ಮಡಿವಾಳರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆಯೇ..?
ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹ: ಮಡಿವಾಳ ಸಮುದಾಯದಿಂದ ರಾಜ್ಯದಾದ್ಯಂತ ಪ್ರತಿಭಟನೆ
ಬೆಂಗಳೂರು: ಡಾ.ಅನ್ನಪೂರ್ಣ ಆಯೋಗ ವರದಿ ಅನುಸಾರ ಕೂಡಲೇ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ತಾಲೂಕು, ಜಿಲ್ಲಾವಾರು ಮಡಿವಾಳ ಜನಾಂಗದವರು ಪ್ರತಿಭಟನೆ ನಡೆಸಿ ಆಯಾ ಪ್ರದೇಶದ ವ್ಯಾಪ್ತಿಯ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಆದರೆ ರಾಜ್ಯ ಸರ್ಕಾರ ಮಡಿವಾಳ ಸಮುದಾಯದ ಕೂಗಿಗೆ ಸ್ಪಂದಿಸಬಹುದೇ ಎಂಬುದೀಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಮಡಿವಾಳ ಜನಾಂಗದ ಬಹು ವರ್ಷಗಳ ಕಾಲದ ಬೇಡಿಕೆ ಇದಾಗಿದ್ದು, ಕಾಲ ಬದಲಾಗುತ್ತಾ ಬಂತು ಆದರೆ ರಾಜ್ಯದ ಮಡಿವಾಳ ಜನಾಂಗದ ಜನರ ಸ್ಥಿತಿ ಮಾತ್ರ ಇಂದಿಗೂ ಚಿಂತಾಜನಕವಾಗಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಈ ಬಡ ಸಮುದಾಯದ ಜನ ಸ್ವಾಂತಂತ್ರ್ಯವಿಲ್ದದವರಂತೆ ಬದುಕು ಸಾಗಿಸುವ ಸ್ಥಿತಿಯಿದೆ. ಗೌಡರು, ಕುಲಕರ್ಣಿಯವರ ಏಳ್ಗೆ ಬಯಿಸಿ ಜೀವಮಾನ ಪರ್ಯಂತ ದುಡಿಯುವ ಸ್ಥಿತಿ ಮುಂದುವರೆದಿದೆ.
ನಿತ್ಯ ಮನೆ ಮನೆಗೆ ತೆರಳಿ ಕೊಳೆ ಬಟ್ಟೆ ತಂದು ಹಳ್ಳ ಕೊಳ್ಳಗಳಲ್ಲಿ ಶುಚಿಗೊಳಿಸಿ ಅವರವರ ಮನೆಗೆ ತೆರಳಿ ಕೊಟ್ಟು ಬರುವ ಸಂಪ್ರದಾಯ ಇಂದಿಗೂ ಜೀವಂತವಿದೆ. ಕೆಲವು ಕಡೆ ಇಂದಿಗೂ ಕತ್ತೆಗಳ ಮೇಲೆ ಬಟ್ಟೆ ಹೊರಿಸಿಕೊಂಡು ಹಳ್ಳಗಳಿಗೆ ತೆರಳಿ ಶುಚಿಗೊಳಿಸುವ ಪದ್ಧತಿಯಿದೆ. ಆದರೆ ಮಡಿವಾಳರ ಶ್ರಮಕ್ಕೆ ಫಲ ಮಾತ್ರ ತೀರಾ ಕಡಿಮೆ. ಹಲವಡೆ ಇಂದಿಗೂ ಹೊಲದಲ್ಲಿ ರಾಶಿ ಮುಗಿದ ನಂತರ ಚೀಲ ಜೋಳ, ಧಾನ್ಯ ನೀಡುವ ಸಂಪ್ರದಾಯವಿದೆ. ಕೆಲವೆಡೆ ಬಟ್ಟೆ ತೊಳೆದು ಸಾಹುಕಾರರು, ಗೌಡರು ನೀಡುವ ಎಂಜಲು ರೊಟ್ಟಿ ತಂದು ಊಟ ಮಾಡುವ ದುಸ್ಥಿತಿಯಿದೆ. ಇಂತಹ ಕೀಳು ಸಂಪ್ರದಾಯದಲ್ಲಿ ಮಡಿವಾಳ ಸಮಾಜ ಹೇಗೆ ಮುಂದುವರೆಯಲು ಸಾಧ್ಯವಿದೆ. ನೂರಾರು ವರ್ಷಗಳಿಂದ ಮಡಿವಾಳ ಸಮುದಾಯದ ಜನರ ಸ್ಥಿತಿ ಕಂಡರೂ ಯಾವೊಬ್ಬ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳೂ ಈ ಸಮುದಾಯತ್ತ ಕಣ್ಣು ಹಾಯಿಸಲಿಲ್ಲ. ಕಾರಣ ಈ ಸಮುದಾಯದ ಜನರ ಸಂಘಟನೆ ಕೊರತೆ, ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿರುವ ಸಮುದಾಯ, ಅನಕ್ಷರತೆ ಸೇರಿದಂತೆ ಹತ್ತಾರು ಕಾರಣಗಳು ಗೋಚರಿಸುತ್ತವೆ.

