ಸರ್ವರಿಗೂ ಕಾನೂನಿನ ಸಾಮಾನ್ಯ ಜ್ಞಾನ ಅತ್ಯಗತ್ಯ-ಕುಲಕರ್ಣಿ
ಕಾನೂನು ಅರಿವು ನೆರವು ಕಾರ್ಯಕ್ರಮ
ಯಾದಗಿರಿ, ಶಹಾಪುರ: ಮಗು ಜನಿಸಿದ ಬಳಿಕ ಸಂಬಂಧಪಟ್ಟ ಇಲಾಖೆಗೆ ತೆರಳಿ ನೋಂದಣಿ ಮಾಡಿಸುವದು ಅಗತ್ಯವಿದೆ. ಅದೇ ರೀತಿ ಮರಣ ಹೊಂದಿದಾಗಲೂ ನೋಂದಣಿ ಮಾಡಿಸಬೇಕು. ಇದರಿಂದ ಹಕ್ಕು ಬದಲಾವಣೆ ಹಾಗೂ ಇತರೆ ದಾಖಲೆಗಳಿಗೆ ಅನುಕೂಲವಾಗುತ್ತದೆ ಎಂದು ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಚ್.ಆರ್.ಕುಲಕರ್ಣಿ ತಿಳಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನನ ಮತ್ತು ಮರಣ ನೋಂದಣಿಯಿಂದ ದೇಶದ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಸರ್ಕಾರದ ಜನಪರ ಯೋಜನೆಗಳನ್ನು ಜಾರಿಗೆ ತರಲು ಇಂತಹ ಅಂಕಿ ಅಂಶಗಳು ಮಹತ್ವ ಪಡೆದುಕೊಳ್ಳುತ್ತವೆ.
ಮತ್ತು ಪ್ರಸ್ತುತ ಮುಂಗಾರು ತುಸು ತಡವಾಗಿಯಾದರು ಸಹ ಉತ್ತಮ ಮಳೆಯಾಗುತ್ತಿದೆ. ರೈತರು ಬೀಜವನ್ನು ಅಧಿಕೃತ ಮಾರಾಟ ಮಳಿಗೆಯಲ್ಲಿಯೇ ಖರೀದಿಸಬೇಕು. ಅಲ್ಲದೆ ಕಡ್ಡಾಯವಾಗಿ ಖರೀದಿಸಿದ ವಸ್ತುವಿನ ರಸೀದಿಯನ್ನು ಪಡೆದುಕೊಳ್ಳಬೇಕು. ಪ್ರತಿಯೊಬ್ಬರು ಕನಿಷ್ಠ ಕಾನೂನು ಜ್ಞಾನ ಹೊಂದಿದ್ದಲ್ಲಿ ಶೋಷಣೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದರು.
ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಮಾತನಾಡಿ, ನಮಗೆ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಕೇವಲ ಹಕ್ಕುಗಳನ್ನು ನಾವು ಕೇಳುತ್ತೇವೆ. ಆದರೆ ನಮ್ಮ ಕರ್ತವ್ಯವನ್ನು ಮರೆತು ಬಿಟ್ಟಿದ್ದೇವೆ.
ಹಕ್ಕುಗಳ ಜೊತೆಯಲ್ಲಿ ಕರ್ತವ್ಯವು ನಮ್ಮ ಹೊಣೆಗಾರಿಕೆ ಎಂಬುದನ್ನಯು ಮರೆಯಬಾರದು. ಕಾನೂನು ಪಾಲನೆ ಎಲ್ಲರ ಧ್ಯೇಯವಾಗಬೇಕು. ಕಾನೂನು ಪಾಲನೆಯಿಂದ ನಮಗೆ ಯಾವುದೆ ತೊಂದರೆ ಬರುವುದಿಲ್ಲ. ಬಡವನಾದರು ಚಿಂತೆಯಿಲ್ಲ ಆದರೆ ಕಾನೂನಿನಿಂದ ವಂಚಿತನಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ನೆರವು ಹಾಗೂ ಕಾನೂನು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಿ ಅದರ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ಕಾನೂನು ಸಾಕ್ಷರಸ್ಥರಾಗಲು ಪಣತೊಡಬೇಕು ಎಂದರು.
ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ, ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ರಾಂಪುರೆ, ಕಾರ್ಯದರ್ಶಿ ಸಂದೀಪ ದೇಸಾಯಿ, ಬಸಮ್ಮ ರಾಂಪುರೆ, ಮಲ್ಲಿಕಾರ್ಜುನ ಬುಕ್ಕಲ, ಶಿವಶರಣ ಹೊತಪೇಟ, ಹಯ್ಯಾಳಪ್ಪ ಹೊಸ್ಮನಿ ಇತರರಿದ್ದರು.