ಬಿಜೆಪಿ ನಾಯಕರಿಂದ ಚುನಾವಣಾ ಗಿಮಿಕ್ -ಪ್ರಿಯಾಂಕ್ ಖರ್ಗೆ ಆರೋಪ
ಯಾದಗಿರಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪಕ್ಷವು ಕೋಮು ಭಾವನೆ ಧಕ್ಕೆ ತರುವ ಕೆಲಸ ಮಾಡಿ ಹಿಂದುಗಳ ಮತ ಸೆಳೆಯುವ ಕೆಲಸಕ್ಕೆ ಕೈಹಾಕಿದ್ದು ಬಿಜೆಪಿ ನಾಯಕರು ಗಿಮಿಕ್ ರಾಜಕೀಯ ಮಾಡುತ್ತಿದ್ದಾರೆ ಇದು ಸರಿಯಲ್ಲವೆಂದು ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಹರಿಹಾಯ್ದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿರಾಟ್ ಹಿಂದು ಸಮಾವೇಶದಲ್ಲಿ ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರು ಪ್ರಚೋದನಾಕಾರಿ ಭಾಷಣ ಮಾಡಿದಕ್ಕೆ ಖಂಡಿಸಿದರು. ಒಬ್ಬ ಜವಾಬ್ದಾರಿ ಶಾಸಕರಾಗಿ ಸಮಾಜದ ಶಾಂತಿ ಕಾಪಾಡುವ ಕೆಲಸ ಮಾಡುವುದು ಬಿಟ್ಟು ರಾಜಾಸಿಂಗ್ ಅವರು ವಿವದಾತ್ಮಕ ಹೇಳಿಕೆ ನೀಡಿ ತಮ್ಮ ಅವಿವೇಕಿತನ ತೋರಿಸುವ ಕೆಲಸ ಮಾಡಿದ್ದಾರೆ.
ಬಿಜೆಪಿ ನಾಯಕರು ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದ ಪ್ರತಾಪ್ ಸಿಂಹ ಅವರು ಹಿಂದೂಗಳಿಗೆ ಪ್ರಚೋದನೆ ನೀಡುವ ಮಾತನಾಡಿ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಇಂತಹವರನ್ನು ಜನರು ಆರಿಸಿ ಕಳುಹಿಸಿದ್ದು ದುರ್ದೈವದ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.