ಯಾದಗಿರಿಃ ಕುಖ್ಯಾತ ಮನೆಗಳ್ಳನ ಬಂಧನ, 3 ಲಕ್ಷ ಮೌಲ್ಯದ ಒಡವೆ ಆಭರಣ ವಶ
ಪೊಲೀಸರ ಯಶಸ್ವಿ ಕಾರ್ಯಾಚರಣೆ : ಕುಖ್ಯಾತ ಮನೆಗಳ್ಳನ ಬಂಧನ
ಯಾದಗಿರಿ: ಜಿಲ್ಲೆಯಾದ್ಯಂತ ಅನೇಕ ಮನೆಗಳ್ಳತನ ನಡೆಸುವ ಮೂಲಕ ಜನರ ನೆಮ್ಮದಿ ಹಾಳುಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. 3 ಕಳ್ಳತನ ಪಕ್ರರಣಗಳಿಗೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳ ಮಹ್ಮದ್ ಜಾಫರ್ ಸಾಧಿಕ್(34) ಎಂಬಾತನನ್ನು ಸಿಪಿಐ ಮೌನೇಶ ಪಾಟೀಲ್ ನೇತೃತ್ವದ ಪೊಲೀಸ್ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಗರದ ಪೇಠ ರಾಯಚೂರ ಹತ್ತಿರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಪಿ ಮಹ್ಮದ್ ಜಾಫರ್ ಸಾದಿಕ ಮೂರು ಮನೆ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದು ಅನೇಕ ಸಲ ಪೊಲೀಸರಿಗೆ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ಎನ್ನಲಾಗಿದೆ. ಈತನಿಂದ 10 ಗ್ರಾಂ. ಬಂಗಾರದ ಆಭರಣಗಳು 24 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 3.10.000 ರೂ. ಮೌಲ್ಯದ ಒಡವೆ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಪಿಐ ಮೌನೇಶ ಪಾಟೀಲ್ ನೇತೃತ್ವದ ತಂಡದಲ್ಲಿ ನಗರಠಾಣೆಯ ಪಿಎಸ್‍ಐ ಮಹಾಂತೇಶ ಸಜ್ಜನ್ ಹಾಗೂ ಪಿಎಸ್‍ಐ ಮಂಜುಳಾ, ಪೊಲೀಸ್ ಪೇದೆಗಳಾದ ಶ್ರೀನಿವಾಸರಡ್ಡಿ, ಶಿವಶಂಕರಡ್ಡಿ, ಮೋನಪ್ಪ, ಸಂಜೀವಕುಮಾರ, ಸೈಯದ್ ಅಲಿ, ಸಿಧಾಕರರಡ್ಡಿ, ರಾಘವೇಂದ್ರ ರಡ್ಡಿ ಸೇರಿದಂತೆ ಇತರರಿದ್ದರು. ಕುಖ್ಯಾತ ಮನೆಗಳ್ಳನ ಬಂಧನದ ಸುದ್ದಿ ಕೇಳಿ ನಾಗರೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಪೊಲೀಸರಿಗೆ ಸೆಲ್ಯೂಟ್ ಹೇಳಿದ್ದಾರೆ. ಅಂತೆಯೇ ಇನ್ನು ಮುಂದೆ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.