ರಾಜಕಾರಣಕ್ಕೆ ಕಲಾವಿದ ರಂಗಾಯಣ ರಘು ಪಾದಾರ್ಪಣ?
ಅಮೋಘ ಅಭಿನಯ, ವಿಭಿನ್ನ ಹಾಸ್ಯದ ಮೂಲಕ ನಾಡಿನ ಜನರ ಮನ ಗೆದ್ದಿರುವ ಹಾಸ್ಯ ಕಲಾವಿದ ರಂಗಾಯಣ ರಘು ರಾಜಕಾರಣಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತುಮಕೂರು ಜಿಲ್ಲೆಯ ಪಾವಗಡ ಮೂಲದ ರಂಗಾಯಣ ರಘು ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣ ಕಣ್ಣಕ್ಕಿಳಿಯಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಚುನಾವಣೆಯಲ್ಲೂ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ರಂಗಾಯಣ ರಘು ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಜೆಡಿಎಸ್ ಟಿಕೆಟ್ ವೀರಭದ್ರಯ್ಯ ಎಂಬುರಿಗೆ ದಕ್ಕಿದ್ದು ಅವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಹೀಗಾಗಿ, ವಿಧಾನಸಭೆ ಚುನಾವಣೆ ಸಮೀಪಿಸಿರುವ ವೇಳೆ ಮತ್ತೆ ರಂಗಾಯಣ ರಘು ಚುನಾವಣ ಅಖಾಡಕ್ಕಿಳಿಯುವ ಸುದ್ದಿ ಗರಿಗೆದರಿದೆ.
ತುಮಕೂರಿನ ಅಭಿಮಾನಿಗಳು, ಕೆಲ ಜೆಡಿಎಸ್ ಮುಖಂಡರು ರಂಗಾಯಣ ರಘು ರಾಜಕಾರಣಕ್ಕೆ ಬರುವಂತೆ ಒತ್ತಾಯ ಮಾಡಿದ್ದಾರೆ. ಹೀಗಾಗಿ, ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಹಾಸ್ಯನಟ ರಂಗಾಯಣ ರಘು ಇಷ್ಟರಲ್ಲೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆಂದು ತಿಳಿದು ಬಂದಿದೆ.
ಜೆಡಿಎಸ್ ವರಿಷ್ಠರು ಒಪ್ಪಿಗೆ ಸೂಚಿಸಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಕಲಾವಿದ ರಂಗಾಯಣ ರಘು 2018ರ ಚುನಾವಣ ಅಖಾಡಕ್ಕೆ ಧುಮುಕುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇಷ್ಟರಲ್ಲೇ ಹಾಸ್ಯನಟ ರಂಗಾಯಣ ರಘು ರಾಜಕಾರಣದಲ್ಲಿ ರಿಂಗಣಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಹಾಸ್ಯನಟ ರಂಗಾಯಣ ರಘು ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ. ಅಸಲಿಗೆ ಅವರಿಗೆ ಜೆಡಿಎಸ್ ಟಿಕೆಟ್ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.