ಕೊರೊನಾಕ್ಕಿಂತ ಕೋಮು ವೈರಸ್ ಡೈಂಜರ್ – ರಾಜರತನ್ ಅಂಬೇಡ್ಕರ್
ಸಂವಿಧಾನ ಸಂರಕ್ಷಣಾ ಆಂದೋಲನ
ಯಾದಗಿರಿ, ಶಹಾಪುರಃ ದೇಶದಲ್ಲಿ ಸಂವಿಧಾನ ಜಾರಿಯಿಂದ ಸಂವಿಧಾನದಡಿಯಲ್ಲಿ ಶೋಷಿತರು, ದೀನ ದಲಿತರು ಹಿಂದುಳಿದವರು ಇಂದು ತಮ್ಮ ಹಕ್ಕನ್ನು ಪ್ರತಿಪಾದಿಸಿ ನ್ಯಾಯ ಪಡೆಯುವ ಮೂಲಕ ಉತ್ತಮ ಬದುಕು ಕಟ್ಟಿಕೊಂಡಿರುವದು ಈ ಮನುವಾದಿಗಳಿಗೆ ಹೊಟ್ಟೆಕಿಚ್ಚು ಬಿದ್ದಂತಾಗಿದೆ. ಆ ಕಾರಣಕ್ಕೆ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಮರಿ ಮೊಮ್ಮಗ ರಾಜರತನ್ ಅಂಬೇಡ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶನಿವಾರ ಸಂವಿಧಾನ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ಆಂದೋಲನದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2500 ವರ್ಷಗಳವರೆಗೂ ಮನುಸ್ಮøತಿಯಂತೆ ಬದುಕು ನಡೆಸಿದವರಿಗೆ ಕೇವಲ 70 ವರ್ಷದ ಸಂವಿಧಾನದಡಿಯಲ್ಲಿ ಬದುಕು ನಡೆಸಲು ಆಗುತ್ತಿಲ್ಲವೆಂದರೆ, ಹಿಂದೆ ನಮ್ಮ ಜನಗಳು ಎಷ್ಟೊಂದು ಅನ್ಯಾಯ, ದಬ್ಬಾಳಿಕೆ ಸಹಿಸಿಕೊಂಡು ಜೀವಿಸಿರಬೇಕೆಂಬುದನ್ನು ನಾವೆಲ್ಲ ಚಿಂತಿಸಬೇಕಿದೆ.
ಸಂವಿಧಾನ ಎಲ್ಲಾ ಜನಾಂಗದವರಿಗೂ ಅವಕಾಶ ಕಲ್ಪಿಸಿದೆ. ಸರ್ವ ಸಮುದಾಯಕ್ಕೂ ಸಮಾನತೆಯನ್ನು ಕಲ್ಪಿಸಿದೆ. ಅಂತಹ ಹಕ್ಕನ್ನು ಸಹಿಸಿಕೊಳ್ಳಲು ಒಪ್ಪದ ಈ ಮನುವಾದಿ ಮನಸ್ಸುಗಳಿಗೆ ಸಂವಿಧಾನ ಬದಲಾಯಿಸಬೇಕು ಎಂಬ ವಿಚಾರ ಬರುವದು ಸಹಜ. ಕೊರೊನಾ ವೈರಸ್‍ಗಿಂತಲೂ ಈ ಕೋಮುವಾದ ಅತಿದೊಡ್ಡ ವೈರಸ್ ಆಗಿದೆ. ಮನುಷ್ಯ ಮನುಷ್ಯರನ್ನು ಕೊಲ್ಲುವ ಕೋಮು ಎಂಬ ವೈರಸ್ ಬುಡ ಸಮೇತ ನಾಶ ಪಡಿಸಬೇಕಿದೆ.
