ಮಕ್ಕಳನ್ನು ಬರಸೆಳೆಯುತ್ತಿರುವ ರೈಲು ಮಾದರಿಯ ಜ್ಞಾನ ದೇಗುಲ ಕಂಡಿರಾ?
-ವಿನಯ ಮುದನೂರ್
ಜ್ಞಾನ ದೇಗುಲವಿದು ಕೈಮುಗಿದು ಬನ್ನಿ… ವಿದ್ಯೆಯೇ ಬಾಳಿನ ಬೆಳಕು… ಹೀಗೆ ಅನೇಕ ಗೋಡೆ ಬರಹಗಳು ಶಾಲಾ ಕಟ್ಟಡಗಳಲ್ಲಿ ಕಾಣಸಿಗುತ್ತವೆ. ಇನ್ನು ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯುವ ದೃಷ್ಠಿಯಿಂದ ಅನೇಕ ಶಾಲೆಗಳಲ್ಲಿ ಗೊಂಬೆಯ ಚಿತ್ರಗಳು, ಬಣ್ಣದ ಚಿತ್ತಾರಗಳು, ಮಕ್ಕಳಿಗೆ ಅಕ್ಷರಗಳನ್ನು ಪರಿಚಯಿಸಲು ವಿಭಿನ್ನ ಪ್ರಯತ್ನಗಳನ್ನು ಮಾಡಿರುವುದನ್ನು ಸಹ ಗಮನಿಸಬಹುದು. ಆದರೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಾರೋಪುರ ಗ್ರಾಮದ ಸರ್ಕಾರಿ ಶಾಲೆ ಮಾತ್ರ ಈವೆಲ್ಲದಕ್ಕಿಂತಲೂ ವಿಭಿನ್ನವಾಗಿ ರೂಪುಗೊಂಡಿದೆ.
ಅಸಲಿಗೆ ಹಾರೋಪುರ ಗ್ರಾಮಕ್ಕೆ ಸಮರ್ಪಕ ಸಂಚಾರಿ ವ್ಯವಸ್ಥೆಯೇ ಇಲ್ಲ. ಬಸ್ ಹಿಡಿಯಬೇಕೆಂದರೆ ಮೂರ್ನಾಲ್ಕು ಕಿ.ಮೀಟರ್ ನಡೆದುಕೊಂಡೇ ಹೋಗುವ ದುಸ್ಥಿತಿಯಿದೆ. ಮೂಲ ಸೌಕರ್ಯಗಳು ಸಹ ಪೂರ್ಣ ಪ್ರಮಾಣದಲ್ಲಿ ಪೂರೈಸಲಾಗಿಲ್ಲ. ರೈಲಂತೂ ಹಾರೋಹಳ್ಳಿಗೆ ಗಗನಕುಸುಮವೇ ಸರಿ. ಆದರೆ, ಗ್ರಾಮದ ಶಾಲಾ ಶಿಕ್ಷಕರು ಮಾತ್ರ ರೈಲು ಮಾದರಿಯಲ್ಲಿ ಶಾಲೆಯನ್ನು ಸಿದ್ಧಗೊಳಿಸಿ ವಿದ್ಯಾರ್ಥಿಗಳನ್ನು ಬರ ಸೆಳೆಯುತ್ತಿದ್ದಾರೆ.
ಹೌದು, ಈ ಶಾಲೆಯನ್ನು ಕಂಡಾಕ್ಷಣ ಒಂದು ಕ್ಷಣ ಜನ ಬೆರಗಾಗುತ್ತಾರೆ. ರೈಲು ಹೇಗೆ ಇಲ್ಲಿ ಬಂದು ನಿಂತಿತು ಎಂದು ತಬ್ಬಿಬ್ಬಾಗುತ್ತಾರೆ. ಅಷ್ಟೊಂದು ಆಕರ್ಷಕವಾಗಿ ಶಾಲೆಗೆ ರೈಲು ಮಾದರಿಯ ಬಣ್ಣ ಬಳಿಯಲಾಗಿದೆ. ರೈಲಿನ ಇಂಜಿನ್, ಬೋಗಿಗಳು , ಕಿಟಕಿ ಹಾಗೂ ಚಕ್ರಗಳು ಎಲ್ಲವೂ ಥೇಟು ರೈಲನಿಂತೆಯೇ ಭಾಸವಾಗುತ್ತದೆ. ಮಕ್ಕಳು ಶಾಲಾ ಕೊಠಡಿಯ ಬಾಗಿಲಲ್ಲಿ ನಿಂತು ಇಣುಕಿದರೆ ರೈಲು ಬೋಗಿಯಿಂದ ಇಣುಕಿದಂತೆಯೇ ಕಾಣುತ್ತದೆ.
