ನಿಮಗೆ ಗೊತ್ತಾ, ಬ್ರಿಟಿಷ್ ಸರ್ಕಾರದಲ್ಲಿ ‘ಲಿಂಗಾಯತ ರೆಜಿಮೆಂಟ್’ ಅಂತ ಸೇನಾ ತುಕುಡಿ ಇತ್ತು!
ಸುಳ್ಳೇ ಮೊದಲು ಮಾಡಿ ಬಹು ದೊಡ್ಡ ಚಳವಳಿಯನ್ನ ಮತ್ತು ಬಸವಾದಿ ಶರಣರಿಗೆ ಅವಮಾನ ಮಾಡುತ್ತಿರುವ ಜನರನ್ನು ಕಂಡು ಏನು ಹೇಳೋದು? ಜನಗಣತಿಯಲ್ಲಿ ಆಗ ಪ್ರತ್ಯೇಕ ಕಾಲಂ ಕೂಡ ಬ್ರಿಟೀಷರೇ ನೀಡಿದ್ದರು. ನಮ್ಮವರಿಗಿಂತ ಆಂಗ್ಲರೇ ನಮ್ಮ ಬಸವಾದಿ ಶರಣರನ್ನು ಅರ್ಥ ಮಾಡಿಕೊಂಡಿದ್ದರೆಂದರು. ನಮಗಾಗಿಯೇ ಪ್ರಾಣ ನೀಡಿದ ಮಹಾನ್ ಜೀವಗಳನ್ನು ನಾವೇ ಹೊರಳಿ ನೋಡದೆ, ಅವರನ್ನು ಅರ್ಥೈಸಿಕೊಳ್ಳದೇ ನಮ್ಮದೇ ಒಣ ಧಿಮಾಕಿನಲ್ಲಿ, ಮೂರ್ಖತನದಲ್ಲಿ ಮುಳುಗಿ ಹೋಗಿದ್ದೇವೆ.
ನಿಮಗೆ ಗೊತ್ತಾ, ಬ್ರಿಟಿಷ್ ಸರಕಾರದಲ್ಲಿ ‘ಲಿಂಗಾಯತ ರೆಜಿಮೆಂಟ್’ ಅಂತ ಸೇನಾ ತುಕುಡಿಯೇ ಇತ್ತು! ಆಗ ಬ್ರಿಟಿಷ್ ಸರಕಾರದಲ್ಲಿ ‘ಲಿಂಗಾಯತ ರೆಜಿಮೆಂಟ್’ ಅಂತ ಸೇನಾ ತುಕುಡಿಯೇ ಇತ್ತೆಂದರೆ ಯಾರೂ ನಂಬಲ್ಲ. ಇದು ಸತ್ಯ. ಸೇನೆಯಲ್ಲಿ ಲಿಂಗಾಯತ ಧರ್ಮದವರದೇ ಒಂದು ತುಕುಡಿ ಇತ್ತು ಮತ್ತು ಅದು ಶೌರ್ಯಕ್ಕೆ ಹೆಸರಾಗಿತ್ತು. ಬ್ರಿಟೀಷರಿಗೆ ಅದು ಮೆಚ್ಚಿನ ತುಕುಡಿಯೂ ಆಗಿತ್ತು.
ಆದರೆ, ಬಸವಾದಿ ಶರಣರನ್ನು ಅರ್ಥೈಸಿಕೊಳ್ಳದ ನಾವು ನಮ್ಮದೇ ಒಣ ಧಿಮಾಕಿನಲ್ಲಿ, ಮೂರ್ಖತನದಲ್ಲಿ ಮುಳುಗಿ ಹೋಗಿದ್ದೇವೆ. ಇದು ಇನ್ನೂ ಎಷ್ಟು ದಿನ? ಸಾಕಿಲ್ಲಿಗೆ. ಇನ್ನಾದರೂ ನಾವು ಮನುಷ್ಯರಾಗೋಣ. ಲಿಂಗಾಯತ ಎಂದರೆ, ಅದೊಂದು ಜಾತಿ-ಮತ ಎಂದು ಹೆಚ್ಚಿನವರು ಪರಿಗಣಿಸಿದ್ದರಿಂದಲೇ ಇಷ್ಟೆಲ್ಲ ಕಷ್ಟವಾಗುತ್ತಿದೆ. ಹೀಗೆಲ್ಲ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಬಸವಾದಿ ಶರಣರ ಆಶಯವನ್ನು ನಾವು ಅರಿತಿದ್ದರೆ ಈ ಧರ್ಮ ಎಂದೋ ವಿಶ್ವ ಮಾನ್ಯವಾಗುತ್ತಿತ್ತು.
