ಪುರಂದರ ದಾಸರ ಆರಾಧನೆ ನಿಮಿತ್ಯ ಈ ಲೇಖನ
-ರಾಘವೇಂದ್ರ ಹಾರಣಗೇರಾ
ಸುಮಾರು 15ನೇ ಶತಮಾನದಿಂದ 20ನೇ ಶತಮಾನದವರೆಗೆ ಹಬ್ಬಿಕೊಂಡಿದ್ದ ಹರಿದಾಸ ಸಾಹಿತ್ಯದಲ್ಲಿ 300ಕ್ಕಿಂತ ಅಧಿಕ ಹರಿದಾಸರು, ಕೆಲವೇ ಹರಿಭಕ್ತ ಪಾರಾಯಣಿಯರು ದೊರೆಯುತ್ತಾರೆ. ಶ್ರೀಪಾದರಾಯರಿಂದ ಆರಂಭವಾದ ಹರಿದಾಸ ಸಾಹಿತ್ಯದ ಕೃಷಿಯ ಮೊದಲ ಘಟ್ಟದಲ್ಲಿ ಶ್ರೀಪಾದರಾಯರು, ವ್ಯಾಸರಾಯರು, ವಾದಿರಾಜರು, ಪುರಂದರದಾಸರು, ಕನಕದಾಸರು, ಬೇಲೂರು ವೈಕುಂಠದಾಸರು ಮುಂತಾದ ದಾಸಶ್ರೇಷ್ಠರು ಬರುತ್ತಾರೆ.
ಮಧ್ಯಯುಗದ ಕರ್ನಾಟಕದ ಚರಿತ್ರೆಯಲ್ಲಿ ಸಾಮಾಜಿಕ ಆಂದೋಲನದ ದೃಷ್ಠಿಯಿಂದ ಹರಿದಾಸರು ವಹಿಸಿದ ಪಾತ್ರ ಬಹುಮಹತ್ವದ್ದಾಗಿದೆ. ಹರಿದಾಸರು ರಚಿಸಿದ ಸಾಹಿತ್ಯವು ಅಷ್ಟೇ ಮೌಲಿಕವಾದದ್ದು ಮತ್ತು ಅವರು ತಮ್ಮ ಕೃತಿಗಳ ಮೂಲಕ ಜನತೆಗೆ ನೀಡಿದ ಧಾರ್ಮಿಕ ಶಿಕ್ಷಣದಲ್ಲಿ ಜ್ಞಾನ, ಭಕ್ತಿ, ವೈರಾಗ್ಯಗಳಿಗೆ ವಿಶೇಷ ಒತ್ತು ಇತ್ತಾದರೂ, ಅದು ಎಲ್ಲಿಯೂ ಜೀವನದಿಂದ ಅಥವಾ ಬದುಕಿನಿಂದ ವಿಮುಖವಾಗದಿರುವುದು ಅದರ ವೈಶಿಷ್ಟ್ಯವಾಗಿದೆ.
ಸಾಹಿತ್ಯ, ಸಂಗೀತ, ಸಂಸ್ಕøತಿ ಮತ್ತು ಅಧ್ಯಾತ್ಮಿಕ ಕ್ಷೇತ್ರದಲ್ಲಿ ದಾಸಶ್ರೇಷ್ಠರಲ್ಲಿ ಒಬ್ಬರಾದ ಪುರಂದರದಾಸರು ಮಾಡಿದ ಸಾಧನೆ, ನೀಡಿದ ಬೆಳಕು ಅದ್ಭುತವಾದದ್ದು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ನೋಡಿದಾಗ ಒಂದೊಂದು ಪ್ರಕಾರಕ್ಕೂ ಒಬ್ಬೊಬ್ಬ ಪ್ರತಿನಿಧಿಗಳು ಕಂಡುಬರುತ್ತಾರೆ. ಚಂಪುಗೆ ಪಂಪ, ರಗಳೆಗೆ ಹರಿಹರ, ಷಟ್ಪದಿಗೆ ಕುಮಾರವ್ಯಾಸ, ವಚನಕ್ಕೆ ಬಸವಾದಿ ಶರಣರು ಹೇಗೋ ಹಾಗೆಯೇ ಕೀರ್ತನೆಗೆ ಪುರಂದರದಾಸರು ಒಬ್ಬರಾಗಿದ್ದಾರೆ.
ವ್ಯಾಸರಾಯರ ಶಿಷ್ಯರಾಗಿ ಮಿನುಗಿದ ಎರಡು ನಕ್ಷತ್ರಗಳಲ್ಲಿ ಒಬ್ಬರು ಪುರಂದರದಾಸರು, ಇನ್ನೊಬ್ಬರು ಕನಕದಾಸರು. ಇವರಿಬ್ಬರೂ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಖ್ಯಾತಿಯನ್ನು ಪಡೆದಿದ್ದಾರೆ. ‘ಪುರಂದರ ವಿಠ್ಠಲ’ ಎಂಬ ಅಂಕಿತದಲ್ಲಿ ತಮ್ಮ ಕೀರ್ತನ ಕೈಂಕರ್ಯವನ್ನು ನೆರವೇರಿಸಿದ ಪುರಂದರ ದಾಸರು ಬರೆದ ಕೀರ್ತನೆಗಳನ್ನು ‘ಪುರಂದರ ಉಪನಿಷತ್’ ಎಂದು ಗೌರವಿಸಲಾಗಿದೆ.
