ ನೀಡಲು ಕಲಬುರಗಿ ಜಿಲ್ಲೆಯಲ್ಲಿ ಇರುವ ನಾಲ್ಕು ವೈದ್ಯಕೀಯ ಕಾಲೇಜುಗಳು ಹಾಗೂ ಬೃಹತ್ ESIC ಆಸ್ಪತ್ರೆ ಮತ್ತು ಇನ್ನಿತರೆ ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರದ ವತಿಯಿಂದ ಕ್ರಮಕೈಗೊಳ್ಳಬೇಕು.
ಕಲಬುರಗಿಯಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಶ್ರೀಪ್ರಿಯಾಂಕ್ ಖರ್ಗೆ ಆಗ್ರಹಿದ್ದಾರೆ.