ಮೋದಿಯವರು ತಮ್ಮ ಎದುರಿಗೆ ಬರುವ BALL ಗೆ ಡಿಫೆನ್ಸ್ ಮಾಡಲಿಃ ರಾಹುಲ್ ಗಾಂಧಿ
4 ತಾಸು ತಡವಾಗಿ ಬಂದು 8 ನಿಮಿಷ ಮಾತಾಡಿದ ರಾಹುಲ್.!
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಜನಾಶೀರ್ವಾದ ಕಾರ್ಯಕ್ರಮ ಅಂಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರೋಡ್ ಶೋ ಆಯೋಜಿಸಲಾಗಿತ್ತು. ಅಲ್ಲದೆ ನಗರದ ಜೆಸ್ಕಾಂ ಕಚೇರಿ ಬಳಿ ರಾಹುಲ್ ಅವರಿಗೆ ಸನ್ಮಾನ ಮತ್ತು ಅವರ ಭಾಷಣ ಮಾತ್ರ ಮಾಡಲು ಚಿಕ್ಕದಾದ ಚೊಕ್ಕದಾದ ವೇದಿಕೆ ನಿರ್ಮಾಣ ಮಾಡಲಾಗಿತ್ತು.
ಆದರೆ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ಸುಮಾರು ನಾಲ್ಕು ತಾಸು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ, ಜನರಲ್ಲಿ ನಿರುತ್ಸಾಹ ಕಂಡು ಬಂದಿತು. ತಮ್ಮ ನೆಚ್ಚಿನ ನಾಯಕನ ಬರುವಿಕೆಗಾಗಿ ಕಾಯ್ದು ಕಾಯ್ದು ಜನ ಬೇಸತ್ತಿದ್ದರು. ಬಂದ ಜನರಿಗೆ ನೆರಳಿನ ವ್ಯವಸ್ಥೆ ಮತ್ತು ಯಾವುದೇ ಆಸನದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಜನ ಬಿಸಿಲಿನ ತಾಪಕ್ಕೆ ಸುಸ್ತುಹೊಡೆದರು.
ಸುಮಾರು 5 ಗಂಟೆಗೆ ಆಗಮಿಸಿದ ರಾಹುಲ್ ಗಾಂಧಿ ಕೇವಲ 8 ನಿಮಿಷ ಭಾಷಣ ಮಾಡಿ ಎಲ್ಲರತ್ತ ಕೈಬೀಸಿ ನಡೆದರು. ಮೋದಿಯವರು ಬ್ಯಾಟಿಂಗ್ ಮಾಡುವಾಗ ತಮ್ಮ ಎದುರಿಗೆ ಬರುವ ಬಾಲ್ ನೋಡಬೇಕು. ಅದು ಬಿಟ್ಟು ಅವರು ತಮ್ಮ ಹಿಂದೆ ನಿಂತ ವಿಕೆಟ್ ಕೀಪರ್‍ರನ್ನು ನೋಡುತ್ತಿದ್ದಾರೆ ಎಂದು ಕುಟಕಿದರು.
ಸಂಸತ್ತಿನಲ್ಲಿ ಸುಮಾರು ಒಂದು ತಾಸು ಹದಿನೈದು ನಿಮಿಷ ಮಾತಾನಾಡಿದ ಮೋದಿಯವರು, ಬಡವರ, ದೀನ ದಲಿತರ ಮತ್ತು ರೈತರಿಗೆ ಸಂಬಂಧಿಸಿದ ಯಾವುದೇ ಮಾತನಾಡಲಿಲ್ಲ. ಕೇವಲ ಕಾಂಗ್ರೆಸ್ ಪಕ್ಷ ಈ ಹಿಂದೆ 30 ವರ್ಷಗಳ ಹಿಂದೆ ಹೀಗೆ ಮಾಡಿತ್ತು. ಹಾಗೇ ಮಾಡಿರುವದರಿಂದ ಇವತ್ತು ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕೇವಲ ಹಿಂದಿನ ಕಾಂಗ್ರೆಸ್ ಆಡಳಿತದ ವೈಖರಿಯನ್ನು ಹೀಯಾಳಿಸಿದರು. ತಾವು ಏನು ಮಾಡುತ್ತಿದ್ದಾರೆ ಎಂಬುದನ್ನು ಎಲ್ಲೂ ಹೇಳಲಿಲ್ಲ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ, ಸ್ಥಳೀಯ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಸೇರಿದಂತೆ ಇತರರಿದ್ದರು.