ಚಾಲಕರು, ನಿರ್ವಾಹಕರು ಕರ್ತವ್ಯದ ವೇಳೆ ರೀಲ್ಸ್ ಮಾಡಿದರೆ ಅಮಾನತು; ರಾಮಲಿಂಗಾ ರೆಡ್ಡಿ ಎಚ್ಚರಿಕೆ
ಬೆಂಗಳೂರು: ಸಾರಿಗೆ ಇಲಾಖೆಯ ಚಾಲಕರು, ನಿರ್ವಾಹಕರು ಕರ್ತವ್ಯದ ವೇಳೆ ರೀಲ್ಸ್ ಮಾಡಿದರೆ ಅಂತವರನ್ನು ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ತವ್ಯದ ವೇಳೆ ರೀಲ್ಸ್ ಮಾಡಿದವರು ಕೆಲಸದಲ್ಲಿ ಇರಲು ಲಾಯಕ್ ಇಲ್ಲ. ಈ ನಿಟ್ಟಿನಲ್ಲಿ ಹುಚ್ಚಾಟ ಮೆರೆಯುವ ಚಾಲಕರು, ನಿರ್ವಾಹಕರನ್ನು ಅಮಾನತು ಮಾಡಲಾಗುವುದು ಎಂದು ಹೇಳಿದರು. ಕೆಲ ದಿನಗಳ ಹಿಂದೆ ಕೆಎಸ್ಆರ್’ಟಿಸಿ ಬಸ್ ಚಾಲಕನೊಬ್ಬ ಬಸ್ ಒಳಗೆ ಕೊಡೆ ಹಿಡಿದುಕೊಂಡು ಬಸ್ ಚಲಾಯಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಧಾರವಾಡ ಘಟಕದ ಬೆಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಚಾಲಕ ಹನುಮಂತಪ್ಪ ಕಿಲೇದಾರ ಬಸ್ ನಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಲಾಯಿಸಿದ್ದರೆ, ನಿರ್ವಾಹಕಿ ಅನೀತಾ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡಲಾಗಿತ್ತು.
ಇನ್ನೊಂದು ಘಟನೆಯಲ್ಲಿ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ನಲ್ಲಿ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾಗಿದ್ದವು. ಬಸ್ ಚಾಲಕ ಬಸ್ ಓಡಿಸುತ್ತಾ ರೀಲ್ಸ್ ಗೆ ಪೋಸ್ ನೀಡಲು ಹೋಗಿದ್ದಾನೆ. ರೀಲ್ಸ್ ಗುಂಗಿನಲ್ಲಿ ಬಸ್ ಚಲಾಯಿಸುತ್ತಿರುವುದನ್ನು ಮರೆತಿದ್ದು, ಚಕ್ಕಡಿ ಗಾಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ.
ಅಪಘಾತದ ರಭಸಕ್ಕೆ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. ರೈತ ಮಂಜುನಾಥ್ ಎಂಬುವವರ ಮೆದುಳು ನಿಷ್ಕ್ರಿಯವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.