ರೈತಾಪಿ ಜನರಿಂದ ಜಾನಪದ ಜೀವಂತಃ ಮಹಾಂತಶ್ರೀ
ಜಾನಪದ ಜಾತ್ರೆ, ವಿವಿಧ ಕಲಾ ತಂಡಗಳು ಭಾಗಿ
ಯಾದಗಿರಿಃ ಭಾರತ ದೇಶದಲ್ಲಿ ನಮ್ಮ ಕರ್ನಾಟಕ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಜಾನಪದ ಸಾಂಸ್ಕೃತಿ ಗ್ರಾಮೀಣ ಜನರ ಜೀವಾಳವಾಗಿದೆ ಎಂದು ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶ್ರೀಗಳು ಹೇಳಿದರು.
ಜಿಲ್ಲೆಯ ಶಹಪುರ ತಾಲೂಕಿನ ಸಗರ ಗ್ರಾಮದಲ್ಲಿ ಕಲಾನಿಕೇತನ ಟ್ರಸ್ಟ್‍ವತಿಯಿಂದ ಜಿಲ್ಲಾ ಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಇನ್ನೂ ಜೀವಂತವಾಗಿದೆ. ರೈತಾಪಿ ಜನರು ಸುಗ್ಗಿ ಕಾಲದಲ್ಲಿ, ಮತ್ತು ಬೇಸಿಗೆ ಸಂದರ್ಭದಲ್ಲಿ ಬಯಲಾಟ, ಡಪ್ಪಿನಾಟ ವಿವಿಧ ಕುಣಿತಗಳನ್ನು ಪ್ರದರ್ಶಿಸುವ ಮತ್ತು ನಾಟಕಗಳನ್ನು ಸ್ವತಃ ಅಭ್ಯಸಿಸಿ ವಿವಿಧ ಪಾತ್ರಗಳನ್ನು ಮಾಡುವ ಮೂಲಕ ಜಾನಪದ ಕಲೆಯನ್ನು ಉಳಿಸಿದ್ದಾರೆ ಎಂದರು.
ಜಾನಪದ ಸಾಹಿತಿ ಮಡಿವಾಳಯ್ಯ ಶಾಸ್ತ್ರಿ ಮಾತನಾಡಿ, ಜನರು ಇಂದಿನ ಯಾಂತ್ರಿಕ ಬದುಕಿಗೆ ಮಾರು ಹೋಗಿದ್ದು, ಜಾನಪದ ಮರೆಯಾಗುತ್ತಿರುವ ಸಂದರ್ಭದಲ್ಲಿ ಕಲಾನಿಕೇತನ ಟ್ರಸ್ಟ್ ವತಿಯಿಂದ ಇಂತಹ ಗ್ರಾಮೀಣ ಸೊಗಡಿನ ಜಾನಪದ, ಹಾಸ್ಯ, ಜೋಗುತಿ ಕುಣಿತ ಮುಂತಾದ ಕಲಾ ಪ್ರಕಾರಗಳನ್ನು ಗ್ರಾಮೀಣ ಜನತೆಗೆ ಪರಿಚಯಿಸಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ನಾಗಠಾಣ ಹಿರೇಮಠದ ಸೋಮಶೇಖರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಗೌಡರ, ನಾಗಣ್ಣ ಜಾಯಿ, ಮಲ್ಲಿಕಾರ್ಜುನ ವಿರುಪಾಪುರ, ಎಪಿಎಮ್‍ಸಿ ಸದಸ್ಯ ಬಸವರಾಜ ಕನಗುಂಡ, ಭೀಮರಾಯ ಸೇರಿ ಉಪಸ್ಥಿತರಿದ್ದರು.
ಜಾನಪದ ವಿವಿಧ ಕಲಾ ತಂಡಗಳಾದ ಹೈದ್ರಾಬಾದ ಕರ್ನಾಟಕ ನಾಗರಿಕರ ವೇದಿಕೆ, ಗದುಗಿನ ಬಸವ ಬಳಗ ಸಾಂಸ್ಕೃತಿಕ ಕಲಾ ತಂಡ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು. ನೆರೆದಿದ್ದ ಸಭಿಕರನ್ನು ರಂಜಿಸಿದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ತಂಡಗಳನ್ನು ಪ್ರಾಯೋಜನೆ ನೀಡಲಾಗಿತ್ತು.
ಇದೇ ಸಂದರ್ಭದಲ್ಲಿ ಗದುಗಿನ ಬಸವ ಬಳಗ ಜಾನಪದ ಸಾಂಸ್ಕೃತಿ ಕಲಾ ತಂಡದ ಅಧ್ಯಕ್ಷರಾದ ಬಸವರಾಜ ಪಾಗದ ಅವರಿಗೆ ಸಗರ ಕಲಾ ಚಕ್ರವರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಬಸಪ್ಪ ಸ್ವಾಗತಿಸಿದರು. ಶ್ರೀಶೈಲ ಬಂಟನೂರ ವಂದಿಸಿದರು.