ಪ್ರಮುಖ ಸುದ್ದಿ

ಅಧಿಕಾರ ದಾಹಕ್ಕೆ ಪ್ರಮಾಣ ಮಾಡುವದು ಪ್ರಜಾಪ್ರಭುತ್ವಕ್ಕೆ ಧಕ್ಕೆ – ಮುಡಬೂಳ ಖೇದ

ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ

ಯಾದಗಿರಿ, ಶಹಾಪುರಃ ರಾಷ್ಟ್ರ ಮತ್ತು ರಾಜ್ಯಾಡಳಿತದ ಅಧಿಕಾರಕ್ಕಾಗಿ ದೇವರ ಹೆಸರಿನಲ್ಲಿ, ರೈತರ ಹೆಸರಿನಲ್ಲಿ ಆಣೆ ಪ್ರಮಾಣಗಳನ್ನು ಮಾಡುವ ಇಂದಿನ ಜನಪ್ರತಿನಿಧಿಗಳು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಹಿರಿಯ ವಕೀಲ, ಪ್ರಗತಿ ಪರ ಚಿಂತಕ ಭಾಸ್ಕರರಾವ್ ಮುಡಬೂಳ ಖೇದ ವ್ಯಕ್ತಪಡಿಸಿದರು.

ದೆಹಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ನಗರದಲ್ಲಿ ರೈತ ಹಿತ ರಕ್ಷಣಾ ಸಮಿತಿ ಮಂಗಳವಾರ ಹಮ್ಮಿಕೊಂಡ ಟ್ರ್ಯಾಕ್ಟರ್ ರ್ಯಾಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡು ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ರೈತರ ಸಂಕಷ್ಟ ಕಡೆಗಣಿಸಿ, ದುರ್ಬಲ, ರೈತರ ಸ್ಥಿತಿಗತಿಗಳನ್ನು ಲೆಕ್ಕಿಸದೆ ದೇಶದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರ ಆಡಳಿತ ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ದೆಹಲಿಯಲ್ಲಿ ಕಳೆದ ಒಂದುವರೆ ತಿಂಗಳಿಂದ ರೈತರು ತಮ್ಮ ಕುಟುಂಬ ಸಮೇತ ಚಳಿ, ಮಳೆ, ಬಿಸಿಲು ಲೆಕ್ಕಿಸದರೆ ನಿರಂತರ ಧರಣಿ ನಡೆಸುತ್ತಿದ್ದು, ನೂರಾರು ಜನ ರೈತರು ಹೋರಾಟದಲ್ಲಿ ಜೀವತೆತ್ತಿದ್ದು, ದೇಶದ ಪ್ರಧಾನಿಯವರಿಗೆ ಕಿಂಚಿತ್ತಾದರೂ ಕಾಳಜಿ ಇಲ್ಲ. ಕೇವಲ ಬಂಡವಾಳ ಶಾಹಿಗಳು ಮತ್ತು ಕಂಪನಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವಲ್ಲಿಯೇ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ರೈತರ ಸಾಲ ಮನ್ನಾ ಮಾಡಿರುವದು ಬಂಡವಾಳಶಾಹಿಗಳ ಮಹೋನ್ನತಿಗಾಗಿಯೇ ಹೊರತು ರೈತರ ಅನುಕೂಲಕ್ಕಾಗಿಯಲ್ಲ ಎಂಬುದನ್ನು ನೂತನ ಕಾಯ್ದೆ ಜಾರಿಗೊಳಿಸುವ ಮೂಲಕ ಸಾಬೀತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ರೈತರಿಗೆ ಬೆಂಬಲ ಬೇಲೆ ನೀಡಿ, ಕನಿಷ್ಟ ಬೆಳೆಗೆ ಬೆಲೆ ನಿಗದಿಗೊಳಸಿದಲ್ಲಿ ಮಾತ್ರ ರೈತರ ಸಮೃದ್ಧಿ ಸಾಧ್ಯವಿದೆ. ಕೇವಲ 5 ಲಕ್ಷ,ರೂ. ಬೆಂಬಲ ಬೆಲೆ ಮಾಡಿಕೊಂಡು ಕರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟಿಸಿದ ರೈತರ ಮೇಲೆ ಲಾಠಿ ಪ್ರಹಾರ ಮಾಡುವ ಸರ್ಕಾರ ರೈತರ ಕಾಳಜಿ ವಹಿಸುತ್ತಿದಯೇ? ಎಂದು ಪ್ರಶ್ನಿಸಿದರು. ರೈತ ಮುಖಂಡ ಶರಣಪ್ಪ ಸಲಾದಪುರ ಮಾತನಾಡಿ, ಪ್ರಪಂಚದಲ್ಲಿ ಹೋರಾಟದ ಹಾದಿಯ ಮುಖಾಂತರ ಸ್ವತಂತ್ರ್ಯ ಪಡೆದ ಏಕೈಕ ರಾಷ್ಟ್ರ ಭಾರತವಾಗಿದ್ದು, ನಾವು ಏನನ್ನಾದರೂ ಬೇಡಿಕೆ ಕೇಳಬೇಕಾದಲ್ಲಿ ಹೋರಾಟ ಅನಿವಾರ್ಯ. ದೇಶದಲ್ಲಿನ ಬಂಡವಾಳ ಕಂಪನಿಗಳ ಜೋಳಿಗೆ ತುಂಬಿಕೊಳ್ಳಲು, ಇಂದು ಬಿಜೋತ್ಪನ್ನಗಳ ಖರೀದಿಯಲ್ಲಿ ವ್ಯವಹಾರಗಳು ನಡೆಯುತ್ತಿವೆ ಎಂದು ದೂರಿದ ಅವರು, ಬಿಜೆಪಿ ಸರ್ಕಾರ ರೈತರಿಗೆ ಮರಣಶಾಸನ ಬರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತವಿಕವಾಗಿ ಹಿರಿಯ ವಕೀಲ ಆರ್.ಚನ್ನಬಸವ ಮಾತನಾಡಿದರು. ಮುಖಂಡರಾದ ಗಿರೆಪ್ಪಗೌಡ ಬಾಣತಿಹಾಳ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಖಾಲಿದ್‍ಸಾಬ ಮಾತನಾಡಿದರು. ವಕೀಲ ಹೇಮರಡ್ಡಿ ನಿರೂಪಿಸಿದರು. ವಕೀಲರಾದ ಅಮರೇಶ ನಾಯಕ, ಇಬ್ರಾಹಿಂಸಾಬ ವನದುರ್ಗ ಇತರರಿದ್ದರು. ಮುಂಚಿತವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ಟ್ರ್ಯಾಕ್ಟರ್‍ಗಳ ಪ್ರತಿಭಟನಾ ರ್ಯಾಲಿ ಜರುಗಿತು.