ಶಾಲೆ ರೈಲಿನಂತೆ ಸಿದ್ಧವಾದ ಬಳಿಕ ವಿದ್ಯಾರ್ಥಿಗಳು ಶಾಲೆಗೆ ಬರುವ ಸಂಖ್ಯೆ ಹೆಚ್ಚಿದೆಯಂತೆ. ಅಲ್ಲದೆ ಬಲು ಖಷಿಯಿಂದಲೇ ವಿದ್ಯಾರ್ಥಿಗಳು ಹೆಚ್ಚು ಹೊತ್ತು ಶಾಲೆಯಲ್ಲಿ ಇದ್ದು ಆಟ-ಪಾಠದಲ್ಲಿ ತೊಡಗುತ್ತಿದ್ದಾರಂತೆ. ಇನ್ನು ಹಾರೋಹಳ್ಳಿಯ ಅಕ್ಕಪಕ್ಕದ ಊರಿನ ಜನರೂ ಸಹ ರೈಲು ಶಾಲೆಯನ್ನು ನೋಡಲು ಬರುತ್ತಿದ್ದಾರೆಂತೆ. ಶಾಲಾ ಶಿಕ್ಷಕರು ಹಾಗೂ ಶಿಕ್ಷಕರಿಗೆ ಸಾಥ್ ನೀಡಿದ ಗ್ರಾಮಸ್ಥರ ಕೆಲಸಕ್ಕೆ ಶಹಬ್ಭಾಶ್ ಅನ್ನುತ್ತಿದ್ದಾರೆ.
ಇನ್ನು ಮೊದಲಿಗೆ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಶಾಲಾ ಶಿಕ್ಷಕರು ನಾನಾ ಪ್ಲಾನ್ ಗಳನ್ನು ಮಾಡಿದ್ದಾರೆ. ಕೊನೆಗೆ ರೈಲು ಮಾದರಿಯ ಶಾಲೆ ಸಿದ್ಧಗೊಳಿಸಲು ತೀರ್ಮಾನಿಸಿದ್ದಾರೆ. ಅಂತೆಯೇ ಎಸ್ ಡಿ ಎಂ ಸಿ ಅದ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರಿಗೂ ವಿಷಯ ತಿಳಿಸಿದಾಗ ಎಲ್ಲರೂ ಸೈ ಅಂದಿದ್ದಾರೆ. ಎಲ್ಲರೂ ಸೇರಿ ಬಣ್ಣ ಬಳಿಯುವ ಕಲಾವಿದರನ್ನು ಕರೆಸಿ ವಿಭಿನ್ನ ಕೆಲಸಕ್ಕೆ ನಾಂದಿ ಹಾಡಿದ್ದಾರೆ.
ಗ್ರಾಮೀಣ ಭಾಗದ ಜನರೂ ಸಹ ತಮ್ಮ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಉತ್ತಮ ವಾತಾವರಣದ ನಿರ್ಮಾಣ ಆಗಬೇಕು ಎಂಬುದನ್ನು ಅರಿತು ಸಹಾಯ ಹಸ್ತ ಚಾಚಿದ್ದಾರೆ. ಹೀಗಾಗಿ, ಶಾಲಾ ಕಟ್ಟಡ ಈಗ ರೈಲಿನಂತೆ ಕಂಗೊಳಿಸುತ್ತಿದ್ದು ಮಕ್ಕಳಿಗೆ ಪ್ರಿಯವಾಗಿದೆ. ಶಾಲಾ ಶಿಕ್ಷಕರು ಸಹ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದು ಮಾದರಿ ಶಾಲೆಯಾಗಿ ರೂಪುಗೊಂಡಿದೆ.