ಬೌದ್ಧಿಕ ವಿಕಸನ, ಪ್ರತಿಭೆ ಗುರುತಿಗೆ ಮಕ್ಕಳ ಹಬ್ಬ ಪೂರಕ-ಎ. ಬಿ. ಮಾಲಕರೆಡ್ಡಿ
ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಪ್ರತಿಭೆಗಳಿಗೆ ಸೂಕ್ತ ವೇದಿಕೆಃ ಮಾಲಕರಡ್ಡಿ
ಯಾದಗಿರಿ: ಬೌದ್ಧಿಕ ವಿಕಸನ ಮತ್ತು ಆಂತರಿಕ ಪ್ರತಿಭೆಯನ್ನು ಗುರುತಿಸಲು ಮಕ್ಕಳ ಹಬ್ಬ ಪೂರಕವಾಗಿದೆ ಎಂದು ಶಾಸಕ ಡಾ:ಎ.ಬಿ.ಮಾಲಕರೆಡ್ಡಿ ಹೇಳಿದರು.
ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಸಗರನಾಡು ಸೇವಾ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳಲ್ಲಿ ಅವರದ್ದೇಯಾದ ಜ್ಞಾನ-ಪ್ರತಿಭೆಗಳು ಅಡಗಿರುತ್ತವೆ. ಆದರೆ ಅವುಗಳಿಗೆ ಸೂಕ್ತ ವೇದಿಕೆ ಇಲ್ಲದೆ ಪ್ರತಿಭೆಗಳು ವೃದ್ಧಿಯಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಸಗರನಾಡಿನಲ್ಲಿ ಮಕ್ಕಳ ಬಗ್ಗೆ ಹೆಚ್ಚು ಕಾರ್ಯಕ್ರಮಗಳು ಹಮ್ಮಿಕೊಳ್ಳುವುದು ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿವಿಧ ಸರಕಾರಿ ಇಲಾಖೆ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮಕ್ಕಳ ಹಬ್ಬ ಸಂಭ್ರಮದ ಸಂಚಾಲಕ ಪ್ರಕಾಶ ಎಸ್.ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕ ಮಾತನಾಡಿ, ಸಗರನಾಡಿನಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ, ಸಾಂಸ್ಕೃತಿ ಇನ್ನಿತರ ಕಾರ್ಯಕ್ರಮಗಳ ಹೆಚ್ಚಾಗಿ ನಡೆಸಿ ಈ ಭಾಗದ ಪ್ರತಿಭೆಗಳ ಅರಳಲು ಶ್ರಮಿಸಬೇಕಿದೆ ಎಂದರು.
ಸಾಹಿತಿಗಳಾದ ಚಂದ್ರಕಾಂತ ಕರದಳ್ಳಿ ಅವರು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ರಾಮಲಿಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಬ್ದುಲ್ ರೆಹಮಾನ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಚಂದ್ರಶೇಖರ ಅಲಿಪುರ, ಡಾನ ಬಾಸ್ಕೋ ಸಮಾಜ ಕೇಂದ್ರದ ನಿರ್ದೇಶಕ ಫಾದರ್ ಜಿ, ಬೆಂಗಳೂರು ಬಾಲ ಭವನ ಸೊಸ್ಶೆಟಿಯ ಸದಸ್ಯರಾದ ಶ್ರೀಮತಿ ಮಲ್ಲಮ್ಮ ಬಿ.ಕನೇಕಲ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹಣಮಂತ್ರಾಯ ಕರಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ, ಧಾರವಾಡ ಜಿಲ್ಲಾ ಕರ್ನಾಟಕ ಬಾಲ ವಿಕಸನ ಅಕಾಡೆಮಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಣಿಕರೆಡ್ಡಿ ಕುರಕುಂದಿ, ಶ್ರೀಮತಿ ಮಂಜುಳಾ ಗೂಳಿ ಹಾಗೂ ಬಸವರೆಡ್ಡಿ ಎಂ.ಟಿ.ಪಲ್ಲಿ ಸೇರಿದಂತೆ ಇತರರಿದ್ದರು.
ಕುಸುಮಾ ಬೋಯಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು|| ಅಕ್ಷತಾ ಶಿರವಾಳ ಅವರು ಭರತನಾಟ್ಯ ಪ್ರದರ್ಶಿಸಿದರು. ಶರಬಯ್ಯ ಎಸ್ ಕಲಾಲ ಅವರು ಕಾರ್ಯಕ್ರಮ ನಿರೂಪಿಸಿದರು. ರಿಯಾಜ್ ಪಟೆಲ್ ಸ್ವಾಗತಿಸಿ ವಂದಿಸಿದರು.