ಈ ಅರಿವಿಕೆಯೇ ಈಗಿನ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟದ ಮೂಲ. ಅರಿವೇ ಗುರು ಎಂದು ಸಾರಿದ ಶರಣರನ್ನು ಅರಿಯುವುದೇ ಈ ಜನಾಂದೋಲನದ ಉದ್ದೇಶ. ಅದಾಗುತ್ತಿದೆ ಈಗ, ಹ್ಯಾಗೆಂದರೆ ಈ ಲಿಂಗಾಯತ ಧರ್ಮ ಚಳುವಳಿಯಲ್ಲಿ ಪರಿಯ ಜನರ ಪಾಲ್ಗೊಳ್ಳುವಿಕೆಯಿಂದ. ಈ ಸಂಘರ್ಷ, ವಾದ-ವಿವಾದ, ವೀರಶೈವದ ಗೋಜಲು ಎಲ್ಲ ಒಂದು ರೀತಿಯಲ್ಲಿ ನಮಗೆ ಒಳ್ಳೆಯದು ಮಾಡಿದೆ ಎಂದೇ ಹೇಳಬೇಕು. ಯಾಕೆಂದರೆ, ಇಂತಹ ಗದ್ದಲದಿಂದಲೇ ನಿಜವಾದ ಲಿಂಗಾಯತ ಏನು ಎನ್ನುವುದು ಕನಿಷ್ಠ ಕನ್ನಡದ ಜಗತ್ತಿಗೆ ಗೊತ್ತಾಗುತ್ತಿದೆ.
ಪಕ್ಕದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕೇರಳದಲ್ಲೂ ಇದು ವ್ಯಾಪಿಸಿದೆ. ನಮ್ಮಲ್ಲಿನದೇ ದಕ್ಷಿಣ ಕರ್ನಾಟಕದ ಎಷ್ಟೋ ಜನಕ್ಕೆ ಬಸವಣ್ಣ ಎಂದರೆ ಬರೀ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ..’ ಎನ್ನುವ ಮಟ್ಟಕ್ಕಷ್ಟೇ ಸೀಮಿತರಾಗಿದ್ದರು. ಇದು ಬಿಟ್ಟು ಬಹಳೆಂದರೆ, ‘ಇವನಾರವ ಇವನಾರವ..’ ಅಂತ ಹೇಳುತ್ತಿದ್ದರು. ಈಗ ಈ ಕಾಳ್ಗಿಚ್ಚಿನ ಹೋರಾಟದ ಸಂದರ್ಭ ಇದೇ ವಚನ ಬಳಿಸಿ, ‘ಇವನಾರವ ಇವನಾರವ.. ಎಂದು ಬಸವಣ್ಣ ಹೇಳಿದ್ದಾರೆ, ನೀವ್ಯಾಕೆ ಹೀಗೆ ನಾವು ಬೇರೆ ನೀವು ಬೇರೆ ಅಂತೀರಿ. ಹಿಂದೂ ಅಲ್ಲ ಎಂದು ಯಾಕೆ ಹೇಳುತ್ತಿದ್ದೀರಿ’ ಎಂದು ಕೆಲವರು ಬುದ್ಧಿ ಹೇಳುತ್ತಿರುವುದನ್ನು ನೋಡಿದ್ದೇವೆ. ಇದೆಲ್ಲ ಯಾಕೆಂದರೆ ತಿಳಿವಳಿಕೆ ಕೊರತೆಯ ಕಾರಣಕ್ಕೆ. ಬಸವಣ್ಣ ಮತ್ತು ಶರಣರು ನಮಗಾಗಿ ಏನು ಮಾಡಿದರು ಎನ್ನುವುದೇ ನಮಗೆ ಗೊತ್ತಾಗದಂತೆ ಒಂಬೈನೂರು ವರ್ಷಗಳ ನಂತರವೂ ತಡೆದಿರುವುದೇ ಕಾರಣ.
