Homeಜನಮನಪ್ರಮುಖ ಸುದ್ದಿ

‘ರಮೇಶ್ ಬಾಬುಗೆ ಜಾಹೀರಾತು ಪರಿಶೀಲನೆ ಮಾಡುವ ಯಾವ ಅನುಭ ಇದೆ’- ಅಶೋಕ್

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೂತನವಾಗಿ ರಚನೆಯಾದ ಜಾಹೀರಾತು ಪರಿಶೀಲನಾ ಸಮಿತಿಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಿಎಂ ಸಿದ್ದರಾಮಯ್ಯ ಅವರೇ, ಜಾಹೀರಾತುಗಳನ್ನ ಪರಿಶೀಲನೆ ಮಾಡಲು ತಮ್ಮ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿದ್ದೀರಲ್ಲ, ಕೆಪಿಸಿಸಿ ವಕ್ತಾರರಿಗೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಜಾಹೀರಾತು ಪರಿಶೀಲನೆ ಮಾಡುವ ಯಾವ ಅರ್ಹತೆ ಇದೆ? ಯಾವ ಅನುಭವ ಇದೆ?’ ಎಂದು ಕೇಳಿದ್ದಾರೆ.

‘ಜಾಹೀರಾತು ಪರಿಶೀಲನೆ ಸಮಿತಿಗೆ ಅರ್ಹರನ್ನ ನೇಮಕ ಮಾಡಬೇಕಾದರೆ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಂಪಾದಕರನ್ನೋ ಅಥವಾ ವಾರ್ತಾ ಇಲಾಖೆಯ ಜಾಹಿರಾತು ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅನುಭವಿ ಅಧಿಕಾರಿಗಳನ್ನೋ ನೇಮಿಸಬಹುದಿತ್ತು’ ಎಂದು ಪೋಸ್ಟ್ ಮಾಡಿದ್ದಾರೆ.

‘ಅದು ಬಿಟ್ಟು ಜಾಹೀರಾತು ಪರಿಶೀಲನಾ ಸಮಿತಿಗೆ ಆಡಳಿತ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡಿರುವುದು ಎಷ್ಟು ಸಮಂಜಸ? ಸರಣಿ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಸರ್ಕಾರ ಜನಮನ್ನಣೆ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಇಂತಹ ನಡೆ ಸಹಜವಾಗಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ನಡೆಯ ಹಿಂದೆ ಮಾಧ್ಯಮಗಳನ್ನ ಪರೋಕ್ಷವಾಗಿ ನಿಯಂತ್ರಣ ಮಾಡುವ ಹುನ್ನಾರ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button