ರಕ್ತ ಮನುಷ್ಯನ ಜತೆ ಮನುಷ್ಯತ್ವ ಬದುಕಿಸಿದಂತೆ-ಸೂಗೂರೇಶ್ವರ ಶ್ರೀ
ಮಿಲಾದ್ ಸೂಸೈಟಿಯಿಂದ 13 ನೇ ರಕ್ತದಾನ ಶಿಬಿರ

ರಕ್ತ ಮನುಷ್ಯನ ಜತೆ ಮನುಷ್ಯತ್ವ ಬದುಕಿಸಿದಂತೆ-ಸೂಗೂರೇಶ್ವರ ಶ್ರೀ
ಮಿಲಾದ್ ಸೂಸೈಟಿಯಿಂದ 13 ನೇ ರಕ್ತದಾನ ಶಿಬಿರ
ದಾನಗಳಲ್ಲಿಯೇ ರಕ್ತದಾನ ಶ್ರೇಷ್ಠ
yadgiri, ಶಹಾಪುರಃ ರಕ್ತದಾನದಿಂದ ಮನುಷ್ಯನ ಜೀವದ ಜತೆಗೆ ಮನುಷ್ಯತ್ವವು ಬದುಕಿಸಿದಂತಾಗಲಿದೆ. ಹೀಗಾಗಿ ಯುವ ಸಮೂಹ ಯದ್ಧದ ಸಂದರ್ಭದಲ್ಲಿ ಹೋಗಿ ದೇಶ ಸೇವೆ ಮಾಡಲಾಗಲಿಲ್ಲ ಎಂದು ಕೊರಗುವ ಬದಲು ರಕ್ತದಾನ ಮಾಡುವ ಮೂಲಕ ದೇಶ ಸೇವೆ ಮಾಡಬಹುದು ಎಂದು ಕುಂಬಾರ ಓಣಿಯ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಯುವ ಸಮೂಹಕ್ಕೆ ಕಿವಿ ಮಾತು ಹೇಳಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಮಿಲಾದ್ ಸೋಶಿಯಲ್ ವೆಲ್‍ಫೇರ್ ಸೂಸೈಟಿ ಈದ್ ಮಿಲಾದ್ ಉನ್ ನಬಿ ಹಬ್ಬದಂಗವಾಗಿ ಆಯೋಜಿಸಿದ್ದ 13 ನೇ ವರ್ಷದ ರಕ್ತದಾನ ಶಿಬಿರದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಬಹುಕಾಲದ ಹಿಂದಿನಿಂದಲೂ ನಮ್ಮ ಹಿರಿಯರೆಲ್ಲರೂ ಯಾವುದೇ ಧರ್ಮ, ಜಾತಿ ಬೇಧ ಮಾಡದೆ ಸಹೋರತ್ವ ಬಾಂಧವ್ಯದಿಂದ ಬಾಳುವ ಪಾಠವನ್ನು ಕಲಿಸಿದ್ದಾರೋ ಅದೇ ರೀತಿ ನಾವೆಲ್ಲ ನಮ್ಮ ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಹಿಂದೂ ಮುಸ್ಲಿಂ ಮಧ್ಯ ಉತ್ತಮ ಪ್ರಾಮಾಣಿಕ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗಬೇಕಿದೆ.
ಆ ನಿಟ್ಟಿನಲ್ಲಿ ಮುಸ್ಲಿಂ ಸಮಾಜದ ಧರ್ಮ ಗುರುಗಳು ಹಾಗೂ ಮುಖಂಡರು ಮತ್ತು ನಮ್ಮ ಹಿಂದೂ ಧರ್ಮದ ಗುರುಗಳು ಮತ್ತು ಮುಖಂಡರು ಉತ್ತಮ ವಿಚಾರ ಚಿಂತನೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಹಿಂದೂ ಮುಸ್ಲಿಂ ಸಮುದಾಯದಲ್ಲಿ ಉತ್ತಮ ಬಾಂಧವ್ಯ ಮೂಡಿಸುವ ಕೆಲಸ ನಡೆಯಬೇಕಿದೆ. ಆ ನಿಟ್ಟಿನಲ್ಲಿ ರಕ್ತದಾನ ಶಿಬಿರವು ಒಂದು ಉತ್ತಮ ವೇದಿಕೆ ಒದಗಿಸುತ್ತಾ ಬಂದಿದೆ ಈ ಮೂಲಕವೇ ಇಡಿ ವಿಶ್ವಕ್ಕೆ ಒಂದು ಸಾಮರಸ್ಯದ ಸಂದೇಶ ಸಾರುವಂತ ಕೆಲಸ ಮಾಡೋಣ ಎಂದರು.
ಸಾನಿಧ್ಯವಹಿಸಿದ್ದ ಮುಸ್ಲಿಂ ಸಮುದಾಯದ ಗುರುಗಳಾದ ಸಗರದ ಸಯ್ಯದ್ ಶಾಹ ಮುಜುಬುದ್ದೀನ್ ಸರ್ಮಸ್ತ್, ಸಯ್ಯದ್ ಫರಿದುದ್ದೀನ್ ಖಾದ್ರಿ, ಗೋಗಿಯ ಸಯ್ಯದ್ ಶಾಹ ಇಸ್ಮಯಿಲ್ ಹುಸೇನ್ ಮತ್ತು ಸಯ್ಯದ್ ಶಫಿಉದ್ದೀನ್ ಸರ್ಮಸ್ತ್, ಡಾ.ಶರಣು ಬಿ.ಗದ್ದುಗೆ ಮಾತನಾಡಿದರು.
ಡಾ.ಬಸವರಾಜ ಇಜೇರಿ, ಸಯ್ಯದ್ ಖಾಲಿದ್‍ಸಾಬ ಮಾತನಾಡಿದರು. ಈ ಸಂದರ್ಭದಲ್ಲಿ ಸಯ್ಯದ್ ಮುಸ್ತಫಾ ದರ್ಬಾನ್, ಮಹ್ಮದ ಸಲಿಂ ಸಂಗ್ರಾಮ, ಸಯ್ಯದ್ ಸೈದುದ್ದೀನ್ ಖಾದ್ರಿ, ಸಯ್ಯದ್ ಚಾಂದಪಟೇಲ್, ಗುರು ಕಾಮಾ, ಪರ್ತಕರ್ತ ಮಲ್ಲಿಕಾರ್ಜುನ ಮುದ್ನೂರ, ಡಾ.ವೀರೇಶ ಬಂಡೇಗೋಳಮಠ, ಡಾ.ಬಸವರಾಜ ಶಿವರಾಯ ಸೇರಿದಂತೆ ಸೂಸೈಟಿಯ ಅಧ್ಯಕ್ಷ ಡಾ.ಅಬ್ದುಲ್ ಸಮದ್ ಉಪಸ್ಥಿತರಿದ್ದರು. 58 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.