ಈಗ ಆ ಪರದೆ ಕಲ್ಯಾಣ ಕ್ರಾಂತಿಯ ನಂತರ ದೊಡ್ಡ ಮಟ್ಟದಲ್ಲಿ ಜನಾಂದೋಲನ ರೂಪ ಪಡೆದು ಸರಿಯುತ್ತಿದೆ. ಇದೇ ಈಗ ಕೆಲವರಿಗೆ ಆಗಿ ಬರುತ್ತಿಲ್ಲ. ಬಸವಣ್ಣ ಎಂದರೇನೆ ಸಂವಿಧಾನ. ನಾಗರಿಕ ಸಮಾಜವಾದ ನಂತರ ಸಂವಿಧಾನ, ಕಟ್ಟಳೆ, ಸಮ ಸಮಾಜವನ್ನು ನಾವು ಚಿಂತಿಸುವ ಮೊದಲೇ ಅದನ್ನು ಸಾಮಾನ್ಯರ ಬದುಕೇ ಒಂದು ಸಂವಿಧಾನವಾಗಿ ಶರಣರು ಆಗು ಮಾಡಿ ಬಸವ ಕಲ್ಯಾಣದಲ್ಲಿ ತೋರಿಸಿದರು. ಇದನ್ನು ನಾವು ಅರಿತರೆ ಎಲ್ಲವೂ ಅರಿತಂತೆಯೇ.
ಎಲ್ಲ ವರ್ಗಗಳಿಗೆ ಮಾನವೀಯತೆಯ ಜೀವ ನೀಡಿದ ಶರಣರು, ಅವರನ್ನು ದೈವತ್ವಕ್ಕೆ ಏರಿಸಿದರು. ಈಗಲೂ ಮಂದಿರ, ಮಸೀದಿಗಳಿಗಾಗಿ ಸುಪ್ರೀಮ್ ಕೋರ್ಟ್‍ನಲ್ಲಿ ಈ ಕ್ಷಣಕ್ಕೂ ನಾವು ಬಡಿದಾಡುತ್ತಿದ್ದೇವೆ. ದೇವರ ಅಸ್ತಿತ್ವವನ್ನು ಕಟ್ಟಡಗಳಲ್ಲಿ ಕಾಣುತ್ತಿದ್ದೇವೆ. ಅದಕ್ಕಾಗಿ, ಆ ಹಟವನ್ನು ಸಾಧಿಸಲು ನಾವು ಎಷ್ಟೋ ಜೀವಗಳನ್ನು ಬಲಿಯೂ ಪಡೆಯುತ್ತಿದ್ದೇವೆ. ಆ ಕಾರಣಕ್ಕೆ ಇವತ್ತು ಭಯೋತ್ಪಾದನೆ ಜಗತ್ತನ್ನು ಆಳುತ್ತಿದೆ. ಇದೆಲ್ಲದಕ್ಕೆ ಅರಿವುಗೇಡಿತನದ ವ್ಯಾಧಿಯೇ ಕಾರಣ.