ಇವರೇನು ಮಾಡಿದರೂ ಸಂವಿಧಾನ ಬದಲಾಯಿಸುವದಾಗಲ್ಲ. ಈ ದೇಶದಲ್ಲಿ ಬಹುಸಂಖ್ಯಾತರಾದ ನಾವುಗಳು ಇದನ್ನು ಬಿಡುವುದಿಲ್ಲ. ಭಾರತದಲ್ಲಿ ಎಲ್ಲರೂ ಸಮಾನರು ನಾವೆಲ್ಲ ಭಾರತೀಯರು ಎಂಬುದನ್ನು ತಿಳಿದುಕೊಳ್ಳಬೇಕು. ಧರ್ಮ, ಮತ ಪಂಥಗಳನ್ನು ಒಡೆದು ಆಳುವದಲ್ಲ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 2014 ರಿಂದ ಇವಿಎಂ ಚಮತ್ಕಾರದಿಂದ ಗೆಲುವು ಸಾಧಿಸುತ್ತಿದೆ. ಸತ್ಯವನ್ನು ಮರೆಮಾಚುತ್ತಿದೆ. ಅಲ್ಲದೆ ತಮ್ಮ ಹುಳಕ್ಕನ್ನು ಮರೆಮಾಚುವ ಹಿನ್ನೆಲೆ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ಇದರಿಂದ ದೇಶದ ಮೂಲ ನಿವಾಸಿಗಳಿಗೆ ತೊಂದರೆ ಇದೆ. ಮುಸ್ಲಿಂ, ಹಿಂದುಳಿದ ವರ್ಗ, ಕ್ರೈಸ್ತರನ್ನು ಹೊರ ಹಾಕುವ ಹುನ್ನಾರ ಈ ಅಜೆಂಡಾದ ಹಿಂದೆ ಇದೆ ಎಂದು ಆರೋಪಿಸಿದರು.
ದೇಶದ ಮೂಲನಿವಾಸಿಗಳ ಹತ್ತಿರವೇ ನೀವು ಕಾಗದ ಪತ್ರ ಕೇಳುತ್ತಿರುವಿರೇ.? ನಾವು ಭಾರತೀಯರು ಎಂದು ತೋರಿಸಲು ಕಾಗದ ಪತ್ರ ನೀಡಬೇಕೆ.? ಎಂದು ಪ್ರಶ್ನಿಸಿದರು. ಭಾರತದಲ್ಲಿ ಎಲ್ಲರೂ ಸಮಾನರು ಪ್ರತಿ ಭಾರತೀಯನಿಗೂ ಪ್ರಶ್ನಿಸುವ ಹಕ್ಕಿದೆ. ಪ್ರತಿಭಟಿಸುವ ಹಕ್ಕಿದೆ. ಅದನ್ನು ಯಾರಿಂದಲೂ ತೊಡೆದು ಹಾಕುವದಾಗಲ್ಲ ಎಂದು ಗುಡುಗಿದರು.
ನಾವೆಲ್ಲ ಒಂದಾಗಿದ್ದೇವೆ ನೀವೇನೇ ಮಾಡಿದರೂ ನಾವು ಕುಗ್ಗುವದಿಲ್ಲ. ಅನಾದಿ ಕಾಲದಿಂದ ನಮ್ಮ ಪೂರ್ವಜರು ಉಂಡು ನೋವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಮಹಾತ್ಮರು ಕಟ್ಟಿದ ಭಾರತವನ್ನು ನಾವು ಉಳಿಸಿಕೊಳ್ಳುತ್ತೇವೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿದ್ದೇವೆ ಎಂದರು.
ಸಾನ್ನಿಧ್ಯವಹಿಸಿದ ಮೈಸೂರಿನ ಬಹುಜನ ಪೀಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಭಂತೆ ಮೆತ್ತಪಾಲ್ ಸಾನ್ನೀಧ್ಯವಹಿಸಿದ್ದರು. ಪ್ರಾಸ್ತವಿಕವಾಗಿ ಅಜಯ್ ಯಳಸಂಗಿಕರ್ ಮಾತನಾಡಿದರು. ನೀಲಕಂಠ ಬಡಿಗೇರ ಪ್ರಾರ್ಥಿಸಿದರು. ಸಮಿತಿಯ ರಾಯಪ್ಪ ಸಾಲಿಮನಿ ಹಾರಣಗೇರ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಸಲಾದಪುರ, ಅಬೀಬ್ ಸರಮತ್, ಸಯ್ಯದ್ ಖಾದ್ರಿ, ಶಿವಕುಂಆರ ತಳವಾರ, ಮಾನಪ್ಪ ಹೊಸಮನಿ, ಎಸ್ಡಿಪಿಐ ಖಾಲಿದ್, ಶಿವಪುತ್ರ ಜವಳಿ, ಬಾಬುರಾವ್ ಭೂತಾಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.