ಇವರ ರಚನೆಗಳು 4 ಲಕ್ಷದ 75 ಸಾವಿರ ಕೀರ್ತನೆಗಳಿವೆ ಎಂದು ಹೇಳಲಾಗುತ್ತದೆ. ಕೇದಾರದಿಂದ ರಾಮೇಶ್ವರದವರೆಗೆ ಪ್ರತಿ ಕ್ಷೇತ್ರದ ವರ್ಣನೆ, ಪದಸಂಖ್ಯೆ 1 ಲಕ್ಷದ 25 ಸಾವಿರ, ಮಧ್ವರಾಯರಿಂದ ಗುರುವ್ಯಾಸರಾಯರ ಪರ್ಯಂತ ಗುರುಗಳ ಸ್ತವನ 25 ಸಾವಿರ, ಬ್ರಹ್ಮಲೋಕ, ಕೈಲಾಸ, ದಿಕ್ಪಾಲಕರ ಮಹಿಮೆ 90 ಸಾವಿರ, ಭಗವದ್ಭಕ್ತ ಕಥಾಸಾರ 90 ಸಾವಿರ, ಆಯಾ ದೇವತೆಗಳ ಮೂರ್ತಿಧ್ಯಾನ, ಕೀರ್ತಿ, ಮಹಿಮಾ ಇತ್ಯಾದಿಗಳು 60 ಸಾವಿರ, ಸೂಳಾದಿ 60 ಸಾವಿರ, ದೇವರ ನಾಮಗಳು 25 ಸಾವಿರ, ಶ್ವೇತ ದೀಪ, ಅನಂತಾಸನ, ವೈಕುಂಠ ಮಹಿಮೆ, ಶೇಷನ ಚರಿತ್ರೆ ಮುಂತಾದವುಗಳು. ಆದರೆ ಈಗ ಸಿಕ್ಕಿರುವ ಕೀರ್ತನೆಗಳ ಸಂಖ್ಯೆ 1 ಸಾವಿರಕ್ಕೂ ಅಧಿಕವೆಂದು ಹೇಳಲಾಗಿದೆ.
ದಾಸರೆಂದರೆ ಪುರಂದರ ದಾಸರಯ್ಯ ಎಂದು ತಮ್ಮ ಗುರು ವ್ಯಾಸರಾಯರಿಂದಲೇ ಹೊಗಳಿಸಿಕೊಂಡ ಪುರಂದರ ದಾಸರು ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಅತ್ಯಧಿಕ ಸೇವೆಯನ್ನು ಸಲ್ಲಿಸಿದ್ದಾರೆ. ಸ್ವರಾವಳಿ, ಅಲಂಕಾರ, ಗೀತೆ, ಸೂಳಾದಿ, ಪ್ರಬಂಧ ಮುಂತಾದವುಗಳಲ್ಲಿ ನೂತನ ಕ್ಷೇತ್ರವನ್ನು ಆವರಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಂತಸ್ತನ್ನು ಮತ್ತು ಮೆರಗನ್ನು ತಂದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ.
ಮಾಯಾ ಮಾಳವ, ಗೌಳ ರಾಗವನ್ನು ಮೂಲವಾಗಿಟ್ಟುಕೊಂಡು ಸಂಗೀತ ಪಾಠ ಕ್ರಮಕ್ಕೆ ಮಾರ್ಗದರ್ಶಕರಾದರು. ಸಾಹಿತ್ಯ, ಸಂಗೀತ, ಸ್ವಧರ್ಮ ನಿಷ್ಠೆಗಳ ತ್ರಿವೇಣಿ ಸಂಗಮವನ್ನು ಪುರಂದರ ದಾಸರಲ್ಲಿ ಕಾಣಬಹುದಾಗಿದೆ. ಆದ್ದರಿಂದಲೇ ಅವರನ್ನು ಕರ್ನಾಟಕದ ಸಂಗೀತ ಪಿತಾಮಹನೆಂದು ಕರೆಯಲಾಗುತ್ತದೆ. ದಾಸ ಸಾಹಿತ್ಯಕ್ಕೆ ಅಮರತ್ವವನ್ನು, ವೈವಿಧ್ಯತೆಯನ್ನು, ವೈಶಾಲ್ಯವನ್ನು ದೊರಕಿಸಿಕೊಟ್ಟರು.