ಶರಣರು, ಕಾಣದ ದೇವರನ್ನು ಬಯಲಲ್ಲೇ ಕಂಡರು. ದೇಹವನ್ನೇ ದೇವಾಲಯ ಮಾಡಿದರು. ಅವರ ಸರಳ ಸೂತ್ರಗಳು, ಮಾಡು ಮತ್ತು ಉಣ್ಣುವ ಕಾಯಕತನ ಮತ್ತು ನೀಡುವಿಕೆಯ ದಾಸೋಹದಿಂದ ಮನುಷ್ಯನನ್ನು ಪ್ರಕೃತಿಯ ಸಹಜತೆ ಎಡೆಗೆ ಬೆರೆಸಿದರು. ಇಷ್ಟೊಂದು ಸಮೂಹ, ಜನ ಸಂಖ್ಯೆಯಲ್ಲಿರುವ ನಾವು ಮನುಷ್ಯರು ಕೊಡು-ಕೊಳ್ಳುವಿಕೆ ಮತ್ತು ಸಕಲ ಜೀವಗಳಲ್ಲಿ ಲೇಸನ್ನು ಬಯಸಿ ಮಾತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಇದೊಂದೇ ವಿಶ್ವಕ್ಕೆ ಪರಿಹಾರ. ಆ ವಿಶ್ವದ ಪ್ರತೀಕವೇ ಇಷ್ಟ ಲಿಂಗ! ಅದನ್ನು ನೋಡಿದಾಗೊಮ್ಮೆ ‘ನಾವೇನು’ ಅಂತ ಪದೇ ಪದೇ ಅರ್ಥವಾಗಬೇಕು. ಇದೇ ಲಿಂಗಾಯತ. ಮತ್ತೇನೂ ಇದರಲ್ಲಿ ಬ್ಯಾರೆ ಇಲ್ಲ! ಎಲ್ಲ ಸರಳ ಸರಳ.
ಮನುಷ್ಯ ಅಂತರಂಗದ ಅರಿವಿಲ್ಲದೆ, ದಡ್ಡನಾಗಿ ಅದರಿಂದ ದುಷ್ಟನಾಗಿ ಮತ್ತು ತಾನೊಬ್ಬ, ತನ್ನಿಂದ ತನಗೆ, ಬೇಕಾದವರಷ್ಟೇ ಬಾಳುವ ರಾಕ್ಷಸೀ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾನೆ. ಇದೇ ಎಲ್ಲ ಸಂಕಟಕ್ಕೆ ಮೂಲ. ಮೂಲವಾಗಿ ಆತ ಇನ್ನೂ ಬೌದ್ಧಿಕವಾಗಿ ಬೆಳೆಯಲಿಲ್ಲವೇನೊ? ಹಾಗೆ ಬೆಳೆಯದ ಮನುಷ್ಯನನ್ನು ಬೆಳೆಸಿದವರು ಬಸವಣ್ಣ ಮತ್ತು ಶರಣರು. ಹಾಗಾಗಿ ನಮ್ಮೆಲ್ಲ ತುಮುಲಗಳಿಗೆ ಔಷಧ ಇರುವುದೇ ಇವರ ಮಾರ್ಗದಲ್ಲಿ. ಅದು ವೈಜ್ಞಾನಿಕ ಮತ್ತು ಸಹಜ, ಸರಳ ಸತ್ಯದ ವಾಸ್ತವ ಆಚರಣೆಗಳಲ್ಲಿ. ಇದೆಲ್ಲ ಒಟ್ಟು ಗೂಡಿಸಿಕೊಟ್ಟಿರುವ ಒಟ್ಟು ರೂಪವೇ ಈ ‘ಲಿಂಗಾಯತ’. ಇದನ್ನು ಅರ್ಥ ಮಾಡಿಕೊಂಡರೆ ಈ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಯಾರೂ ವಿರೋಧಿಸುವುದಿಲ್ಲ.
