ಕಥೆ

ಸಾಹಿತಿ, ಕವಿ, ಕಲಾವಿದರು ಇದನ್ನೋದಲೇಬೇಕು..! ಅದ್ಭುತ ಸಂದೇಶ

ದಿನಕ್ಕೊಂದು ಕಥೆ

ಗೌರವಿಸುವ ಲಕ್ಷಣ

ಹಿಂದೆ ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿ­­ದರಿಗೆ ರಾಜಾಶ್ರಯ ಬಹು­ದೊಡ್ಡ ಭರವಸೆಯಾಗಿತ್ತು. ಹೊಟ್ಟೆ­ಪಾಡಿಗೆ ಚಿಂತೆಪಡದೇ ತಮ್ಮ ಸೃಜನ­­ಶೀಲತೆ ವೃದ್ಧಿಸಿಕೊಳ್ಳಲು ರಾಜರ ಆಶ್ರಯ ಸಹಾಯ ಮಾಡುತ್ತಿತ್ತು. ಅದು ಬಹಳಷ್ಟು ಬಾರಿ ಯಜಮಾನ – ಕೆಲಸಗಾರನ ಸಂಬಂಧವಾಗಿರದೇ ಆತ್ಮೀಯ ಗೆಳೆಯನ ಸ್ನೇಹದಂತಿತ್ತು. ಭೋಜರಾಜ ಮತ್ತು ಕಾಳಿದಾಸರ ಸ್ನೇಹ, ಅಕ್ಬರ್ ಮತ್ತು ತಾನಸೇನ್‌ನ ಆತ್ಮೀಯತೆ ಇದಕ್ಕೆ ಮಾದರಿಯಾ­ದಂಥವುಗಳು.

ಕೆಲ­­ವೊಂದು ಬಾರಿ ಆಸ್ಥಾನ ಕವಿಗಳು, ಸಾಹಿತಿಗಳು ತಮಗೆ ಆಶ್ರಯ ನೀಡಿದ ರಾಜ­ನಿಗೆ ಕೃತಜ್ಞತೆ ಸಮರ್ಪಿಸಲು ಅವನನ್ನೇ ಹೊಗಳಿ, ಹಾಡಿ ಅತಿರೇಕಕ್ಕೆ ಹೋದದ್ದೂ ಉಂಟು. ಅದೇ ರೀತಿ ತಾನು ಯಾವಾಗಲೂ ಯಜಮಾನನೇ ಎಂದು ತೋರುವ ದರ್ಪದಲ್ಲಿ ಕಲಾವಿದರಿಗೆ ತೋರುವ ಗೌರವವನ್ನು ಬಹು­ದೊಡ್ಡ ಉಪಕಾರ ಎಂದು ಪ್ರದರ್ಶಿಸುವ ರಾಜರೂ ಇದ್ದರು.

ಗಾಯನ ಸಾಮ್ರಾ­ಜ್ಯದ ಚಕ್ರವರ್ತಿ ಎಂದು ಕರೆಯಿಸಿಕೊಳ್ಳುತ್ತಿದ್ದ ಪಂಡಿತ ಅಲ್ಲಾ ದಿಯಾಖಾನರ ಮನೆತನ­­ದಲ್ಲಿ ಹಿಂದೆ ಶಾದೀಖಾನ್ ಎಂಬ ಮಹಾನ್ ಗಾಯಕರಿದ್ದರಂತೆ. ಅವರ ಕೀರ್ತಿ ಭಾರತದೆಲ್ಲೆಡೆ ಹರಡಿತ್ತು. ಅದನ್ನು ಕೇಳಿ ತಿಳಿದ ಉತ್ತರ ಭಾರತದ ರಾಜನೊಬ್ಬ ಅವರನ್ನು ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ.

ಅವರನ್ನು ತನ್ನ ಅರ­ಮನೆಗೆ ಕರೆದೊಯ್ದು ಕೇವಲ ತನ್ನ ಪರಿವಾರ ಹಾಗೂ ಆಸ್ಥಾನಿಕರಿಗೆ ಒಂದು ಗಾಯನ ಕಾರ್ಯಕ್ರಮ ಏರ್ಪಡಿಸಿದ. ಅಲ್ಲಿ ಶಾದೀಖಾನ್ ಅದ್ಭುತವಾಗಿ ಹಾಡಿ­ದರು. ರಾಜನಿಗೆ ಅಷ್ಟರಿಂದಲೇ ತೃಪ್ತಿಯಾಗಲಿಲ್ಲ. ಮರುದಿನ ಅರಮ­ನೆಯ ಮುಂಭಾಗದಲ್ಲಿ ಇಡೀ ನಗರದ ಜನಕ್ಕೆ ಒಂದು ಕಾರ್ಯಕ್ರಮ ಆಯೋಜಿ­ಸಿದ. ಸಹಸ್ರಾರು ಜನ ಬಂದರು.
ಅಂದಂತೂ ಖಾನ್ ಸಾಹೇಬರ ಗಾಯನ ಅತ್ಯದ್ಭುತ­ವಾಗಿತ್ತು. ಜನ ಹುಚ್ಚೆದ್ದು ಕುಣಿದರು. ರಾಜನಿಗೆ ಸಂಪೂರ್ಣ ತೃಪ್ತಿಯಾ­ಯಿತು.

