ಪತ್ರಕರ್ತ ರವಿ ಬೆಳಗೆರೆಯಿಂದ ಸಹೋದ್ಯೋಗಿ ಪತ್ರಕರ್ತನ ಕೊಲೆಗೆ ಸುಪಾರಿ!
ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ತಮ್ಮ ಒಡೆತನದ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರನಾಗಿದ್ದ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗಾಗಿ ಹಂತಕರಿಗೆ ಸುಪಾರಿ ನೀಡಿದ್ದರಂತೆ. SIT ಟೀಮ್ ಗೌರಿ ಲಂಕೇಶ್ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುವ ವೇಳೆ ಈ ಆಘಾತಕಾರಿ ಅಂಶ ಬಯಲಾಗಿದೆ. ವಿಜಯಪುರ ಮೂಲದ ಹಂತಕ ಶಶಿಧರ್ ಮತ್ತು ಗೆಳೆಯರನ್ನು ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಶಶಿಧರ್ ಮತ್ತು ಗೆಳೆಯರು, ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಕಳೆದ ಆಗಷ್ಟ್ ತಿಂಗಳಲ್ಲೇ ರವಿ ಬೆಳಗೆರೆ ಸುಪಾರಿ ನೀಡಿದ್ದರು. ಸುನೀಲ್ ಹೆಗ್ಗರವಳ್ಳಿ ಮನೆ ಮತ್ತು ಕಚೇರಿಯನ್ನು ನಾವು ಫಾಲೋ ಮಾಡಿದ್ದೆವು. ಆದರೆ, ಅವರ ಮನೆ ಬಳಿ ಸಿಸಿಟಿವಿ ಇರುವುದನ್ನು ಗಮನಿಸಿ ಕೊನೆ ಗಳಿಗೆಯಲ್ಲಿ ಸುನೀಲ್ ಅವರ ಹತ್ಯೆಯನ್ನು ಕೈಬಿಟ್ಟಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಹಾಯ್ ಬೆಂಗಳೂರು ಕಚೇರಿಗೆ ತೆರಳಿ ರವಿ ಬೆಳಗೆರೆ ಅವರನ್ನು ವಶಕ್ಕೆ ಪಡೆದಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ್ದರ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.