ರಾಹುಲ್ ಗಾಂಧಿ ಸಮಾವೇಶಕ್ಕಾಗಿ ತರಕಾರಿ ಮಾರುಕಟ್ಟೆ ತೆರವು!
ಕೊಪ್ಪಳ: ಫೆಬ್ರವರಿ 10 ರಂದು ರಾಜ್ಯಕ್ಕೆ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಮಾಡಲಿದ್ದು ಫೆ.10 ರಂದು ಕೊಪ್ಪಳದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ, ನಗರದ ಸಾರ್ವಜನಿಕ ಮೈದಾನದಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ರಾಹುಲ್ ಸಮಾವೇಶಕ್ಕಾಗಿ ಮೈದಾನದಲ್ಲಿನ ತಾತ್ಕಾಲಿಕ ತರಕಾರಿ ಮಾರುಕಟ್ಟೆ ತೆರವುಗೊಳಿಸಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ತರಕಾರಿ ಗೂಡಂಗಡಿಗಳ ತೆರವಿಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇಂದು ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಅಂಗಡಿಗಳ ತೆರವು ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ, ಅನಿವಾರ್ಯವಾಗಿ ವ್ಯಾಪಾರಿಗಳು ಅಂಗಡಿ ತೆರವಿಗೆ ಸಮ್ಮತಿಸಿದ್ದಾರೆ. ಕೆಲವರು ಸ್ವಯಂ ಪ್ರೇರಿತರಾಗಿ ಅಂಗಡಿ ತೆರವು ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಆಗಮನಕ್ಕಾಗಿ ಕೊಪ್ಪಳದ ನೂತನ ಪ್ರವಾಸಿ ಮಂದಿರಕ್ಕೆ ನವೀಕರಣ ಹೆಸರಿನಲ್ಲಿ 25 ಲಕ್ಷ ಖರ್ಚು ಮಾಡಿ ಎಸಿ ಅಳವಡಿಸಿದ್ದು ನಿನ್ನೆಯಷ್ಟೇ ಭಾರೀ ಸುದ್ದಿಯಾಗಿತ್ತು. ಇಂದು ರಾಹುಲ್ ಸಮಾವೇಶಕ್ಕಾಗಿ ಸಣ್ಣ ವ್ಯಾಪಾರಿಗಳ ಅಂಗಡಿ ತೆರವು ಮಾಡುತ್ತಿರುವುದು ಕೊಪ್ಪಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಚುನಾವಣೆ ಸಂದರ್ಭದಲ್ಲಿ ಕೊಪ್ಪಳ ಕಾಂಗ್ರೆಸ್ಸಿಗೆ ಎಷ್ಟರ ಮಟ್ಟಿಗೆ ಎಫೆಕ್ಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.