ತಕ್ಷಣವೇ ಅಷ್ಟೊಂದು ಜನರ ಮುಂದೆ ಶಾದೀಖಾನ್‍ರಿಗೆ ಸನ್ಮಾನ ಮಾಡಲು ನಿರ್ಧ­ರಿಸಿದ. ಗಾಯಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ತನ್ನ ಘನತೆಯನ್ನು, ಉದಾ­ರ­ತೆ­ಯನ್ನು ತೋರಿ­ಸುವುದು ಕೂಡ ಮುಖ್ಯವಾಗಿತ್ತು.
ತನ್ನ ಗೌರವದ ದ್ಯೋತಕ­ವಾಗಿ ರಾಜ ನೂರಾರು ರೇಷ್ಮೆಯ ಚೀಲಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ತುಂಬಿ ಅವು­ಗಳನ್ನು ಅಲಂಕರಿಸಿದ ಆನೆಯ ಮೇಲೆ ಹೊರಿಸಿ ಆ ಚೀಲಗಳ ಮಧ್ಯೆ ಪಂಡಿತ ಶಾದೀ­ಖಾನ್‌ ಅವರನ್ನು ಕುಳ್ಳಿರಿಸಿ ಸತ್ಕರಿಸಿದ. ಆಗ ಎಲ್ಲರಿಗೆ ಕೇಳುವಂತೆ ಹೇಳಿದ, ‘ನಿಮಗೆ ಹಿಂದೆ ಹಲವಾರು ಜನರು ಮರ್ಯಾದೆ ತೋರಿರಬಹುದು. ಆದರೆ, ಆನೆಯ ಮೇಲೆ ಕುಳ್ಳಿರಿಸಿ, ಆನೆ ಹೊರುವಷ್ಟು ಹಣವನ್ನು ಕೊಡುವ ರಾಜನನ್ನು ನೋಡಿದ್ದು ನಿಮಗೆ ಇದೇ ಮೊದಲನೇ ಸಲವಿರಬಹುದಲ್ಲವೇ?’ ಎಂದ.‌ ಶಾದೀಖಾನ್‍ರು ನಸು­ನಕ್ಕು, ‘ಹೌದು ಮಹಾಸ್ವಾಮಿ’ ಎಂದರು.

ಮಹಾನ್ ಗಾಯಕರ ಮೆರವಣಿಗೆ ನಗರದಲ್ಲಿ ನಡೆಯಿತು. ಆನೆಯ ಮೇಲೆ ಕುಳಿತಿದ್ದ ಶಾದೀಖಾನ್‌ ಅವರು ಒಂದೊಂದೇ ಹಣದ ಚೀಲವನ್ನು ತೆಗೆದು ಅದರಲ್ಲಿಯ ನಾಣ್ಯಗಳನ್ನು ಒಂದೊಂದಾಗಿ ರಸ್ತೆಯ ಮೇಲೆ ಎಸೆ­ಯುತ್ತ ಬಂದರು.

ಮೆರವಣಿಗೆ ಮುಗಿದು ಅರಮನೆಯ ಹತ್ತಿರ ಬರುವ­ಷ್ಟರಲ್ಲಿ ಒಂದೂ ನಾಣ್ಯ ಉಳಿದಿರಲಿಲ್ಲ. ಈ ವಿಷಯ ರಾಜನಿಗೆ ತಲುಪಿತ್ತು.
ಆಗ ಶಾದೀಖಾನ್‌ ವಿನಯದಿಂದಲೇ ರಾಜ­ನಿಗೆ ಕೇಳಿದರು, ‘ಮಹಾರಾಜ್, ಆನೆ ಹೊರುವಷ್ಟು ದೊರೆತ ನಾಣ್ಯಗಳನ್ನು ರಸ್ತೆಯಲ್ಲಿ ತೂರಿಬಂದ ಗಾಯಕನನ್ನು ನೀವು ನೋಡಿದ್ದು ಇದೇ ಮೊದಲ ಬಾರಿಯಲ್ಲವೇ?’

ರಾಜನಿಗೆ ತನ್ನ ಮೂರ್ಖತನದ ಅರಿವಾಗಿ ಅವರನ್ನು ಮತ್ತೊಮ್ಮೆ ಪ್ರಾಮಾಣಿಕವಾಗಿ ಗೌರವಿಸಿದ. ಅಧಿಕಾರಿಗಳಿಗೆ, ಅಧಿಕಾರದಲ್ಲಿ ಇರುವ­ವರಿಗೆ, ಕಲಾವಿದರನ್ನು, ಸಜ್ಜನರನ್ನು ಗೌರವಿಸುವಾಗ ವಿನಯ­­ವಿರಬೇಕು, ಅವರು ತಮ್ಮ ಗೌರವವನ್ನು ಸ್ವೀಕರಿಸಲು ಒಪ್ಪಿದರಲ್ಲ ಎಂಬ ಧನ್ಯತೆ ಇರಬೇಕು. ತಾವು ಅವರಿಗೆ ಗೌರವ ತೋರಿ ಮಹೋಪಕಾರ ಮಾಡಿದ್ದೇವೆ ಎನ್ನುವ ಅಹಂಕಾರ ಭಾವ ಸರಿಯಲ್ಲ. ಅಂತೆಯೇ ಗೌರವ ಬಂದರೆ ಸಾಕು ಎಂಬಂತೆ ಅಧಿಕಾರಿಗಳನ್ನು, ಗದ್ದುಗೆಗಳ­ಲ್ಲಿದ್ದವರನ್ನು ಓಲೈಸುವ ಲಕ್ಷಣವೂ ಕಲಾವಿದರಿಗೆ ಗೌರವ ತರದು.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button