ಅಂಕಣ

ಕಾಂಗ್ರೆಸ್ಸಿನ ಮಹಾರಾಜಗೆ ಕರ್ನಾಟಕ ಮುಖ್ಯಮಂತ್ರಿಯೇ ಹೈಕಮಾಂಡ್!?

-ವಿನಯ ಮುದನೂರ್

ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಸೇರಿದ್ದ ಸಂದರ್ಭದಲ್ಲಿ ಸಿದ್ಧರಾಮಯ್ಯಗೆ ಪಕ್ಷದಲ್ಲಿ ಸಾಕಷ್ಟು ಇರಿಸು ಮುರಿಸು ಆಗಿತ್ತು. ಮೂಲ ಮತ್ತು ವಲಸಿಗ ಎಂಬ ಬಣಗಳು ಸೃಷ್ಠಿಯಾಗಿ ಸಾಕಷ್ಟು ಗೊಂದಲ ಮೂಡಿತ್ತು. ತಮ್ಮ ರಾಜಕೀಯ ಚಾಣಾಕ್ಷತನದಿಂದ ಎಲ್ಲವನ್ನೂ ಸರಿ ಮಾಡುತ ಬಂದ ಸಿದ್ಧರಾಮಯ್ಯ ವಿಪಕ್ಷ ನಾಯಕರಾದರು. ಬಳ್ಳಾರಿ ಗಣಿ ಧಣಿಗಳ ವಿರುದ್ಧ ತೊಡೆ ತಟ್ಟಿ ಪಾದಯಾತ್ರೆ ಮೂಲಕ ಕರ್ನಾಟಕ ಕಾಂಗ್ರೆಸ್ ಗೆ ನಾನೇ ನಾಯಕ ಎಂಬ ಸಂದೇಶ ಸಾರಿದರು.

2008ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಬಂದಾಗ ಅನಾಯಾಸವಾಗಿ ಮುಖ್ಯಮಂತ್ರಿ ಪಟ್ಟಕ್ಕೇರಿದರು ಸಿದ್ಧರಾಮಯ್ಯ. ಆದರೆ, ಪ್ರತಿ ಹಂತದಲ್ಲೂ ಮುಖ್ಯಮಂತ್ರಿ ಬದಲಾಯಿಸಲಾಗುತ್ತದೆ ಎಂಬ ಮಾತುಗಳು ರೆಕ್ಕೆಪುಕ್ಕ ಪಡೆದು ಹಾರಾಡಿದವು. ಆದರೆ, ಸಿದ್ಧರಾಮಯ್ಯ ಮಾತ್ರ ಎದುರಾದ ಸವಾಲುಗಳೆಲ್ಲವನ್ನು ನಿಭಾಯಿಸಿ ಅಧಿಕಾರವಧಿ ಪೂರೈಸಿದರು. ಅಷ್ಟೇಅಲ್ಲದೆ, ಬಹುತೇಕ ಕಾಂಗ್ರೆಸ್ ಹೈಕಮಾಂಡನ್ನೇ ಸಿದ್ಧರಾಮಯ್ಯ ಕಂಟ್ರೋಲ್ ತೆಗೆದುಕೊಂಡಿದ್ದಾರೆ. ಸದ್ಯ ರಾಹುಲ್ ಗಾಂಧಿಗೆ ಸಿದ್ಧರಾಮಯ್ಯ ಅವರೇ ಹೈಕಮಾಂಡ್ ಆಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಸಮಾವೇಶಗಳಲ್ಲಿ, ಸಂವಾದಗಳಲ್ಲಿ ಜನರ ಪ್ರಶ್ನೆಗಳಿಗೆ ಮೊದಲು ಸಿದ್ಧರಾಮಯ್ಯ ಅವರೇ ಉತ್ತರಿಸುತ್ತಾರೆ. ಬಳಿಕ ರಾಹುಲ್ ಗಾಂಧಿ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯಜೀ ಹೇಳಿದ್ದು ಸರಿ ಎಂಬ ಸೀಲ್ ನ್ನು ಒತ್ತುತ್ತಾರೆ. ಹಿಂದಿನ ರೈತ ಸಂವಾದವೊಂದರಲ್ಲಿ ರೈತ ಮಹಿಳೆಯೊಬ್ಬರು ಮದ್ಯಪಾನ ನಿಷೇದಧ ಬಗ್ಗೆ ಪ್ರಶ್ನೆ ಎತ್ತಿದ್ದರು. ಆಗ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಇಂಗ್ಲಿಷ್ ನಲ್ಲಿ ರಾಹುಲ್ ಗಾಂಧಿಗೆ ತರ್ಜುಮೆ ಮಾಡಿ ಹೇಳಿದರು. ಬಳಿಕ ಮದ್ಯಪಾನ ನಿಷೇದಕ್ಕೆ ಎಷ್ಟು ಜನ ಬೆಂಬಲಿಸುತ್ತಿರಿ ಕೈ ಎತ್ತಿ ಎಂದರು.

