ರೈಲ್ವೆ ಫಿಯಟ್ ಬೋಗಿ ಗುತ್ತಿಗೆ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ರಿಟ್-ಕಂದಕೂರ
ಯಾದಗಿರಿ: ಗುರುಮಠಕಲ್ ಕ್ಷೇತ್ರದ ಬಾಡಿಯಾಳ ಸಮೀಪದಲ್ಲಿ ರೈಲ್ವೆ ಫಿಯಟ್ ಬೋಗಿ ಕಾರ್ಖಾನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಾರದೆ ರೈಲ್ವೆ ಇಲಾಖೆ 10 ವರ್ಷಗಳ ಕಾಲ ಖಾಸಗಿ ಕಂಪನಿಗೆ ಗುತ್ತಿಗೆ ಕೊಡಲು ನಿರ್ಧರಿಸಿದ್ದು, ಇದನ್ನು ಪಶ್ನಿಸಿದ ಕಲಬುರಗಿಯ ಹೈಕೋರ್ಟ್‍ನಲ್ಲಿ ರಿಟ್ ಸಲ್ಲಿಸಿರುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ತಿಳಿಸಿದರು.
ಸುದ್ದಿಗಾರರೊಂದಿಗೆ ಜತೆ ಮಾತನಾಡಿದ ಅವರು, ರೈಲ್ವೆ ಅಧಿಕಾರಿಗಳು ಬಿಳಿಯಾನೆಗಳಾಗಿದ್ದು, ಯಾರನ್ನು ಕೇಳಿ ಕಾರ್ಖಾನೆಯನ್ನು 10 ವರ್ಷ ಗುತ್ತಿಗೆ ಕೊಡಲು ನಿರ್ಧರಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ, ಒಂದು ವೇಳೆ ಗುತ್ತಿಗೆ ನೀಡಿದ್ದಲ್ಲಿ ಸ್ಥಳೀಯ ಉದ್ಯೋಗವಕಾಶಗಳಿಂದ ಮತಕ್ಷೇತ್ರದ ಯುವಕರು ವಂಚಿತರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಹೈಕೊರ್ಟ್‍ನಲ್ಲಿ ತಾವು ರಿಟ್ ಸಲ್ಲಿಸಿರುವುದಾಗಿ ಹೇಳಿದರು.
ಕಡೇಚೂರು-ಬಾಡಿಯಾಳ ಕೈಗಾರಿಕಾ ವಲಯದಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ 15 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ. ಇನ್ನೂ ಹೆಚ್ಚಿನ ಅನುದಾನಕ್ಕೆ ಶಾಸಕರು ಬೇಡಿಕೆ ಸಲ್ಲಿಸಿದ್ದಾರೆ. ಇದರ ಜತೆಯಲ್ಲಿ ಗುರುಮಠಕಲ್‍ನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಮೂರು ಕಡೆ ಖಾಸಗಿ ಜಮೀನುಗಳನ್ನು ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೆ ಲೋಕೊಪಯೋಗಿ ಇಲಾಖೆಯಿಂದ 15 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದರು.