ಶಹಾಪುರ – ಅಪಾಯದ ಅಂಚಿನಲ್ಲಿ ನಾಗರ ಕೆರೆ, ರಸ್ತೆ ತುಂಬೆಲ್ಲ ನೀರೋ ನೀರು..
ಧಾರಾಕಾರ ಮಳೆಃ ನೂರಾರು ಮನೆ, ಅಂಗಡಿಗಳು ಜಲಾವೃತ
ಯಾದಗಿರಿ, ಶಹಾಪುರಃ ಶುಕ್ರವಾರ ರಾತ್ರಿಯಿಂದ ಸತತ ಮಳೆ ಸುರಿಯುತ್ತಿರುವ ಪರಿಣಾಮ ಶಹಾಪುರ ನಗರದ ನಾಗರ ಕೆರೆ ಮತ್ತು ಮಾವಿನ ಕೆರೆಗಳು ತುಂಬಿ ತುಳುಕುತ್ತಿದ್ದು, ಕೋಡಿ (ಹೆಚ್ಚುವರಿ ನೀರು ಹಾದು ಹೋಗುವ ಸ್ಥಳ) ಮೂಲಕ ಅಪಾರ ಪ್ರಮಾಣ ನೀರು ಹರಿಯುತ್ತಿದೆ.
ನಾಗರ ಕೆರೆ ಕೋಡಿ ಒತ್ತುವರಿಯಿಂದ ಹೆಚ್ಚುವರಿ ನೀರು ಹಾದು ಹೋಗುವ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಕೆರೆಯ ಒಡ್ಡಿನ ತುದಿವರೆಗೂ ನೀರು ತುಂಬಿ ನಿಂತಿದ್ದು, ಚರಬಸವೇಶ್ವರ ದೇವಸ್ಥಾನದ ಮುಂಚೂಣಿವರೆಗೂ ನೀರು ಬಂದು ನಿಂತಿದೆ. ಕೆರೆಯ ಅಪಾಯದ ಮಟ್ಟ ಮೀರಿನಿಂತಿರುವದನ್ನು ಗಮನಿಸಿದ ಜನರು ತಾಲೂಕು ಆಡಳಿತಾಧಿಕಾರಿ ಗಮನಕ್ಕೆ ತಂದಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಜಗನ್ನಾಥರಡ್ಡಿ ಮತ್ತು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ ಹಾಗೂ ಸಿಪಿಐ ಚನ್ನಯ್ಯ ಹಿರೇಮಠ ನಾಗರ ಕೆರೆ ಕೋಡಿ ವೀಕ್ಷಿಸಿ ನಂತರ ಕೆರೆ ಒಡ್ಡಿನ ಮೇಲ್ತುದಿವರೆಗೂ ನೀರು ಬಂದಿರುವದನ್ನು ವೀಕ್ಷಿಸಿದರು.
ಈ ಕುರಿತು ತಾಲೂಕು ದಂಡಾಧಿಕಾರಿಗಳಿಗೆ ಕರೆ ಮೂಲಕ ಮಾಹಿತಿ ನೀಡಿದ್ದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಹಾಗೂ ನಾಗರಿಕರ ಹೋರಾಟ ಸಮಿತಿ ಪ್ರಮುಖರು ಸ್ಥಳದಲ್ಲಿದ್ದು ಅಪಾಯದ ಮುನ್ಸೂಚನೆ ಅರಿತು ಕೋಡಿಯಲ್ಲಿ ಸರಾಗವಾಗಿ ಇನ್ನಷ್ಟು ನೀರು ಹರಿಯಲು ವ್ಯವಸ್ಥೆಗೆ ಮುಂದಾಗಿದ್ದರು.
ತಾಲೂಕು ದಂಡಾಧಿಕಾರಿಗಳು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿ ಕೋಡಿ ಪ್ರದೇಶವನ್ನು ಇನ್ನಷ್ಟು ಅಗಲ ಮಾಡಿಸಿ ಸರಾಗವಾಗಿ ನೀರು ಹರಿಸಲು ಸೂಕ್ತ ವ್ಯವಸ್ಥೆ ಮಾಡಿಸಿದರು. ಆಗ ಕೆರೆ ಕೆಳಭಾಗದ ಬಡಾವಣೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.
ನಾಗರಕೆರೆ ಅಪಾಯಮಟ್ಟಕ್ಕೆ ತಲುಪಿದ್ದು, ಇನ್ನೇನು ಕೆರೆ ಒಡ್ಡಿನ ಮೇಲಿಂದ ನೀರು ಹಾರಿದ್ದಲ್ಲಿ ಇಡಿ ಅರ್ಧ ನಗರ ಮುಳುಗುವ ಭೀತಿ ಎದುರಾಗಿತ್ತು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಆತಂಕ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದಲೇ ತಹಸೀಲ್ದಾರರು ಹಾಗೂ ಪೌರಾಯುಕ್ತರ ಗಮನಕ್ಕೆ ತಂದು ಸ್ಥಳದಲ್ಲಿದ್ದು, ಚಾಮುಂಡಿ ನಗರದ ಜನತೆಯೊಂದಿಗೆ ಕೋಡಿ ಭಾಗದಲ್ಲಿ ಇನ್ನಷ್ಟು ನೀರು ಹರಿದು ಹೋಗುವಂತೆ ಜನರಿಂದ ಗುದ್ದಲಿ, ಹಾರಿಯಿಂದ ತೋಡಿ ನೀರು ಹರಿಯಲು ಅನುವು ಮಾಡಿಕೊಡಲಾಯಿತು ಎಂದು ಅವರು ವಿನಯವಾಣಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಿವಕುಮಾರ ತಳವಾರ, ರಾಜೂ ಮಡ್ನಾಳ, ಸಯ್ಯದ್ ಖಾದ್ರಿ, ಅಯ್ಯಣ್ಣ ನಾಸಿ, ಸಾಯಬಣ್ಣ ನಾಸಿ, ಶಿವಕುಮಾರ ಯಾದಗಿರಿ, ಬಾಬು ಗೋಡಿಯಾಳ, ಶಿವಪ್ಪ ನಾಸಿ ಸೇರಿದಂತೆ ಇತರರು ಇದ್ದರು. ಜನ ಜೀವನ ಅಸ್ತವ್ಯವಸ್ತಃ ಶುಕ್ರವಾರ ರಾತ್ರಿ ಸುರಿದ ಮಳೆಗೆ ನಗರದ ನೆಮಹಡಿಯ ಹಲವು ಅಂಗಡಿಗಳು ಸೇರಿದಂತೆ ಅನೇಕ ಬಡಾವಣೆಯ ನೂರಾರು ಮನೆಗಳು ಮತ್ತು ಹೆದ್ದಾರಿ ಸೇರಿದಂತೆ ಒಳ ರಸ್ತೆಗಳು ಅಂಗಡಿ, ದೇವಾಲಯಗಳು ಜಲಾವೃತವಾಗಿವೆ.
ಶಹಾಪುರ ತಾಲೂಕಿನ ಬೀರನೂರ ಗ್ರಾಮದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾದ ಕುರಿತು ವರದಿಯಾಗಿದೆ. ಅಲ್ಲಿನ ಕೃಷಿ ಜಮೀನಿನಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡಿದ್ದು, ಹತ್ತಿ, ತೊಗರೆ, ಜೋಳ ಸೇರಿದಂತೆ ಇತರೆ ಅಪಾರ ಪ್ರಮಾಣದ ಬೆಳೆಗಳು ಮಳೆ ನೀರು ಸಂಗ್ರಹಗೊಂಡ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು ಎಂದು ರೈತ ದೊಡ್ಡಪ್ಪ ಅಳಲು ತೋಡಿಕೊಂಡಿದ್ದಾರೆ.
ಮಳೆ ಪ್ರಮಾಣ ಮಿಲಿ ಮೀಟರ್ ನಲ್ಲಿ..
ಬೀರನೂರ-144 ಎಂಎಂ, ಶಹಾಪುರ-137 ಎಂಎಂ, ಸುರಪುರ-110 ಎಂಎಂ ನಷ್ಟು ಮಳೆಯಾದ ಕುರಿತು ಹವಾಮಾನ ಇಲಾಖೆ ತಿಳಿಸಿದೆ.
ಭೀಮರಾಯನ ಗುಡಿ 139 ಮೀ.ಮಿ, ಗೋಗಿ 32 ಮೀ,ಮಿ, ದೋರನಹಳ್ಳಿ – 114 ಮೀ.ಮೀ, ಹಯ್ಯಾಳ-64 ಮೀ.ಮಿ. ವಡಿಗೇರಾ-98 ಮೀ.ಮಿ., ಹತ್ತಿಗೂಡೂರ-119 ಮೀ.ಮಿ ಮಳೆಯಾಗಿದೆ ಎಂದು ಶಹಾಪುರ ಕೃಷಿ ಇಲಾಖೆ ಉಪನಿರ್ದೇಶಕ ಗೌತಮ ಅವರು ತಿಳಿಸಿದ್ದಾರೆ. ತಾಲೂಕಿನಲ್ಲಿ ಭೀಮರಾಯನ ಗುಡಿ ದಾಖಲೆಯ ಮಳೆಯಾಗಿದೆ ಎನ್ನಲಾಗಿದೆ.