ರಾಹುಲ್ ಗಾಂಧಿ ಉತ್ತರಿಸುವ ಮುನ್ನ ಎದ್ದು ನಿಂತ ಸಿದ್ಧರಾಮಯ್ಯ ಹಾಗೆಲ್ಲ ನಿರ್ಧರಿಸೋಕೆ ಆಗೋಲ್ಲ. ಎಲ್ಲಾ ಕೈ ಕೆಳಗಿಳಿಸಿ ಎಂದು ಹೇಳಿದರು. ಅಕ್ಕಪಕ್ಕದ ರಾಜ್ಯಗಳಲ್ಲಿ ಮದ್ಯಪಾನ ನಿಷೇಧವಿಲ್ಲದೆ ನಾವು ನಿಷೇಧಿಸಿದರೆ ಅಕ್ರಮ ಹೆಚ್ಚಾಗಿ ಇದಕ್ಕಿಂತ ಭೀಕರ ಸ್ಥಿತಿ ನಿರ್ಮಾಣ ಆಗುತ್ತದೆ. ಈಗಾಗಲೇ ಮದ್ಯಪಾನ ನಿಷೇಧಿಸಿದ ರಾಜ್ಯಗಳ ಗತಿ ಏನಾಗಿದೆ ಎಂದು ವಿವರಿಸಿದರು. ಮದ್ಯಪಾನ ನಿಷೇದ ಆಗುವುದಾದರೆ ದೇಶದಾದ್ಯಂತ ಪೂರ್ಣ ನಿಷೇದ ಆಗಬೇಕು ಅದಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಅಂದಿದ್ದರು. ಬಳಿಕ ಮಾತನಾಡಿದ ರಾಹುಲ್ ಗಾಂಧಿ ಸಿದ್ಧರಾಮಯ್ಯರ ಮಾತಿಗೆ ಮುದ್ರೆ ಹಾಕಿದ್ದರು. ಹೀಗೆ ಅನೇಕ ಸಂದರ್ಭಗಳಲ್ಲಿ ಸಿಎಂ ಮಾತಿಗೆ ರಾಹುಲ್ ಸೈ ಎಂದಿದ್ದಾರೆ.

ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಬಾಯಲ್ಲಿ ಸಿದ್ಧರಾಮಯ್ಯನವರ ಮಾತುಗಳು ಹೊರಬೀಳುತ್ತಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದ ರಾಹುಲ್ ಗಾಂಧಿ ಈಗ ಜೆಡಿಎಸ್ ಪಕ್ಷದ ವಿರುದ್ಧವೂ ಕಿಡಿ ಕಾರತೊಡಗಿದ್ದಾರೆ. ಹಾಸನ ಸಮಾವೇಶದಲ್ಲಿ ಜೆಡಿಎಸ್ ಬಿಜೆಪಿಯ ಬಿಟೀಮ್ ಅಂದಿದ್ದ ರಾಹುಲ್ ಇಂದು ಜೆಡಿಎಸ್ ಅಂದರೆ ಜನತಾದಳ ಸಂಘ ಪರಿವಾರ ಎಂದು ವ್ಯಾಖ್ಯಾನಿಸಿದ್ದಾರೆ.

ಜೆಡಿಎಸ್ ಬಗ್ಗೆ ರಾಹುಲ್ ಗಾಂಧಿ ಆಡಿರುವ ಮಾತು ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಯ ಬಾಗಿಲನ್ನು ಬಂದ್ ಮಾಡಿದೆ. ಕಾಂಗ್ರೆಸ್ ಹೈಕಮಾಂಡ್ ಜೊತೆ ದೇವೇಗೌಡರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಚುನಾವಣೋತ್ತರ ಮೈತ್ರಿ ಆಗಲಿದೆ. ಧರ್ಮಸಿಂಗ್ ಕಾಲದಂತೆ ದೇವೇಗೌಡರು ಹೇಳಿದವರನ್ನೇ ಕಾಂಗ್ರೆಸ್ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಿದೆ ಎಂಬ ಲೆಕ್ಕಾಚಾರ ತಲೆ ಕೆಳಗಾಗಿದೆ.

