ಹೊಲ ಅಸನಿರಲು ಕಾಂಗ್ರೆಸ್ ಗಿಡ ಬೆಳಿಬಾರ್ದು, ರಾಜ್ಯಾಭಿವೃದ್ಧಿಗೆ ಕಾಂಗ್ರೆಸ್ ಇರಬಾರ್ದು – ರಾಜುಗೌಡ
ಶಹಾಪುರ: ಹೊಲಗಳು ಅಸನಾಗಿರಲು ‘ಕಾಂಗ್ರೆಸ್ ಗಿಡ’ ಬೆಳೆಯಲು ಬಿಡಬಾರದು ಎಂಬುದು ನಮ್ಮ ರೈತರಿಗೆ ಗೊತ್ತಿದೆ. ಕಾಂಗ್ರೆಸ್ ಗಿಡ ಬೆಳೆದಿದ್ದರೆ ಹೊಲ ಬೀಳು ಬಿತ್ತು ಅಂತಲೇ ಅರ್ಥ. ಅಂತೆಯೇ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಮಾರಕ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು. ಶಹಾಪುರ ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈಗಾಗಲೇ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ನಾವೆಲ್ಲಾ ಅವರಿಗೆ ಕೈಜೋಡಿಸೋಣ ಎಂದು ರಾಜೂಗೌಡ ಕರೆ ನೀಡಿದರು.
ಇದು ಪರಿವರ್ತನಾ ಯಾತ್ರೆಯೋ ಗುರು ಪಾಟೀಲ್ ವಿಜಯೋತ್ಸವವೋ!
ಶಹಾಪುರ ಶಾಸಕ ಗುರು ಪಾಟೀಲ್ ಅವರದ್ದು ಮಾತು ಕಡಿಮೆ ಕೆಲಸ ಜಾಸ್ತಿ. ಸರಳ, ಸೌಮ್ಯ ಸ್ವಭಾವದ ಸಜ್ಜನ ಶಾಸಕ ಗುರುಪಾಟೀಲ್. ಗುರು ಪಾಟೀಲ್ ಬಿಜೆಪಿಯಲ್ಲಿದ್ದರೂ ಸುರಪುರದಲ್ಲಿ 2ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕರೆ , ಶಹಾಪುರದಲ್ಲಿ 20 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿರುತ್ತಾರೆ. ನಮಗೆ ಪತ್ರಿಕೆಗಳಲ್ಲಿ ವರದಿ ನೋಡಿ ಅಚ್ಚರಿ ಆಗುತ್ತದೆ. ಪರಿಣಾಮ ಸಜ್ಜನ ಶಾಸಕರಿಗೆ ಬಿಜೆಪಿಯ ಈ ಯಾತ್ರೆಯಲ್ಲೇ ಭಾರೀ ಬೆಂಬಲ ವ್ಯಕ್ತವಾಗಿದೆ. ಇದು ಬಿಜೆಪಿಯ ಪರಿವರ್ತನಾ ಯಾತ್ರೆಯೋ, ಗುರು ಪಾಟೀಲ್ ವಿಜಯೋತ್ಸವವೋ ಅನ್ನಿಸುತ್ತಿದೆ. ಇನ್ನು ಬಿಎಸ್ ವೈ ಸಿಎಂ ಆಗಿದ್ದು ಶಹಾಪುರ ಮತಕ್ಷೇತ್ರಕ್ಕೆ ಗುರು ಪಾಟೀಲ್ ಶಾಸಕರಾಗಿದ್ದರೆ ನೂರಾರು ಕೋಟಿ ಅನುದಾನ ಬರುವುದರಲ್ಲಿ ನಿಸ್ಸಂಶಯ ಎಂದು ಅಭಿಪ್ರಾಯ ಪಟ್ಟ ರಾಜೂಗೌಡ ಗುರು ಪಾಟೀಲ್ ಗೆ ಬೆಂಬಲಿಸಿ, ಬಿಎಸ್ ವೈ ಗೆ ಬೆಂಬಲಿಸಿ, ಬಿಜೆಪಿಗೆ ಬೆಂಬಲಿಸಿ ಎಂದು ಕರೆ ನೀಡಿದರು.