ಮಾಧ್ಯಮಗಳು ಸತ್ಯವನ್ನು ಬರೆಯುತ್ತಿಲ್ಲ..

ಇಂದು ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳು ಸತ್ಯವನ್ನು ಮರೆ ಮಾಚುತ್ತಿವೆ. ಮಾಧ್ಯಮಗಳು ಸತ್ಯ, ಪ್ರಾಮಾಣಿಕ ಬರವಣಿಗೆ ಕಾಣುತ್ತಿಲ್ಲ. ಆಕರ್ಷಕ ಬರಹ, ಪ್ರತಿಯೊಬ್ಬರು ಒಬ್ಬರನ್ನು ಪ್ರಚುರ ಪಡಿಸಿ ಬೆಳೆಸುವ ಜವಬ್ದಾರಿಯನ್ನು ಹೊತ್ತಂತಿವೆ. ಹೀಗಾಗಿ ಪ್ರಜಾಪ್ರಭುತ್ವದ ಹಾದಿ ಕುಸಿಯುತ್ತಿದೆ. ಮಾಧ್ಯಮಗಳು ಸತ್ಯಾಸತ್ಯತೆಯನ್ನು ಬರೆದಲ್ಲಿ ಮಾತ್ರ ಆಡಳಿತ ವ್ಯವಸ್ಥೆ ಬದಲಾವಣೆಯಾಗಲು ಸಾಧ್ಯವಿದೆ.
-ಭಾಸ್ಕರ್‍ರಾವ್ ಮುಡಬೂಳ. ಹಿರಿಯ ನ್ಯಾಯವಾದಿ.

—————–

Related Articles

Leave a Reply

Your email address will not be published. Required fields are marked *

Back to top button