ಮಡಿವಾಳ ಸಮುದಾಯ ಅಸಂಘಟಿತ ಸಮುದಾಯ ಆಗಿದ್ದು ಇಂತಹ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದರೆ ತಮ್ಮ ಸ್ವ ಅಭಿವೃದ್ಧಿ, ಪಕ್ಷದ ಅಭಿವೃದ್ಧಿಗೆ ಏನು ಪ್ರಯೋಜನೆ ಎಂಬುದೇ ಬಹುತೇಕ ರಾಜಕಾರಣಿಗಳ ಲೆಕ್ಕಚಾರವಾಗಿದೆ. ಹೀಗಾಗಿ ಮಡಿವಾಳ, ಕುಂಬಾರ, ಉಪ್ಪಾರ, ಪತ್ತಾರ, ಸವಿತಾ ಸಮಾಜ ಸೇರಿದಂತೆ ಹಿಂದುಳಿದ ಸಣ್ಣ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯ ಗಗನಕುಸುಮವೇ ಆಗಿದೆ. ಕೊನೆಪಕ್ಷ ಶೈಕ್ಷಣಿಕ ಪ್ರಾತಿನಿಧ್ಯ ನೀಡುವಲ್ಲಿಯೂ ಸಹ ಈವರೆಗಿನ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ. ನಿಜವಾರ ಜೀವಪರ ರಾಜಕಾರಣಿಗಳು ಶೋಷಿತ ವರ್ಗದ ಇಂತಹ ಸಣ್ಣ ಸಮುದಾಯಗಳ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡಬೇಕಿದೆ. ನಮ್ಮಂಥ ಸಣ್ಣ ಸಮುದಾಯಗಳ ಮೇಲೆ ಎಲ್ಲಾ ವಿಧದಲ್ಲೂ ಶೋಷಣೆ ನಡೆಯುತ್ತಲೇ ಇದೆ. ಆದರೆ, ಕೇಳುವವರು ಮಾತ್ರ ಯಾರೂ ಇಲ್ಲ. ಇಂಥ ಸಮಾಜದ ಮದ್ಯೆ ನಮ್ಮ ಬಡ ಸಮುದಾಯ ಸಂಕಟದಿಂದ ಬದುಕುತ್ತಿದೆ ಎಂದು ಮಡಿವಾಳ ಸಮಾಜ ಹಿರಿಯರು ಆಕ್ರೋಶ ವ್ಯಕ್ತಪಡಿಸಿದರು.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ಇಂತಹ ಸಮಾಜವನ್ನು ಅಂಧಕಾರದಿಂದ ಮುಖ್ಯವಾಹಿನಿಗೆ ತರುವ ಅಗತ್ಯವಿದೆ. ಆದರೆ ನಾವು ಸಂಘಟಿತರಾಗದ ಕಾರಣ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಬಳಸಿಕೊಳ್ಳತ್ತವೆ ವಿನಾಃ ಯಾವ ಅಭ್ಯುದ್ಯವು ಆಗುವುದಿಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ, ರಾಯಚೂರಿನವರಾದ ವಕೀಲ ವೃತ್ತಿಯಲ್ಲಿ ಖ್ಯಾತಿಗಳಿಸಿದ್ದ ಮೂಲತಃ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿದ್ದ ಎನ್.ಶಂಕ್ರಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ತದ ನಂತರ ಎರಡು ವರ್ಷದಲ್ಲಿ ಮತ್ತೇ ಅವರನ್ನು ರಾಜೀನಾಮೆ ಕೊಡಿಸಿ, ಹಿಂದುಳಿದ ಆಯೋಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದು ಬಿಟ್ಟರೆ ಸಮಾಜದಲ್ಲಿ ಇಂದಿಗೂ ಯಾರೊಬ್ಬರು ಎಂಎಲ್‍ಎ, ಎಂಎಲ್ಸಿಯಾಗಿರುವುದು ಆಗೇ ಇಲ್ಲ.
