ಬಸವಭಕ್ತಿ

ರಾಹುಲ್ ಗಾಂಧಿಗೆ ಕನ್ನಡದಲ್ಲಿ ಬಸವಣ್ಣನ ವಚನ ಹೇಳಲು ಹೇಳಿದವರಾರು?

ವಿನಯ ಮುದನೂರ್

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ದೃಷ್ಠಿ ಕರ್ನಾಟಕದ ಮೇಲಿದೆ. ಅಂತೆಯೇ ಮೇಲಿಂದ ಮೇಲೆ ಕರ್ನಾಟಕ ಪ್ರವಾಸ ಮಾಡಿ ಜನರ ಮನ ಸೆಳೆಯಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಜನರ ಮನಸ್ಸನ್ನು ಗೆಲ್ಲಲು ಸಂತರು, ಶರಣರು ಮತ್ತು ದಾರ್ಶನಿಕರ ಹೆಸರು ಹೇಳುವುದು.  ಅವರ ನುಡಿ, ವಚನಗಳನ್ನು ಹೇಳಿ ಗಮನ ಸೆಳೆಯಲು ಮುಂದಾಗಿದ್ದಾರೆ.

ಆದರೆ, ಇಂದು ಬೆಳಗಾವಿಯ ಅಥಣಿಯಲ್ಲಿ ಎಐಸಿಸಿ ರಾಹುಲ್ ಗಾಂಧಿ ಬಾಯಲ್ಲಿ ಬಸವಣ್ಣನವರ ವಚನ ಏನಾಯಿತು ಎಂಬುದು ಇಡೀ ದೇಶ ಕಂಡಿದೆ. ಇವನಾರವ ಇವನಾರವ … ವಚನವನ್ನು ಕನ್ನಡದಲ್ಲೇ ಹೇಳಲು ರಾಹುಲ್ ಕಷ್ಟಪಟ್ಟು ಠಿಣಕಾಡಿದ್ದು ಕೊನೆಗೂ ಅರ್ಥವಿಲ್ಲದ ಪದಗಳನ್ನು ಹೇಳಿ ಬಸವಣ್ಣನವರ ವಚನ ಹೇಳಿದೆ ಅಂತ ಬೀಗಿದ್ದು ನಗೆಪಾಟಲಿಗೀಡಾಗಿದೆ. ವಿಪಕ್ಷಗಳ ಅಣಕಕ್ಕೆ ಆಹಾರವಾಗಿದೆ.

ಬಸವಣ್ಣನವರ ವಚನ ಹೇಳಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದು ಮೆಚ್ಚಲೇಬೇಕಾದ ಸಂಗತಿ. ಆದರೆ, ಚುನಾವಣೆ ಎಂಬ ಕಾರಣಕ್ಕಾಗಿ, ಮತಬೇಟೆಗಾಗಿ ವಚನ ಬಳಸಿಕೊಳ್ಳಲು ಹೊರಟಿದ್ದು ಮತ್ತು ಪೂರ್ವ ತಯಾರಿ ಇಲ್ಲದೆ ತಪ್ಪುತಪ್ಪಾಗಿ ಹೇಳಿದ್ದು ನಿಜಕ್ಕೂ ಬೇಸರದ ವಿಷಯವೇ ಸರಿ.

ರಾಜ್ಯದ ನಾಯಕರು ಇನ್ನಾದರೂ ಕನ್ನಡದ ಗಂಧ ಗಾಳಿ ಗೊತ್ತಿಲ್ಲದವರಿಂದ ಇಂಥ ಸಾಹಸ ಪ್ರದರ್ಶನಕ್ಕೆ ಮುಂದಾಗುವುದನ್ನು ಕೈ ಬಿಡಲಿ. ಕನ್ನಡ ನಾಡಿನ ಸಂತರ, ಶರಣರ, ದಾರ್ಶನಿಕರ ಬಗ್ಗೆ ತಮ್ಮ ನಾಯಕರಿಗೆ ಪೂರ್ಣ ಮಾಹಿತಿ ನೀಡಲಿ. ಸಾಧ್ಯವಾದರೆ ಅದೇ ವಚನವನ್ನು ಅವರದ್ದೇ ಭಾಷೆಯಲ್ಲಿ ಅನುವಾದಿಸಿಕೊಂಡು ಅರ್ಥ ವಿವರಿಸುವಂತಾಗಲಿ.

ರಾಜಕೀಯ ಮತಬೇಟೆಗಾಗಿ ವಚನ ಬಳಸಿಕೊಳ್ಳಲು ಹೋಗಿ ತಾವು ಅಪಹಾಸ್ಯಕ್ಕೀಡಾಗುವುದರ ಜೊತೆಗೆ ನಮ್ಮ ಆದರ್ಶ ಪುರುಷರಿಗೆ ಅಪಮಾನ ಆಗುವಂತೆ ನಡೆದುಕೊಳ್ಳುವುದು ಸುತಾರಂ ಸರಿಯಲ್ಲ.  ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ರಾಜ್ಯ ರಾಜಕೀಯ ನಾಯಕರು ಎಚ್ಚೆತ್ತುಕೊಳ್ಳಬೇಕಿದೆ.

Related Articles

Leave a Reply

Your email address will not be published. Required fields are marked *

Back to top button