ಸಾಹಿತ್ಯ

ನೋಡಿ, ಇಂಥವರನ್ನು ಮೊದಲು ಊರು ಬಿಡಿಸಿ ಬಿಡಿ..!

ನಮ್ಮೂರೇ ನಮಗೆ ಮೇಲು ಅಂತ ಅಣ್ಣಾವ್ರು ಹಾಡಿದ್ದಾರೆ. ಎಂಥವರಿಗೂ ಊರಿನ ಮೇಲೆ ಅಕ್ಕರೆ ಇದ್ದೇ ಇರುತ್ತದೆ. ಕೆಲವರು ಮಾತ್ರ ಊರೆಂಬ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ. ಊರು ಬಿಡದ ಹೊರತು ಉದ್ಧಾರ ಆಗಲಾರೆ ಎಂಬುದು ಸಾವಿರ ಸಲ ಸಾಬೀತಾಗಿರುತ್ತದೆ. ಆದರೂ ಸಹ ಹಾಳಾದರೂ ಸರಿ ಊರು ಬಿಟ್ಟು ಬದುಕಲಾರೆ ಎಂಬ ಮೊಂಡುತನ ಪ್ರದರ್ಶಿಸುತ್ತಿರುತ್ತಾರೆ.

ಒಮ್ಮೆ ಅಂಥವರ ಬಗ್ಗೆ ಕೂಲಂಕುಷವಾಗಿ ವಿಚಾರಿಸಿ ನೋಡಿ. ಉತ್ತಮ ವಿದ್ಯಾವಂತರಾಗಿರುತ್ತಾರೆ ಆದರೆ ಅರ್ಹತೆಗೆ ತಕ್ಕ ಕೆಲಸ ಮಾಡುತ್ತಿರುವುದಿಲ್ಲ. ಓದಿದ್ದು ಎಂಬಿಬಿಎಸ್ ಆಗಿದ್ದರೂ ಗ್ರಾಮ ರಾಜಕಾರಣ ಮಾಡಿಕೊಂಡಿರುತ್ತಾರೆ. ಇಂಜಿನೀಯರೀಂಗ್ ಓದಿದ್ದರೂ ಖಾಸಗಿ ಶಾಲೆಯಲ್ಲಿ ಮೇಷ್ಟ್ರಾಗಿರುತ್ತಾರೆ. ಸ್ನಾತಕೋತ್ತರ ಪದವಿ ಪಡೆದಿರುತ್ತಾರಾದ್ರೂ ಪತ್ರಿಕೆಯೊಂದರ ಸ್ಟ್ರಿಂಜರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ದೂರದ ಊರುಗಳಲ್ಲಿ ವಿಫುಲ ಅವಕಾಶಗಳಿದ್ದರೂ ತಿರಸ್ಕರಿಸಿ ಊರಲ್ಲೇ ಠಿಕಾಣಿ ಹೂಡಿರುತ್ತಾರೆ.

ಪುಕ್ಕಟೆ ಸಲಹೆ ಸೂಚನೆಗಳನ್ನು ನೀಡಿ ಜನರನ್ನು ಆಕರ್ಷಿಸಿರುತ್ತಾರೆ. ಅನೇಕರ ಬದುಕಿಗೆ ದಾರಿ ದೀಪ ಆಗಿರುತ್ತಾರೆ. ಅವರಿಂದ ಮಾರ್ಗದರ್ಶನ ಪಡೆಯಲು ಜನರೂ ಬಯಸುತ್ತಾರೆ. ಆದರೆ, ಅವರ ಬದುಕು ಮಾತ್ರ ಸೆಟಲ್ ಆಗಿರೋದೇ ಇಲ್ಲ. ಅವರ ಮಾತುಗಳನ್ನು ಎಲ್ಲರೂ ಕೇಳಬೇಕೆಂದು ಬಯಸುತ್ತಾರೆ. ಆದರೆ, ಅವರು ಮಾತ್ರ ಯಾರ ಮಾತಿಗೂ ಕಿವಿಗೊಡುವುದೇ ಇಲ್ಲ.

