ಪುಸ್ತಕ ಓದಿ ಜ್ಞಾನ ಭಂಡಾರ ವೃದ್ಧಿಸಿಕೊಳ್ಳಿ-ದುರ್ಗಪ್ಪ ನಾಯಕ
ಸದಾ ಪುಸ್ತಕ ಓದುವದರಿಂದ ಜ್ಞಾನ ಲಭಿಸಲಿದೆ-ದುರ್ಗಪ್ಪ
ಯಾದಗಿರಿ,ಶಹಾಪುರಃ ವ್ಯಕ್ತಿತ್ವ ವಿಕಸನಕ್ಕಾಗಿ ಪುಸ್ತಕ ಓದುವದನ್ನು ರೂಢಿಸಿಕೊಳ್ಳಬೇಕು. ದೇಶ ನಮಗೇನು ನೀಡಿದೆ ಎಂಬುದಕ್ಕಿಂತ ದೇಶಕ್ಕೆ ನಾವೇನು ನೀಡಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳು ಕೇವಲ ಉನ್ನತ ಹುದ್ದೆ ಅಲಂಕರಿಸುತ್ತೇವೆ ಎಂಬುದನ್ನು ಬಿಟ್ಟು ನಾವು ದೇಶ ಕಾಯತ್ತೇವೆ ಎಂಬ ದೇಶಾಭಿಮಾನ ಬರಬೇಕಿದೆ ಎಂದು ಬಿಎಸ್‍ಎಫ್ ಯೋಧ ದುರ್ಗಪ್ಪ ನಾಯಕ ಸಗರ ತಿಳಿಸಿದರು.
ನಗರದ ಜೀವ್ಹೇಶ್ವರ ಪ್ರೌಢ ಶಾಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರ ಮತ್ತು ಜೀವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲರಲ್ಲೂÀ ಯೋಧರಾಗಬೇಕೆಂಬ ಹಂಬಲವಿರಬೇಕು. ತಾಯ್ನಾಡು ಸೇವೆಗೆ ಮುಂದೆ ಬರಬೇಕು. ದೇಶದ ಗಡಿಯಲ್ಲಿ ಕೇವಲ ಯುದ್ಧ ಮಾಡುವದು ಕಾಯುವದು ಯೋಧರ ಕೆಲಸ ಎಂದುಕೊಳ್ಳಬೇಡಿ. ಅದರಲ್ಲೂ ಹಲವು ವಿಭಾಗಗಳಿವೆ. ವೈದ್ಯ, ಇಂಜಿನೀಯರ್ ಸೇರಿದಂತೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡಬಹುದು ಎಂದು ವಿವರಿಸಿದರು.
ದೇಶಕ್ಕೆ ಗಂಡಾತರ ಬಂದಾಗ ಯುದ್ಧಕ್ಕೂ ಸಿದ್ಧರಿರಬೇಕು. ಗಡಿಯಲ್ಲಿರುವ ನಾವಷ್ಟೆ ಅಲ್ಲ ನಮ್ಮ ಜೊತೆ ದೇಶದ ಜನತೆಯೂ ಇದೆ ಎಂಬ ಧೈರ್ಯದಿಂದಲೇ ನಾವೆಲ್ಲ ನಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ಹೋರಾಟ ನಡೆಸುತ್ತೇವೆ. ಮೊಬೈಲ್ ಬಂದ ಮೇಲೆ ಸದ್ಭಳಿಕೆಗಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಸುತ್ತಿದ್ದಾರೆ ಜನ. ಹೀಗಾಗಿ ಮಕ್ಕಳು ದಯವಿಟ್ಟು ಮೊಬೈಲ್ ಬಳಕೆಯಿಂದ ದೂರವಿದ್ದರೆ ಒಳಿತು ಎಂದರು.
ಜಿಲ್ಲಾ ಕನ್ನಡ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಯೊಬ್ಬರು 25 ವರ್ಷ ಶ್ರಮವಹಿಸಿ ಅಭ್ಯಾಸ ಮಾಡಿದ್ದಲ್ಲಿ ಮುಂದೆ 75 ವರ್ಷಗಳ ಕಾಲ ನೀವು ಆರಾಮವಾಗಿ ಬದುಕಬಹುದು ಎಂದು ಸಲಹೆ ನೀಡಿದರು.
ಸಾಹಿತಿ, ಶಿಕ್ಷಕ ಪಂಚಾಕ್ಷರಿ ಹಿರೇಮಠ, ಶಾಲಾ ಮುಖ್ಯಗುರು ಪ್ರವೀಣ ಫಿರಂಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಫಿರಂಗಿ ಅಧ್ಯಕ್ಷತೆವಹಿಸಿದ್ದರು. ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಉದ್ಘಾಟಿಸಿದರು. ವಿಶ್ವನಾಥ ಚಿಲ್ಲಾಳ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕುವೆಂಉ ತಂಡ, ಚಂದ್ರಶೇಖರ ಕಂಬಾರ ತಂಡ ದ್ವಿತೀಯ ಮತ್ತು ದ.ರಾ.ಬೇಂದ್ರೆ ತಂಡ ತೃತೀಯ ಸ್ಥಾನ ಪಡೆದು ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಆರಂಭದಲ್ಲಿ ಕು.ಕೃತಿಕಾ, ಭಾಗ್ಯ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿ ಲಕ್ಷ್ಮೀ ಫಿರಂಗಿ ಸ್ವಾಗತಿಸಿದರು. ಶಿಕ್ಷಕ ಮೌನೇಶ ಹಯ್ಯಾಳಕರ್ ನಿರೂಪಿಸಿದರು. ಸುರೇಖಾ ಏಕಬೋಟೆ ವಂದಿಸಿದರು.