ಕಲಬುರ್ಗಿಯ ಸ್ವಾಂತ್ರತ್ರ್ಯ ಹೋರಾಟಗಾರರಾದ ಮೂಲತಃ ಯಾದಗಿರಿ ಜಿಲ್ಲೆಯ ಗುರಮಠಕಲ್ ನವರಾದ ದಿ.ವಿದ್ಯಾಧರ ಗುರೂಜಿಯವರು ಬಹುವರ್ಷಗಳ ಹಿಂದೊಮ್ಮೆ ಶಾಸಕರಾಗಿ ಆಯ್ಕೆಗೊಂಡಿದ್ದರು ಎನ್ನಲಾಗಿದೆ. ವಿದ್ಯಾಧರ ಗೂರೂಜಿ ಕಾಲದಿಂದಲೂ ಇಲ್ಲಿವರೆಗೆ ಇಂತಹ ವಿಷಮ ಗಳಿಗೆಯಲ್ಲಿಯೇ ಸಮಾಜ ಕಾಲಕಳೆಯುವಂತಾಗಿದೆ. ಸಮುದಾಯದ ಸಂಕಷ್ಟ ಅರ್ಥವಾದರೂ ಯಾರೊಬ್ಬರು ಕೇಳದ ಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ಬಲಾಢ್ಯ ಸಮುದಾಯಗಳಿಂದ ಮಡಿವಾಳ ಸಮುದಾಯದವರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಅದನ್ನು ತಡೆಯುವ ಶಕ್ತಿ ಯಾರಿಗಿದೆ. ಅನಿವಾರ್ಯವಾಗಿ ಎಷ್ಟೊ ಕಡೆ ಗ್ರಾಮ ಬಿಟ್ಟು ಓಡಿ ಹೋಗಿದ್ದಾರೆ. ಇಂತವರನ್ನು ರಕ್ಷಣೆ ಮಾಡುವವರು ಯಾರು. ಪ್ರತಿ ಗ್ರಾಮಕ್ಕೆ ಒಂದೋ ಎರಡು ಮನೆಗಳಿರುವ ಮಡಿವಾಳ ಜನಾಂಗದವರನ್ನು ಕೇಳುವವರು ಯಾರು.
ನಡೆಯುವವರ ಕಾಲಿಗೆ ನಮಸ್ಕರಿಸಿ ನಡೆಯುವ ಸ್ಥಿತಿ ರಾಜ್ಯದಲ್ಲಿದೆ. ಈ ವಿಷಯವನ್ನು ಎಲ್ಲಾ ರಾಜಕೀಯ ಪಕ್ಷದ ಧುರೀಣರ ಗಮಕ್ಕೆ ತರಲಾಗಿದೆ. ಆದಾಗ್ಯು ಅವರೇನು ನಮ್ಮ ಮಾತು ಕೇಳುವುದಿಲ್ಲ. ಸತ್ಯದ ಕಡೆಯಾದರೆ ಅವರ ಬಲ ಕುಸಿಯುತ್ತದೆ. ಬಹುಸಂಖ್ಯಾತರು ಅವರಿಗೆ ಮತ ಹಾಕುವುದಿಲ್ಲ. ಹೀಗಾಗಿ, ಬಹಳಷ್ಟು ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಸಚಿವರತ್ತ ಕೈತೋರುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ವರದಿ ಕೇಳುತ್ತಿದೆ ಕೇಂದ್ರ ಸರ್ಕಾರ. ಈ ಇಲಾಖೆ ನೀಡುವ ಪ್ರಮುಖ ವರದಿ ಮೂಲಕವೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿಯಮವಿದೆ.
ರಾಜ್ಯದ ಮಡಿವಾಳ ಸಮುದಾಯದ ಸ್ಥಿತಿಗತಿ ಬಗ್ಗೆ ವರದಿ ನೀಡುವ ಇಲಾಖೆಯ ಸಚಿವರು ಮನಸ್ಸು ಮಾಡಿದರೆ ಸಂಕಷ್ಟದಲ್ಲಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಬಹುದು. ಅವರಲ್ಲಿ ರಾಜ್ಯದ ಮಡಿವಾಳ ಸಮುದಾದಯದ ಮುಖಂಡರು ತೆರಳಿ ಚರ್ಚಿಸಿದಾಗ, ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಬಂದಿರುವ ಉತ್ತರ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.
ಇಷ್ಟಾದರೂ ಪ್ರತಿಭಟನೆ ಮಾಡಿದರೂ ಯಾವುದೇ ಲಾಭ ಆಗ್ಲಿಕ್ಕಿಲ್ಲ. ಆದರೆ ಕರ್ತವ್ಯ ನಿಭಾಯಿಸಿದ್ದೀವಿ ಎಂಬ ಸಮಾಧಾನ ಅಷ್ಟೆ. ಸಿಎಂ ಸಿದ್ರಾಮಯ್ಯನವರು ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿ ಉಳ್ಳವರಾಗಿದ್ದು ಅವರು ಮನಸ್ಸು ಮಾಡಿದರೆ ಮಾತ್ರ ಮಡಿವಾಳ ಸಮುದಾಯಕ್ಕೆ ಸಹಾಯ ಆಗಬಹುದು, ಅವರು ಬಿಟ್ಟರೆ ಮುಂಬರುವ ಯಾವ ನಾಯಕರಿಂದಲೂ ಆಗುವುದು ಕಷ್ಟ ಎಂಬುದು ಮಡಿವಾಳ ಸಮುದಾಯದ ಪ್ರಗ್ನಾವಂತರ ಅಭಿಪ್ರಾಯವಾಗಿದೆ.
