ಪ್ರಮುಖ ಸುದ್ದಿ
ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ: ಬಹುಭಾಷಾ ನಟ ಪ್ರಕಾಶ ರೈ ಭರ್ಜರಿ ಭಾಷಣ
ಬೆಳಗಾವಿ: ರಾಷ್ಟ್ರೀಯತೆ ಮತ್ತು ಹಿಂದುತ್ವ ಎರಡೂ ಒಂದೇ ಎಂದು ಕೇಂದ್ರ ಸರ್ಕಾರದ ಸಚಿವರೊಬ್ಬರು ಮಾತನಾಡಿದ್ದಾರೆ. ಈ ರೀತಿಯ ಶಕ್ತಿಯನ್ನು ನಾವೆಲ್ಲಾ ಸೇರಿ ದಮನ ಮಾಡಬೇಕು. ಹೀಗೆಲ್ಲಾ ಮಾತನಾಡಿದರೆ ನಮಗೆ ಬೆದರಿಕೆ ಕರೆಗಳು ಬರುತ್ತವೆ ಎಂದು ಬಹುಭಾಷಾ ನಟ ಪ್ರಕಾಶ ರೈ ಪರೋಕ್ಷವಾಗಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ನಡೆದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಅವರು ಮನುಷ್ಯ ಮನುಷ್ಯನಾಗಿ ಬದುಕುವ ಅವಶ್ಯಕತೆ ಇದೆ. ಕೆಲವರು ಮುಗ್ಧತೆಯಲ್ಲಿ ಮೌಢ್ಯದ ಬೀಜ ಬಿತ್ತಿದ್ದಾರೆ. ಈವತ್ತಿನ ಸಮಾಜದಲ್ಲಿ ಹೊಸ ಮೌಢ್ಯಗಳನ್ನು ಬಿತ್ತಲಾಗುತ್ತಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶ ಪಾಲನೆ ಆಗಬೇಕಿದೆ. ಆದರೆ, ರಾಷ್ಟ್ರೀಯತೆ, ಹಿಂದು ಎರಡೂ ಒಂದು ಎಂದು ಹೇಳಿ ದಿಕ್ಕು ತಪ್ಪಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿದವರಿಗೆ ಬೆದರಿಸುವ ಪ್ರಯತ್ನ ನಡೆಯುತ್ತಿವೆ. ಕಳ್ಳರು, ಸುಳ್ಳರು, ಹೇಡಿಗಳು ನಮ್ಮನ್ನು ಹುಡುಕುತ್ತಿದ್ದಾರೆ ಎಂದು ಪ್ರಕಾಶ ರೈ ಕಿಡಿ ಕಾರಿದರು