ಈಗ ಖುಷಿಯಾಗಿರೋದೆಂದರೆ, ಇಂಥ ಆಗುಗೊಳ್ಳುವಿಕೆಗೆ ಚಾಲನೆ ಸಿಕ್ಕಿರುವುದು ಮತ್ತು ಇದನ್ನು ಜನ ಸಾಮಾನ್ಯರೇ ರೋಸಿ ಹೋಗಿ ಚಳಚಳಿಯನ್ನು ತಮ್ಮ ಕೈಗೆ ತೆಗೆದುಕೊಂಡಿರುವುದು. ಲಿಂಗಾಯತ ಧರ್ಮ ಎಂದೋ ಆಗಿತ್ತು. ಇದನ್ನು ಹದಿನೆಂಟನೆಯ ಶತಮಾನದಲ್ಲೇ ಪ್ರತ್ಯೇಕ ಧರ್ಮವೆಂದು ಗುರುತಿಸಿದ್ದರು. ಮಾನ್ಯತೆ ಕೊಡುವ ಹಂತದಲ್ಲೇ ಇತ್ತು. ಸ್ವಾತಂತ್ರ್ಯ ನಂತರ ನಮ್ಮದೇ ಮೈಸೂರು ರಾಜ್ಯದಲ್ಲಿ ನಮಗೇ ಅನ್ಯಾಯವಾಯಿತು. ಸುಳ್ಳೇ ‘ಮೇಲುರಿಮೆ’ಯ ಸಲುವಾಗಿ ವೀರಶೈವಕ್ಕೆ ಗಂಟು ಬಿದ್ದ ನಾವು ಆಗಿನಿಂದ ಈತನಕ ತೊಳಲಾಡುತ್ತಿದ್ದೇವೆ!
ಈಗಲಾದರೂ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲೇಬೇಕಿದೆ. ಕೇಂದ್ರವೂ ಇದನ್ನು ಪರಿಗಣಿಸಲೇಬೇಕು. ಸಮಾವೇಶಗಳಿಂದ ಜನಾಭಿಪ್ರಾಯ ರೂಪುಗೊಂಡಿದೆ. ಇದು ಕೊನೆಯ ಹಂತ. ಇದೆಲ್ಲ ಜನವರಿ ತಿಂಗಳಷ್ಟೊತ್ತಿಗೆ ಮುಗಿದು, ಒಂದು ಹಂತಕ್ಕೆ ಬರಲಿದೆ. ಈ ಸರಕಾರದ ಮಟ್ಟದಲ್ಲೂ ಯಶ ಕಾಣದಿದ್ದರೆ, ಸುಪ್ರೀಮ್ ಕೋರ್ಟ್ ಇದ್ದೇ ಇದೆ. ಅದಕ್ಕೆ ಬೇಕಾಗುವ ಎಲ್ಲ ದಾಖಲೆಗಳೂ ಇವೆ. ಈಗಲೇ ಕೋರ್ಟಿಗೂ ಹೋಗಬಹುದು, ಆದರೆ ನೀವ್ಯಾಕೆ ಸರಕಾರದ ಹತ್ತಿರ ಹೋಗಲಿಲ್ಲ ಅಂತ ಕೇಳಿಯೇ ಕೇಳುತ್ತಾರಾದ್ದರಿಂದ ಸರಕಾರಕ್ಕೆ ಒತ್ತಡ ತರಲಾಗುತ್ತಿದೆ. ಒಂದು ಅಡೆತಡೆ ಎಂದರೆ ವೀರಶೈವದ ತಪ್ಪು ಕಲ್ಪನೆ. ಆಗಿದ್ದೆಲ್ಲ ಒಳ್ಳೆಯದೇ. ನಮ್ಮ ಲಿಂಗಾತರಿಗೆ ‘ತಾವು ನಿಜಕ್ಕೂ ಇರುವುದಾದರೂ ಏನಂತೆ’ ತಿಳಿಯಲು ಮುಸುಕು ಹರಿಯುತ್ತಿದೆ. ಬಸವಣ್ಣನ ಬೆಳಕಾದರೂ ಬರುತ್ತಿದೆ.
ಪತ್ರಕರ್ತರು
(ಸಂಪರ್ಕ; 88809 59555)
Please enclose documents .otherwise its a bundle of lie.