ಹಕ್ಕಿಗಳಿಂದ ನಿರ್ಮಿತಗೊಂಡ ಸುಂದರ ಮನೆಗಳ ಸಮುಚ್ಛಯ
ನೋಡುಗರ ಗಮನ ಸೆಳೆದ ಹಕ್ಕಿಗಳ ಗೂಡು
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ, ಶಹಾಪುರಃ ನಗರದ ಹೊರವಲಯದಲ್ಲಿರುವ ಕುಡಿಯುವ ನೀರು ಸಂಗ್ರಹ ಕೆರೆಯಲ್ಲಿ ನೀರಿನ ಅಳತೆಗಾಗಿ ನಿರ್ಮಿಸಲಾದ ಕಟ್ಟಡದ ಮೇಲೆ ಹಕ್ಕಿಗಳು ಗೂಡುಗಳನ್ನು ಮನೆ ಸಮುಚ್ಛಯದಂತೆ ಅಂದರೆ, ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ಅಪಾರ್ಟ್‍ಮೆಂಟ್ ತರಹ ಭಾಸವಾಗುತ್ತಿದೆ. ಯಾವ ಇಂಜಿನೀಯರಿಗೂ ಕಡಿಮೆ ಇಲ್ಲದಂತೆ ಪಕ್ಷಗಳು ಗೂಡುಗಳನ್ನು ನಿರ್ಮಿಸಿಕೊಂಡಿವೆ.
ಮಣ್ಣಿನಿಂದ ನಿರ್ಮಿಸಿಕೊಂಡ ಗೂಡು ಮಳೆ, ಚಳಿ ಮತ್ತು ಬಿಸಿಲಿಗೆ ಬಾಡದಂತೆ ಗಟ್ಟಿಯಾಗಿವೆ ಕೂಡ. ಇದು ನೋಡುಗರಲ್ಲಿ ಮನುಷ್ಯರಿಂದ ನಿರ್ಮಾಣವಾಗುವ ಅಪಾರ್ಟ್‍ಮೆಂಟ್ ತರಹ ಹಕ್ಕಿಗಳು ಒಗ್ಗಟ್ಟಾಗಿ ತಮ್ಮ ಗೂಡುಗಳನ್ನು ಸಾಲಾಗಿ ಒಂದರ ಮೇಲೊಂದರಂತೆ ನಿರ್ಮಿಸಿಕೊಂಡಿರುವದು ನೋಡುಗರ ಕಣ್ಣಿಗೆ ಹಬ್ಬವಾಗಿ ಕಾಣುತ್ತಿದೆ.
ಬೆಳ್ಳಂಬೆಳಗ್ಗೆ ಈ ಗೂಡುಗಳಿಂದ ಹಕ್ಕಿಗಳ ಕಲರವ ಚಟಪಟ ಸದ್ದಿನೊಡನೆ ಒಟ್ಟಾಗಿ ಆಹಾರದ ಹುಡುಕಾಟಕ್ಕೆ ತೆರಳುವದು ನೋಡುವುದೇ ಮನಸ್ಸಿಗೆ ಆನಂದ ನೀಡುತ್ತದೆ. ಇದನ್ನು ಕಣ್ತುಂಬಿಸಿಕೊಳ್ಳುವ ಹಲವಾರು ಜನರ ನಿತ್ಯ ಬೆಳ್ಳಂಬೆಳಗ್ಗೆ ಈ ಸುಂದರತೆಯನ್ನು ಸವಿಯಲು ಕಾಯುವಂತಾಗಿದೆ.
ಬೆಳಗಿನ ಜಾವ ಸೂರ್ಯನ ಹೊಂಗಿರಣ ಹೊರ ಬೀಳುತ್ತಿದ್ದಂತೆ. ಗೂಡಿನಲ್ಲಿರುವ ಹಕ್ಕಿಗಳ ಚಿಲಿಪಿಲಿ ನಾದ ಹಾರಾಟದ ಸಂಗೀತ ನೋಡುಲು ಅತ್ಯಾಕರ್ಷಕವಾಗಿದೆ ಎನ್ನುತ್ತಾರೆ ನಿತ್ಯ ವೀಕ್ಷಿಸುತ್ತಿರುವ ಫಿಲ್ಟರ್ ಬೆಡ್ ಪ್ರದೇಶದಲ್ಲಿ ವಾಸಿಸುತ್ತಿರುವ ಅಂಬಲಪ್ಪ.
ಇಡಿ ನಗರಕ್ಕೆ ಇದೇ ಕೆರೆಯಿಂದ ನೀರು ಸರಬರಾಜು ಆಗುತ್ತದೆ. ನೀರು ಸಂಗ್ರಹಕ್ಕಾಗಿ ಈ ಕೆರೆ 20 ವರ್ಷದ ಹಿಂದೆ ನಿರ್ಮಿಸಲಾಗಿದೆ. ಕೆರೆ ತುಂಬ ನೀರು ಸಂಗ್ರಹಗೊಂಡಿದ್ದು. ಇಲ್ಲಿನ ಅಳತೆ ಗೋಲು ಕಟ್ಟಡದ ಮೇಲೆ ಗುಬ್ಬಿ ಜಾತಿಯ ವಿಶಿಷ್ಟ ಪಕ್ಷಿಗಳು ಗೂಡುಗಳು ನಿರ್ಮಾಣ ಮಾಡಿವೆ.
ಪಕ್ಷಿಗಳ ಗೂಡು ಕಟ್ಟುವ ಕಲೆ ಅದ್ಭುತ
ಒಂದೇ ಜಾತಿಯ ನೂರಾರು ಪಕ್ಷಿಗಳು ಗೂಡು ನಿರ್ಮಿಸಿವೆ. ಗೂಡುಗಳು ಸರಪಳಿಯಂತೆ ನಿರ್ಮಿಸಿದ್ದು ನೋಡಲು ಸುಂದರವಾಗಿ ಕಾಣುತ್ತಿವೆ. ಬೆಳ್ಳಗ್ಗೆ ಸೂರ್ಯನ ಹೊಂಗಿರಣ ಬಿದ್ದಾಗ ಗೂಡಿನಿಂದ ಪಕ್ಷಿಗಳು ಹಾರಿ ಹೋಗುವಾಗ ಮತ್ತು ಸಂಜೆ ಗೂಡು ಸೇರುವಾಗ ನೋಡಲು ಕಣ್ಣಿಗೆ ಹಿತವೆನಿಸುತ್ತದೆ. ಪಕ್ಷಿಗಳ ಕಲರವ ಚಿಲಿಪಿಲಿ ನಾದ ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತಿದೆ.
–ತಿಪ್ಪಣ್ಣ ನಾಟೇಕಾರ. ಫಿಲ್ಟರ್ ಬೆಡ್ ನಿವಾಸಿ.