ಅವರಿಲ್ಲದಿದ್ದರೂ ಊರು ತನ್ನಪಾಡಿಗೆ ತಾನೂ ಇರುತ್ತದೆ. ಊರಲ್ಲಿ ಯಾರೊಬ್ಬರೂ ಯಾಕೆ ಈವತ್ತು ಅವರು ಕಾಣಿಸುತ್ತಿಲ್ಲ ಅಂತ ಕೇಳುವುದಿಲ್ಲ. ಅವರಿಲ್ಲದಿದ್ದರೆ ಇಂಥ ಕೆಲಸ ಆಗೋದೆ ಇಲ್ಲ ಅನ್ನುವಂಥದ್ದೇನೂ ಇರೋದಿಲ್ಲ. ಅವರಿಲ್ಲದಿದ್ದರೆ ಮತ್ತೊಬ್ಬರು ಎಂಬುದು ಜಗದ ನಿಯಮ. ಇವರಿಗೂ ಅಷ್ಟೇ ಊರಿನಿಂದಲೇ ಬದುಕು ನಡೆಯುತ್ತದೆ ಅನ್ನುವಂಥದ್ದು ಏನೂ ಇರೋದಿಲ್ಲ.

ನಾಲ್ಕು ನಮಸ್ಕಾರ, ವಾರಿಗೆಯವರ ಜೊತೆ ಕಾಡು ಹರಟೆ, ಸಲಹೆ, ಸೂಚನೆ, ದೊಡ್ಡಸ್ಥಿಕೆ ಹೀಗೆ ಒಂದು ರೀಸೈಕಲ್ ಲೈಫ್ ಸ್ಟೈಲ್ ಗೆ ಫಿಕ್ಸ್ ಆಗಿರುತ್ತಾರೆ. ಪರ ಊರಿಗೆ ಹೋದರೆ ಹೊಸ ಜನ, ಹೊಸ ಜೀವನ ಎಂಬ ಆಲೋಚನೆ. ನಮ್ಮೂರೇ ನಮಗೆ ಚಂದ, ಪರ ಊರು ಪ್ರಾಣ ಸಂಕಟ ಎಂಬ ವಾದ ಅವರದು. ಅಸಲಿಗೆ ಹೊಸತನಕ್ಕೆ ತೆರೆದುಕೊಳ್ಳುದ ಮನಸ್ಸು, ರಿಸ್ಕ್ ಯಾಕೆ ಎಂಬ ಸೋಮಾರಿತನ ಅವರನ್ನು ಕಾಡುತ್ತಿರುತ್ತದೆ.

ಅಂಥವರ ಪಾಲಿಗೆ ಊರು ಎಂಬುದೊಂದು ಭ್ರಮೆ, ಊರು ಎಂಬುದೊಂದು ನೆಪ ಅಷ್ಟೆ. ಅಸಲಿಗೆ ಅವರಲ್ಲಿ ಅಡಗಿರುವ ಪ್ರತಿಭೆ, ಶಕ್ತಿ ಅವರಿಗೆ ಗೊತ್ತಿರೋದಿಲ್ಲ. ವಿದ್ಯೆ ಮತ್ತು ಬುದ್ಧಿಯನ್ನು ಬಳಸಿಕೊಂಡು ತಾವೂ ಬೆಳೆದು ಊರನ್ನೂ ಬೆಳೆಸುವ ಬದಲು ವೃಥಾ ಕಾಲಹರಣ ಮಾಡುತ್ತಿರುತ್ತಾರೆ. ಅದೇ ಕಾಳ, ಬೋಳ, ವೆಂಕ ಮತ್ತು ಸೀನನ ಮುಂದೆ ಬುದ್ಧಿಮತ್ತೆ ಪ್ರದರ್ಶಿಸಿ ಅಲ್ಪತೃಪ್ತಿಗೆ ಒಳಗಾಗಿರುತ್ತಾರೆ.

ಇದು ಒಬ್ಬರ ಕಥೆ ಅಲ್ಲ. ಪ್ರತಿ ಊರಿನಲ್ಲೂ ಅಂತ ಅಪರೂಪದ ಅಗಾಧ ಪ್ರತಿಭೆಗಳು ಒಬ್ಬರಾದರೂ ಇದ್ದೇ ಇರುತ್ತಾರೆ, ನಿಮ್ಮ ಜೊತೆಗೂ ಇರಬಹುದು. ನಿಜಕ್ಕೂ ಅವರು ಊರೆಂಬ ಭ್ರಮಾಲೋಕ ಬಿಟ್ಟು ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿದರೆ ಪ್ರೀತಿಯ ಊರನ್ನೇ ಉದ್ಧಾರ ಮಾಡುವ ಕ್ಯಾಪಾಸಿಟಿ ಅವರಲ್ಲಿರುತ್ತದೆ. ಲೆಟ್ ಅಸ್ ಅಂತ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಕೆಲಸ ನಿಮ್ಮಂಥವರಿಂದಲೇ ಆಗಬೇಕಿದೆ.
ಏನಂತೀರಿ?

-ವಿನಯ ಮುದನೂರ್

Related Articles

Leave a Reply

Your email address will not be published. Required fields are marked *

Back to top button