ತನ್ನ ಕಾಲದ, ಸಮಾಜದ ಮೂಢ ನಂಬಿಕೆಗಳನ್ನು, ಆಡಂಬರಗಳನ್ನು, ತೋರಿಕೆಯ ನಿಷ್ಠೆಯನ್ನು, ಅಂಧ ಶ್ರದ್ಧೆಯನ್ನು, ಧಾರ್ಮಿಕ ಮೌಢ್ಯವನ್ನು ಕೃತಿಗಳಲ್ಲಿ ಚೆನ್ನಾಗಿ ಬಯಲಿಗೆಳೆದಿದ್ದಾರೆ. ಅವರ ಹಲವಾರು ಕೀರ್ತನೆಗಳು ಸಂಸಾರದ ನಿಸ್ಸಾರತೆಯನ್ನು ಹೇಳಿದರೂ, ಮಾನವ ಜನ್ಮ ದೊಡ್ಡದು ಅದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ಎಚ್ಚರಿಸಿ, ಈಸಬೇಕು, ಇದ್ದು ಜಯಿಸಬೇಕು ಎಂದು ಬೋಧಿಸುತ್ತಾರೆ. ‘ಮಡಿ ಮಡಿಯಂದಗಡಿಗ್ಹಾರುವಿ ಉದರ ವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ್ಯ ಭಕುತಿಯಿಲ್ಲ, ಕರದಲ್ಲಿ ಜಪಮಣಿ, ಬಾಯಲ್ಲಿ ಮಂತ್ರ ಮಣಮಣಿಸುತ್ತ ಮನಸಿನೊಳಗೆ ಪರಸತಿಯರನ್ನು ಸ್ಮರಿಸುತ್ತ ಇದ್ದ ಅದು ಬೂಟಾಟಿಕೆತನವಲ್ಲದೆ ವೈರಾಗ್ಯವೆನಿಸಿತೇ?’ ಎಂದು ವಿಡಂಬನೆ ಮಾಡಿದ್ದಾರೆ. ‘ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ. ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ’ ಕೀರ್ತನೆಗಳಲ್ಲಿನ ಅಭಿವ್ಯಕ್ತಿ ಮತ್ತು ಭಾಷೆಯ ಸಹಜತೆಯಿಂದ ಸಾಹಿತ್ಯಿಕ ಮೌಲ್ಯವನ್ನು ಹೆಚ್ಚಿಸುತ್ತದೆ.
ಹರಿದಾಸರ ಮನೋಧರ್ಮವನ್ನೂ, ವೃತ್ತಿಯನ್ನೂ, ಸ್ವರೂಪ-ಸ್ವಭಾವಗಳನ್ನೂ ಪುರಂದರ ದಾಸರೇ ಸ್ಪಷ್ಟಪಡಿಸಿರುವುದನ್ನು ಕಾಣಬಹುದು. ಉದಾರವಾದ ಮಾನವನ ಉದ್ಧಾರಕ್ಕೆ ಅಗತ್ಯವಾದ ತತ್ವಗಳನ್ನು ಸರಳ, ಸುಂದರವಾಗಿ ತಿಳಿಸಿದ್ದಾರೆ. ಹರಿದಾಸ ಸಾಹಿತ್ಯದ ಸೊಬಗನ್ನು ಜನಸಾಮಾನ್ಯರಿಗೆ ಮುಟ್ಟಿಸಿದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ. ದಾಸಕೂಟದ ಕೀರ್ತಿಯನ್ನು ಹೆಚ್ಚಿಸಿದ ದಾಸಶ್ರೇಷ್ಠ ಪುರಂದರ ದಾಸರು ತಮ್ಮ ಕೃತಿಗಳಲ್ಲಿ ಸಂಗೀತ ಬೇಕಾದವರಿಗೆ ಸಂಗೀತವನ್ನು ನೀಡಿದ್ದಾರೆ. ತತ್ವ ಬೇಕಾದವರಿಗೆ ತತ್ವವನ್ನು ನೀಡಿದ್ದಾರೆ.
ಸಾಹಿತ್ಯ ದೃಷ್ಠಿಯಿಂದ ನೋಡಿದಾಗ ಸಫಲ ಕೃತಿಗಳನ್ನು ನೀಡಿದ್ದಾರೆ. ಇಂತಹ ಹರಿದಾಸ ಶ್ರೇಷ್ಠರ ಸಂಸ್ಕøತಿಯ ಶೋಧನೆಯ ಕೆಲಸಗಳು ಕರ್ನಾಟಕದಲ್ಲಿ ಹೆಚ್ಚು-ಹೆಚ್ಚು ನಡೆಯಬೇಕಾಗಿದೆ. ಮತ್ತು ಪರಿಣಾಮಕಾರಿಯಾದ ಸಂಶೋಧನಾತ್ಮಕ ಅಧ್ಯಯನಗಳು, ಚಿಂತನ-ಮಂಥನಗಳು ನಡೆದರೆ ಹರಿದಾಸ ಸಾಹಿತ್ಯ ಸಂಸ್ಕøತಿಯ ಮೇಲೆ ಬಹಳಷ್ಟು ಬೆಳಕನ್ನು ಚೆಲ್ಲಬಹುದಾಗಿದೆ.
ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು.
ಬಾಪೂಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜು,
ಶಹಾಪುರ, ಜಿ|| ಯಾದಗಿರಿ.
ಮೊ.ನಂ. 9901559873.