ಸಗರ ಕೊಲೆ ಪ್ರಕರಣ ಆರೋಪಿ ಬಂಧನ-ಕೊಲೆ ಮಾಡಿದ್ದೇಕೆ ಗೊತ್ತಾ..?
ಕೊಳವೆಯಿಂದ ಹೊಡೆದು ಕೊಲೆ- ಆರೋಪಿ ಅರೆಸ್ಟ್
ಯಾದಗಿರಿ, ಶಹಾಪುರಃ ಇತ್ತೀಚೆಗೆ ಸಗರ ಗ್ರಾಮದ ಹೊರವಲಯದಲ್ಲಿ ತೊಗರಿ ಕಟಿಗೆಗಳಿಂದ ಸುಟ್ಟು ಕರಕಲಾದ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿ ಸಗರ ಗ್ರಾಮ ನಿವಾಸಿ ಅಂಗವಿಕಲ ಸೋಪಣ್ಣ ತಂದೆ ಭಾಗಣ್ಣ ಮ್ಯಾಳಗಿ ಎಂಬಾತನೆಂದು ಪೊಲೀಸರು ಗುರುತು ಪತ್ತೆ ಮಾಡಿದ್ದರು.
ಬುಧವಾರ ಅದರಂತೆ ಸೋಪಣ್ಣ ಮ್ಯಾಳಗಿ ಈತನನ್ನು ಕೊಲೆಗೈದ ಆರೋಪಿ ಇದೇ ಗ್ರಾಮದ ಮಂಜುನಾಥ ಊರಕಾಯಿ ಎಂಬಾತನನ್ನು ಪೊಲೀಸರು ತನಿಕೆಯಿಂದ ಪತ್ತೆ ಮಾಡಿ ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕೊಲೆಗೆ ಆರೋಪಿ ಹೇಳಿದ್ದೇನು.?
ಆರೋಪಿ ಮಂಜುನಾಥ, ಕೊಲೆಯಾದ ಸೋಪಣ್ಣನ ಹತ್ತಿರ 20 ಸಾವಿರ ರೂ. ಸಾಲ ಪಡೆದಿದ್ದನಂತೆ. ಸಾಲ ತೀರಿಸಲಿಕ್ಕಾಗದೆ ಪರದಾಡಿದ್ದಾನೆ. ಆದರೆ ಸೋಪಣ್ಣ ನಿತ್ಯ ಸಾಲದ ಹಣ ನೀಡುವಂತೆ ಒತ್ತಾಯಿಸುವದಲ್ಲದೆ. ಮನೆಗೆ ಹೋಗಿ ಬಾಯಿಗೆ ಬಂದಂತೆ ಬಯ್ದಿದ್ದಾನೆ ಅಲ್ಲದೆ ಅವಾಚ್ಯ ಶಬ್ಧಗಳಿಂದ ಹೆಂಡತಿ ಹೆಸರಲ್ಲಿ ನಿಂದಿಸಿರುವ ಕಾರಣ ಆತನನ್ನು ಮುಗಿಸಬೇಕೆಂದು ನಿರ್ಧರಿಸಿ ಕೊಲೆಗೈದಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ದುಡ್ಡು ಕೊಡುತ್ತೇನೆ ಹಾಗೇ ನಾನ್‍ವೆಜ್ ಊಟ ಮಾಡಿಸುತ್ತೇನೆ ಬಾ ಸೋಪಣ್ಣನನ್ನು ಪುಸಲಾಯಿಸಿ ಮಾ.15 ರಂದು ಶಾರದಳ್ಳಿ ರಸ್ತೆಯಲ್ಲಿ ಬರುವ ಹೊಲವೊಂದಕ್ಕೆ ಕರೆದೊಯ್ದು ಒಲೆಗೆ ಊದುವ ಕೊಳವೆಯಿಂದ ಹೊಡೆದು ಕೊಲೆ ಮಾಡಿದ್ದಲ್ಲದೆ ಅಲ್ಲಿಯೇ ಇದ್ದ ತೊಗರಿ ಕಟಿಗೆಯಿಂದ ಸೋಪಣ್ಣನನ್ನು ಸುಟ್ಟು ಹಾಕಿದ್ದೇನೆ ಎಂದು ಆರೋಪಿ ಮಂಜುನಾಥ ಪೊಲೀಸರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾನೆ.
ಅಂದು ಸಂಜೆ 7 ಗಂಟೆ ಸುಮಾರಿಗೆ ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ ನಂತರ ಬೈಕ್ ಮೇಲೆ ಶಾರದಳ್ಳಿ ಗ್ರಾಮದ ನನ್ನ ಹೆಂಡತಿ ಮನೆಗೆ ಹೋಗಿದ್ದೇನೆ. ಹೋಗುವಾಗ ಮಾರ್ಗ ಮಧ್ಯ ಹಳ್ಳದ ಸಮೀಪ ಕೊಳವೆ ಎಸೆದು ಹೋಗಿದ್ದೇನೆ ಎಂದು ತಿಳಿಸಿದ್ದಾನೆ. ಆತನ ಹೇಳಿಕೆಯಂತೆ ಕೊಳವೆ ಮತ್ತು ಬೈಕ್‍ನ್ನು ಸಹ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಮತ್ತು ಡಿವೈಎಸ್‍ಪಿ ಶಿವನಗೌಡ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ತನಿಖೆ ಕಾರ್ಯ ನಡೆಸಲು ಸಾಧ್ಯವಾಯಿತು ಎಂದು ಸಿಪಿಐ ನಾಗರಾಜ ತಿಳಿಸಿದ್ದಾರೆ. ತನಿಕೆ ಯಶಸ್ಸಿಗೆ ಪೊಲೀಸ್ ಪೇದೆಗಳಾದ ಹೊನ್ನಪ್ಪ, ಬಾಬು ನಾಯ್ಕಲ್, ಸತೀಶ ನರಸನಾಯಕ್, ಸಂಗನಬಸಪ್ಪ ಅಕ್ಕಿ, ಗಜೇಂದ್ರ, ಬಸವರಾಜ, ಭೀಮನಗೌಡ ಮತ್ತು ನಾಗರಡ್ಡಿ ಅವರ ತಂಡದ ಕಾರ್ಯ ಶ್ಲಾಘನೀಯ ಎಂದರು.