ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ – ರೇಣುಕಾ
ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ – ರೇಣುಕಾ
yadgiri, ಶಹಾಪುರಃ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ ತೊರೆದು ನಿರಂತರ ಅಧ್ಯಯನ ಮಾಡಿದಲ್ಲಿ ಉತ್ತಮ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಧಾರವಾಡದ ತಹಸೀಲ್ದಾರರಾದ ರೇಣುಕಾ ಕಾಡಂಗೇರಾ ತಿಳಿಸಿದರು.
ತಾಲೂಕಿನ ಭೀಮರಾಯನ ಗುಡಿ ಸರ್ಕಾರಿ ಪಪೂ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಎನ್ನೆಸ್ಸೆಸ್ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಘಟಕದ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಮಹತ್ವ ಕೊಡಬೇಕು. ಪ್ರಸ್ತುತ ಡಿಜಿಟಲ್ ಸೌಲಭ್ಯ ಹೆಚ್ಚಿರುವ ಕಾರಣ ಅದರಿಂದ ಸದುಪಯೋಗ ಪಡೆದುಕೊಳ್ಳಬಹುದು. ಮೊಬೈಲ್ ನಿಂದ ಕೇವಲ ಸಂಭಾಷಣೆ, ಚಲನಚಿತ್ರಗಳು, ಸಿನಿಮಾ ಹಾಡುಗಳು ಅದು ಬಿಟ್ಟರೆ ಗೇಮ್ ಗಳನ್ನು ಆಡಲು ಮಾತ್ರ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತ ಎಷ್ಟೋ ವಿಡಿಯೋ ಗಳನ್ನು ನೋಡಬಹುದು.
ನಿಮ್ಮ ತರಗತಿಗೆ ಸಂಬಂಧಿಸಿದ ಪಾಠಗಳ ಕುರಿತು ಓದಬಹುದು ಇನ್ನೂ ಹಲವಾರು ಶೈಕ್ಷಣಿಕವಾಗಿ ನಾವು ಕಂಡುಕೊಳ್ಳಲು ಸಹಕಾರಿಯಾದಂತೆ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಆದರೆ ವಿದ್ಯಾರ್ಥಿಗಳಿ ಪ್ರಸ್ತುತ ಅವನ್ನೆಲ್ಲ ಬಿಟ್ಟು ಕೇವಲ ಮನೋರಂಜನೆಗಾಗಿ ಅದನ್ನು ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮೊಬೈಲ್‍ಗಳಿಂದ ಕಾಲೇಜಿಂದ ಮನೆಗೆ ಹೋಗುವಾಗ ಸಿಸಿ ಬಸ್‍ಗಳಲ್ಲಿ ಸಮಯ ಸಿಕ್ಕಲ್ಲಿ ಒಳ್ಳೆಯ ಅಭ್ಯಾಸಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಳುವ ಮೂಲಕ ಜ್ಞಾನ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಮನೆಯಲ್ಲಿ ಅಧ್ಯಯನ ನಿರಂತರವಾಗಿ ಮನನವಾಗುವ ವರಗೆ ಓದಬೇಕು ಆಗ ನೀವು ಕಂಡ ಗುರು ತಲುಪಲು ಸಾಧ್ಯ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕಿದೆ. ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೆ ಸಮರ್ಪಕವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅಥಿತಿಗಳಾದ ಎಂ.ಎಂ.ಹುಂಡೇಕಾರ, ಪ್ರಭಾರಿ ಪ್ರಾಂಶುಪಾಲರಾದ ಪಂಪಾಪತಿ ಶಿರ್ಣಿ ಮತ್ತು ಸನ್ಮಾನಿತ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ತಹಸೀಲ್ದಾರ ರೇಣುಕಾ ಕಾಡಂಗೇರಾ ಅವರಿಂದ ಸಂವಾದ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಇದೇ ಸಂದರ್ಭದಲ್ಲಿ ನೂತನ ಉಪನ್ಯಾಸಕರಿಗೂ ಸನ್ಮಾನಿಸಲಾಯಿತು. ಶಿವರಾಜ ಬೀರನೂರ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ದೇವಿಂದ್ರಪ್ಪ ಮಡಿವಾಳಕರ್ ನಿರೂಪಿಸಿದರು. ಉಪನ್ಯಾಸಕ ಡಾ.ರವೀಂದ್ರನಾಥ ಹೊಸಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ಸೋಮಶೇಖರ ಜಾಗಟೆ ವಂದಿಸಿದರು.
ವಿದ್ಯಾರ್ಥಿಗಳು ದಿನ ನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲವಾಗಲಿದೆ. ನಿತ್ಯ ಪತ್ರಿಕೆಗಳನ್ನು ಓದಿದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇ.30 ರಷ್ಟು ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ನಿರಂತರ ಓದಿನಿಂದ ಗುರಿ ತಲುಪಲು ಸಾಧ್ಯ. ಉಪನ್ಯಾಸಕರ ಮಾರ್ಗದರ್ಶನ ಪಡೆದು ಶೈಕ್ಷಣಿಕವಾಗಿ ಬಲಾಢ್ಯರಾಗಿ ಕಾಲೇಜು ಮತ್ತು ಹೆತ್ತವರಿಗೆ ಕೀರ್ತಿ ತನ್ನಿ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ.
-ಮಲ್ಲಿಕಾರ್ಜುನ ಮುದ್ನೂರ. ಪತ್ರಕರ್ತ.ಶಹಾಪುರ.