ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ ಯತ್ನ : ಸಮಯ ಪ್ರಜ್ಞೆ ಮೆರೆದ ರೈಲು ಚಾಲಕ
ಕಲಬುರ್ಗಿ: ಚಲಿಸುವ ರೈಲಿಗೆ ತಲೆಕೊಟ್ಟು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಯುವತಿ ಜೀವಹಾನಿಯಿಂದ ಬಚಾವಾಗಿದ್ದು ಬಲಗಾಲು ಮುರಿದ ಘಟನೆ ನಡೆದಿದೆ. ಕಾಲು ಮುರಿದ ಪರಿಣಾಮ ಪ್ರಜ್ಞಾಹೀನಳಾದ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರದ ಕೋರಂಟಿ ಹನುಮಾನ ದೇವಸ್ಥಾನ ಸಮೀಪ ರೈಲು ಹಳಿ ಮೇಲೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಹೆಸರು ಮತ್ತು ಆತ್ಮಹತ್ಯೆ ಯತ್ನಕ್ಕೆ ಕಾರಣ ಏನೆಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಬೆಳಿಗ್ಗೆ ಏಳು ಗಂಟೆಗೆ ತೆರಳುವ ಚೆನ್ನೈ – ದಾದರ್ ಎಕ್ಸಪ್ರೆಸ್ ರೈಲಿಗೆ ಬಲಿಯಾಗಲಿ ಯುವತಿ ಯತ್ನಿಸಿದ್ದಾಳೆ. ಆದರೆ, ರೈಲು ಹಳಿ ಮೇಲೆ ಯುವತಿ ಇರುವಿಕೆಯನ್ನು ಕಂಡು ರೈಲು ಚಾಲಕ ತಕ್ಷಣಕ್ಕೆ ರೈಲು ನಿಲ್ಲಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಪರಿಣಾಮ ಯುವತಿ ಪ್ರಾಣ ರಕ್ಷಣೆ ಆಗಿದೆ.
ಆದರೆ, ಬಲಗಾಲು ಮುರಿದ ಪರಿಣಾಮ ತೀವ್ರ ರಕ್ತಸ್ರಾವ ಆಗಿದ್ದ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ಹೀಗಾಗಿ, ಅಸ್ವಸ್ಥ ಯುವತಿ ಚೇತರಿಸಿಕೊಂಡ ಬಳಿಕವಷ್ಡೇ ಆಕೆ ಯಾರು.ಆತ್ಮಹತ್ಯೆ ಯತ್ನಕ್ಕೆ ಕಾರಣವೇನೆಂಬುದು ತಿಳಿದು ಬರಬೇಕಿದೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.