ಶ್ರೀಮಂತನ ರೊಟ್ಟಿ ಬೇರೆ ಬಡವನ ರೊಟ್ಟಿ ಬೇರೆ ಅದ್ಹೇಗೆ.? ಓದಿ

ದಿನಕ್ಕೊಂದು ಕಥೆ
ಗುರುನಾನಕರು ಒಮ್ಮೆ ತಮ್ಮ ಶಿಷ್ಟ ಗಣದೊಂದಿಗೆ ಹಳ್ಳಿಯೊಂದನ್ನು ಪ್ರವೇಶಿಸಿ ಮರದ ಕೆಳಗೆ ಕುಳಿತು ಸದ್ವಿಚಾರ ಪ್ರವಚನ ಮಾಡತೊಡಗಿದರು. ನೂರಾರು ಮಂದಿ ಬಂದು ಸೇರಿ ನಲಿದರು.
ಮಧ್ಯಾಹ್ನದ ಊಟದ ಸಮಯವಾಯಿತು. ಪ್ರವಚನದ ನಂತರ ಹಳ್ಳಿಯ ಶ್ರೀಮಂತ ಹಾಗೂ ಕಡುಬಡ ರೈತ ಇಬ್ಬರೂ ಊಟ ತಂದು ವಂದಿಸಿದರು. ಮೊದಲಿಗೆ ಇಬ್ಬರೂ ಒಂದೊಂದು ರೊಟ್ಟಿಯನ್ನು ತಟ್ಟೆಯಲ್ಲಿ ಹಾಕಿದರು.
ನಾನಕರು ಶ್ರೀಮಂತನತ್ತ ದೃಷ್ಟಿಯನ್ನೇ ಬೀರದೆ ಬಡವನ ರೊಟ್ಟಿಯನ್ನೇ ನಗುತ್ತಲೇ ಎತ್ತಿಕೊಂಡರು. ಶ್ರೀಮಂತನಿಗೆ ಅಪಮಾನವಾಗಿ ಆತ ಕೈಜೋಡಿಸಿಕೊಂಡು “ಗುರುದೇವ, ಇದು ಸರಿಯಲ್ಲ. ಈ ಊರಿನ ಧನಿಕ ನಾನೇ, ನಿಮಗಾಗಿಯೇ ತುಪ್ಪದಲ್ಲೇ ಮಾಡಿದ ಮಧುರ ರೊಟ್ಟಿಯನ್ನು ಸ್ನಾನ ಮಾಡಿಕೊಂಡು ರೇಷ್ಮೆ ಮಡಿಬಟ್ಟೆ ಉಟ್ಟುಕೊಂಡೇ ತಂದಿರುವೆ.
ಅಂದಾಗ್ಯೂ ಆ ಬಡ ರೈತನ ಒಣಕಲು ರೊಟ್ಟಿಗಷ್ಟೇ ನೀವು ಬೆಲೆ ಕೊಟ್ಟಿರುವಿರಿ… ಇದು ಸರಿಯೇ?” ಎನ್ನುತ್ತಲೇ ಮಣಿದು ಬಿಟ್ಟ.
ನಾನಕರು ನಗುತ್ತಲೇ ಬಲಕೈಯಲ್ಲಿ ಶ್ರೀಮಂತ ತಂದ ರೊಟ್ಟಿಯನ್ನು ಎಡಗೈಯಲ್ಲಿ ಬಡವನ ರೊಟ್ಟಿಯನ್ನು ಎತ್ತಿಕೊಂಡರು. ಎರಡೂ ರೊಟ್ಟಿಗಳನ್ನು ಒಮ್ಮೆಲೇ ಹಿಂಡಿದರು. ಶ್ರೀಮಂತನ ರೊಟ್ಟಿಯಿಂದ ಅಚ್ಚ ಕೆಂಪು ರಕ್ತಕಣಗಳು ಉದುರಿದರೆ, ಬಡ ರೈತನ ರೊಟ್ಟಿಯಿಂದ ಅಚ್ಚ ಬಿಳಿ ಹಾಲು ಉಕ್ಕಿ ಹರಿಯಿತು. ಜನರೆಲ್ಲ ಅಚ್ಚರಿಯಿಂದಲೇ ಇದನ್ನು ಕಂಡರು.
“ಈಗ ನೀನೇ ಹೇಳಪ್ಪಾ…. ಬಡವರನ್ನು ಶೋಷಿಸಿ, ಅವರ ರಕ್ತವನ್ನೇ ಹೀರಿ ನೀನು ಶ್ರೀಮಂತನಾಗಿರುವಿ. ಇದರಿಂದ ನಿನ್ನ ರೊಟ್ಟಿಗೆ ಬಡವರ ರಕ್ತವೇ ಅಂಟಿದೆ. ಆದರೆ ಬಡರೈತನೋ ದಿನವಿಡೀ ಪರಿಶ್ರಮಿಸಿ, ಬೆವರಿಳಿಸಿ ಸಂತೃಪ್ತ ಬಾಳ್ವೆ ನಡೆಸುತ್ತಿದ್ದಾನೆ. ಹೀಗಾಗಿ ಈ ರೊಟ್ಟಿಯಲ್ಲಿ ಮಧುರ ಹಾಲಷ್ಟೇ ಉಕ್ಕುತ್ತಿದೆ. ನಾನೀಗ ಯಾವ ರೊಟ್ಟಿ ತಿನ್ನಬೇಕು.. ಹೇಳುವಿಯಾ?'”
ಶ್ರೀಮಂತ ನಾಚಿಕೆಯಿಂದಲೇ ತಲೆತಗ್ಗಿಸಿದ. ತನ್ನ ಐಶ್ವರ್ಯವನ್ನೆಲ್ಲ ಬಡಬಗ್ಗರಿಗೆ ದಾನ ಮಾಡುವುದಾಗಿಯೂ ವಾಗ್ದಾನ ಮಾಡಿದ.
ನೀತಿ :– ಇದೊಂದು ಸಾಧುಸಜ್ಜನರ ವಿಶೇಷ ಗುಣ. ಪರಿಶ್ರಮವೇ ಸಹಾನುಭೂತಿ ಹಾಗೂ ಸಜ್ಜನಿಕೆಯ ಒಂದು ಭಾಗ. ಇದು ಇದ್ದಲ್ಲಿ ಅಮೃತ ಸದೃಶವಾದ ಹಾಲಿನಷ್ಟೆ ಮನಸ್ಸು ಪವಿತ್ರ ಇರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.