ಅಜ್ಜಿ ಮತ್ತು ‘ರೋಟಿ, ಕಪಡಾ ಔರ್ ಮಕಾನ್ ‘ ನೆನೆದ ರಾಗಾ
ಬೆಂಗಳೂರು: ನಗರದ ಕನಕನಪಾಳ್ಯದಲ್ಲಿಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಗೆ ಚಾಲನೆ ಸಿಕ್ಕಿದೆ. ಈ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿದ್ದ ಭಾಗವಹಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ನೆನೆದರು. ‘ರೋಟಿ, ಕಪಡಾ ಔರ್ ಮಕಾನ್’ ಯೋಜನೆ ಮೂಲಕ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರು ಬಡವರ ಏಳ್ಗೆಗೆ ಶ್ರಮಿಸಿದ್ದರು. ಯಾರೊಬ್ಬರು ಹಸಿವಿನಿಂದ ಬಳಲಬಾರದು, ಹಸಿವಿನಿಂದ ಸಾವಿಗೀಡಾಗಬಾರದೆಂಬುದು ಅವರು ಆಶಯವಾಗಿತ್ತು. ಇಂದು ಅವರ ಕನಸು ಕರ್ನಾಟಕದಲ್ಲಿ ನನಸಾಗುತ್ತಿದೆ ಎಂದಿದ್ದಾರೆ.
‘ಇಂದಿರಾ ಕ್ಯಾಂಟೀನ್’ ಕರ್ನಾಟಕ ಸರ್ಕಾರದ ಉತ್ತಮ ಯೋಜನೆಗಳಲ್ಲೊಂದಾಗಿದೆ. ಈ ಮೂಲಕ ಸರ್ಕಾರ ಹಸಿವು ಮುಕ್ತ ರಾಜ್ಯದ ಗುರಿ ತಲುಪುವಲ್ಲಿ ದಾಪುಗಾಲಿಟ್ಟಿದೆ ಎಂದರು. ಅಂತೆಯೇ ಕ್ಯಾಂಟೀನ್ ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಶುಚಿ ಮತ್ತು ರುಚಿ ಕಾಪಾಡಿಕೊಳ್ಳುವ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿವಹಸಿಬೇಕೆಂದು ಸಲಹೆ ನೀಡಿದರು.
ಸಿಎಂ ಸಿದ್ಧರಾಮಯ್ಯ ಮಾತನಾಡಿ ಹಸಿವು ಮುಕ್ತ ರಾಜ್ಯಕ್ಕಾಗಿ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಬಳಿಕ ಕಳೆದ ಮೂರು ವರ್ಷದಲ್ಲಿ ಯಾರೊಬ್ಬರೂ ಹಸಿವಿನಿಂದ ಅಸುನೀಗಿಲ್ಲ ಎಂದರು. ಅಂತೆಯೇ ಇಂದಿರಾ ಕ್ಯಾಂಟೀನ್ ಮೂಲಕ ಬಡ ಜನರಿಗೆ ಅತಿ ಕಡಿಮೆ ಹಣದಲ್ಲಿ ಫುಲ್ ಮೀಲ್ಸ್ ನೀಡಲಾಗುತ್ತಿದೆ ಎಂದರು.
ಕೇವಲ 5ರೂಪಾಯಿಗೆ ಉಪಹಾರ, 10ರೂಪಾಯಿಗೆ ಹೊಟ್ಟೆತುಂಬ ಊಟ ನೀಡಲಾಗುವುದು. ಜಾಗದ ಕೊರತೆಯಿಂದಾಗಿ ಇಂದು 101ಕ್ಯಾಂಟೀನ್ ಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲೇ ಇನ್ನೂ 98 ಕ್ಯಾಂಟೀನ್ ಗಳನ್ನು ತೆರೆಯಲಾಗುವುದು. ಅಂತೆಯೇ ರಾಜ್ಯದಾದ್ಯಂತ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ .