ಅಪಾಯಕ್ಕೆ ಆಹ್ವಾನಿಸುತ್ತಿರುವ ಹೆದ್ದಾರಿ ಗುಂಡಿಗಳು
ಹೆದ್ದಾರಿಯಲ್ಲಿ ಪ್ರಾಣ ಹೆಕ್ಕುವ ಗುಂಡಿಗಳಿವೆ ಹುಷಾರ್.!
ಹೆದ್ದಾರಿಯಲ್ಲಿರುವ ಗುಂಡಿಗಳು ಮುಚ್ಚುವಂತೆ ವಾಹನ ಸವಾರರ ಆಗ್ರಹ
ಯಾದಗಿರಿ,ಶಹಾಪುರಃ ನಗರದ ಡಿಗ್ರಿ ಕಾಲೇಜು ಸಮೀಪದ ಭೀಮರಾಯನ ಗುಡಿ ಮಾರ್ಗದ ಹೆದ್ದಾರಿಯಲ್ಲಿ ಸೇತುವೆ ಮೇಲೆ ಎರಡು ದೊಡ್ಡ ತಗ್ಗುಗಳು ಬಿದ್ದಿದ್ದು, ವಾಹನ ಸವಾರರ ಜೀವಕ್ಕೆ ಕುತ್ತು ತಂದೊಡ್ಡುತ್ತಿವೆ.
ಹೆದ್ದಾರಿ ನಡುವೆಯೇ ಬಿದ್ದಿರುವ ಈ ತಗ್ಗುಗುಂಡಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸುವ ಗೋಜಿಗೆ ಹೋಗದಿರುವದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೊನ್ನೆ ಮೊನ್ನೆ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ತಲೆಗೆ ಪೆಟ್ಟು ಬಿದ್ದಿರುವ ಕಾರಣ ಕಲಬುರ್ಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಬೈಕ್ ಹಿಂಬದಿ ಕುಳಿತಿದ್ದ ಎನ್ನಲಾದ ಗರ್ಭೀಣಿ ಮಹಿಳೆ ಸ್ಥಿತಿಯು ಚಿಂತಾಜನಕವಿದೆ ಎನ್ನಲಾಗಿದೆ. ಇದೇ ರೀತಿ ಹತ್ತಾರು ಘಟನೆಗಳು ನಡೆದಿವೆ.
ಕಳೆದ ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಈ ತಗ್ಗು ಪ್ರದೇಶದಲ್ಲಿ ಅಪಘಾತಗಳು ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ವಾಹನ ಸವಾರ ವೆಸ್ಲಿ ವೇದರಾಜ ಆರೋಪಿಸಿದ್ದಾರೆ.
ಹೆದ್ದಾರಿ ನಿರ್ವಹಣೆ ಮಾಡುವ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಜೇವರ್ಗಿಯಿಂದ ಶಹಾಪುರಕ್ಕೆ ಬರುವ ಹೆದ್ದಾರಿ ಮಧ್ಯೆ ಕಾಣಿಸಿಕೊಳ್ಳುವ ತಗ್ಗುಗಳನ್ನು ಗುರುತಿಸಿ ಸಮರ್ಪಕವಾಗಿ ಹೆದ್ದಾರಿ ಸುಧಾರಿಸುವ ಕಾರ್ಯ ಮಾಡಬೇಕು.
ನಗರದ ಭೀಮರಾಯನ ಗುಡಿಗೆ ತೆರಳುವ ಸೇತುವೆ ಮೇಲಿದ್ದ ಎರಡು ಗುಂಡಿಗಳು ಸಾಕಷ್ಟು ಅಪಘಾತ, ಅನಾಹುತಗಳನ್ನು ತಂದೊಡ್ಡುತ್ತಿದೆ. ಸಾಕಷ್ಟು ವಾಹನ ಸವಾರರು ಕೈ ಕಾಲುಗಳನ್ನು ಮುರಿದುಕೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಗುಂಡಿಗಳನ್ನು ದುರಸ್ತಿಗೊಳಿಸುವ ಮೂಲಕ ರಸ್ತೆ ಸಂಚಾರಕ್ಕೆ ಸಮರ್ಪಕ ಅನುಕೂಲ ಕಲ್ಪಿಸಬೇಕು ಎಂದು ವಾಹನ ಸವಾರರು ಮನವಿ ಮಾಡಿದ್ದಾರೆ.
..
ನಗರದಿಂದ ಭೀಮರಾಯನ ಗುಡಿಗೆ ಹೋಗುವ ಹೆದ್ದಾರಿ ಮಧ್ಯೆ ಸಾಕಷ್ಟು ಗುಂಡಿಗಳು ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಸಂಚಕಾರ ತಂದಿವೆ. ಸಾಕಷ್ಟು ಜನರು ಗುಂಡಿಗೆ ಬಿದ್ದು ಕೈಕಾಲು ಕಳೆದುಕೊಂಡಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹೆದ್ದಾರಿ ಮಧ್ಯೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಮುಂದೆ ಅನಾಹುತ ಸಂಬಂಧಿಸಿದಲ್ಲಿ ಅಧಿಕಾರಿಗಳೇ ಹೊಣೆ ಹೊರಬೇಕು.-ಶರಣಗೌಡ ಕಟ್ಟಿಮನಿ. ಕಾಂಗ್ರೆಸ್ ಮುಖಂಡ.