ಕರ್ನಾಟಕದ ಮಟ್ಟಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಫೈನಲ್. ಅಷ್ಟೇ ಅಲ್ಲ, ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಪಾಲಿಗೆ ಸದ್ಯ ಸಿದ್ಧರಾಮಯ್ಯ ಅವರೇ ಹಿರೋ ಆಗಿ ಕಾಣಿಸುತ್ತಿದ್ದಾರೆ. ಪರಿಣಾಮ ರಾಹುಲ್ ಯಾರ ಮಾತಿಗೂ ಕಿವಿಗೊಡದೆ ಸಿದ್ಧರಾಮಯ್ಯ ಅವರ ಪ್ರತಿ ನಡೆಗೂ ಸೈ ಅಂತಿದ್ದಾರೆ, ಜೈ ಅಂತಿದ್ದಾರೆ. ಪರಿಣಾಮ ಜೆಡಿಎಸ್ ಅಂದರೆ ಜನತಾದಳ ಸಂಘ ಪರಿವಾರ ಎಂಬ ಮಾತನ್ನು ಸಿದ್ಧರಾಮಯ್ಯ ಅವರೇ ರಾಹುಲ್ ಬಾಯಲ್ಲಿ ಹೇಳಿಸಿದ್ದಾರೆ ಎಂಬುದು ರಾಜಕೀಯ ಪಂಡಿತರ ಅಂಬೋಣ.

ರಾಹುಲ್ ಗಾಂಧಿ ಜೆಡಿಎಸ್ ವಿರುದ್ಧ ಗುಡುಗುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಎಂಬ ಸಂದೇಶ ರವಾನಿಸುವುದು. ಕಾಂಗ್ರೆಸ್ಸಿನ ಮತಗಳನ್ನೇ ಪಡೆಯುವ ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿಸುವುದು. ಸಂಘ ಪರಿವಾರದ ಹಣೆಪಟ್ಟಿ ಕಟ್ಟುವ ಮೂಲಕ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ನತ್ತ ಸುಳಿಯದಂತಾಗಿಸುವ ರಾಜಕೀಯ ಲೆಕ್ಕಾಚಾರವೂ ರಾಹುಲ್ ಮಾತಿನ ಹಿಂದೆ ಅಡಗಿದೆ.

ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ಸಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಬೆಳೆದು ಕಾಂಗ್ರೆಸ್ ಮೂಲೆಗುಂಪು ಆಗುತ್ತಿದೆ. ಹೀಗಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದ್ದು ಸಿದ್ಧರಾಮಯ್ಯರಂತ ಚತುರ ರಾಜಕಾರಣಿಯ ನಾಯಕತ್ವವಿದೆ. ಪರಿಣಾಮ ಇಲ್ಲಿ ಪ್ರಾದೇಶಿಕ ಪಕ್ಷದ ಹಂಗು ಬೇಕಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದಂತಿದೆ. ಹೈಕಮಾಂಡ್ ನಿರ್ಧಾರಕ್ಕೆ ಸಿದ್ಧರಾಮಯ್ಯ ಸ್ಪಷ್ಟ ಬಹುಮತ ತಂದುಕೊಡುವರೆಂಬ ನಂಬಿಕೆಯೇ ಕಾರಣವಾಗಿದೆ.

ಕಾಂಗ್ರೆಸ್ಸಿನ ಮಹಾರಾಜನ ಮಾತು ಜೆಡಿಎಸ್ ನಾಯಕರನ್ನು ಕೆರಳಿಸಿದೆ. ಪರಿಣಾಮ ಕಾಂಗ್ರೆಸ್ಸಿನ ಜೊತೆ ಚುನಾವಣೋತ್ತರ ಮೈತ್ರಿ ಅಸಾಧ್ಯ ಎಂದು ಈಗಾಗಲೇ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ರಾಜಕೀಯ ಚಾಣಕ್ಯ ಬಿಜೆಪಿಯ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರೆ. ಬಿಜೆಪಿ ನಾಯಕರು ಜೆಡಿಎಸ್ ಬಗ್ಗೆ ಮೃದು ಧೋರಣೆ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಅಮಿತ್ ಶಾ ಜೆಡಿಎಸ್ ಬಗ್ಗೆ ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಕಾ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.

Related Articles

Leave a Reply

Your email address will not be published. Required fields are marked *

Back to top button