ದೇಶದ 18 ರಾಜ್ಯ ಹಾಗೂ 5 ಕೇಂದ್ರ ಆಡಳಿತದ ಪ್ರದೇಶಗಳಲ್ಲಿ ಎಸ್ಸಿ ಪಟ್ಟಿಯಲ್ಲಿದೆ ಮಡಿವಾಳ ಸಮುದಾಯ…
ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದುಳಿದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಅದರಂತೆ ಕರ್ನಾಟಕದಲ್ಲೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಡಿವಾಳ ಜನಾಂಗವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬುದೇ ರಾಜ್ಯದ ಮಡಿವಾಳ ಸಮುದಾಯದ ಆಶಯವಾಗಿದೆ.
ಅಲ್ಲದೆ ಡಾ.ಅನ್ನಪೂರ್ಣಮ್ಮ ಆಯೋಗ ವರದಿ ನೀಡಿದ ಹಲವು ದಶಕಗಳೇ ಉರುಳಿದರೂ ಯಾವ ಸರ್ಕಾರ ಬಂದರೂ ಕ್ರಮಕೈಗೊಳ್ಳಲು ಮುಂದಾಗಲಿಲ್ಲ. ಆಯೋಗದ ವರದಿ ಅನುಸಾರ ಮಡಿವಾಳರ ಸ್ಥಿತಿಗತಿ ಅರಿತು ನೋಡಿದರೆ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲೇಬೇಕು. ಆದಾಗ್ಯು ಯಾವ ಸರ್ಕಾರ ಬಂದರೂ ಸಹ ವರದಿ ಬಗ್ಗೆ ಕಿಂಚಿತ್ತು ಗಮನಹರಿಸಿಲ್ಲ. ಪರಿಣಾಮ ಅನ್ನಪೂರ್ಣ ಆಯೋಗ ವರದಿ ಕಸದಬುಟ್ಟಿ ಸೇರಿದಂತಾಗಿದೆ.
ಹೀಗಾಗಿ, ಮಡಿವಾಳರ ಸ್ಥಿತಿ ಯಥಾಸ್ಥಿತಿಯಲ್ಲೇ ಮುಂದುವರೆಯಿತು. ಇನ್ನಾದರೂ ಆಳುವ ಸರ್ಕಾರ ವಾಸ್ತವಿಕ ಸತ್ಯ ಅರಿತು ರಾಜಕಾರಣ ಮಾಡಲಿ. ಅರ್ಹರಿಗೆ ಸರ್ಕಾರದ ಯೋಜನೆಗಳ ಫಲ ದೊರಕಿಸುವಂತಾಗಲಿ. ಡಾ,ಅಂಬೇಡ್ಕರ ಅವರ ತತ್ವ ಆಧಾರದ ಮೇಲೆ ಸರ್ಕಾರಗಳು, ಜನಪ್ರತಿನಿಧಿಗಳು ನಡೆಯಲಿ. ದೇಶದಲ್ಲಿ ತೀರ ಹಿಂದುಳಿದ ಶೋಷಿತರೆಂದರೆ ಅದು ಮಡಿವಾಳ ಜನಾಂಗವೆಂಬುದು ಎಲ್ಲಾ ರಾಜಕಾರಣಿಗಳಿಗೂ ಮಾಹಿತಿ ಇದೆ. ಆದರೆ, ಕಣ್ಣಿದ್ದೂ ಕುರುಡರಂತೆ ವರ್ತಿಸುವವರಿಗೆ ದಾರಿ ತೋರಿಸಲಾದೀತೆ ಎಂಬಂತ ಸ್ಥಿತಿ ನಿರ್ಮಾಣವಾಗಿದೆ.
ಯಾದಗಿರಿ, ಸುರಪುರ ಮತ್ತು ಶಹಾಪುರ, ಹುಬ್ಬಳ್ಳಿ, ಕಲಬುರ್ಗಿ, ವಿಜಯಪುರ, ಹೊಸಪೇಠ, ಗದಗ ಸೇರಿದಂತೆ ರಾಜ್ಯದಾದ್ಯಂತ ಸೋಮವಾರ ಮಡಿವಾಳರು ಪ್ರತಿಭಟನೆ ನಡೆಸಿದರು. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಎಂದು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಮಡಿವಾಳರ ಮನವಿಗೆ ಈಗಿನ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.