ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶ?
ಬೆಂಗಳೂರು: ಖ್ಯಾತ ನಟ, ನಿರ್ದೇಶಕ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ. ಈಗಾಗಲೇ ನಟ ಉಪೇಂದ್ರ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ. ಅಂತೆಯೇ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂಬ ಸುದ್ದಿ ಹಬ್ಬಿದೆ.
ಅಷ್ಟೇಅಲ್ಲದೆ ನಾಳೆ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ವಿವಿಧ ಕ್ಷೇತ್ರದ ಸಾಧಕರ ಜತೆ ಸಭೆ ನಡೆಸಲಿದ್ದಾರೆ. ಸಭೆಗೆ ನಟ ಉಪೇಂದ್ರ ಅವರಿಗೂ ಆಹ್ವಾನ ನೀಡಲಾಗಿದೆ. ನಟ ಉಪೇಂದ್ರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ, ನಟ ಉಪೇಂದ್ರ ಬಿಜೆಪಿ ಸೇರುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನ ಹೆಜ್ಜೆ ಇಡಲು ನಿರ್ಧಾರಿಸಿದ್ದಾರೆನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ನಟ ಉಪೇಂದ್ರ ನಾಳೆ ಪತ್ರಿಕಾಗೋಷ್ಠಿ ಕರೆದಿದ್ದು ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ನಟ ಉಪೇಂದ್ರ ಅನೇಕ ಸಂದರ್ಭಗಳಲ್ಲಿ ಜನಪರ ಕಾಳಜಿ ಮೆರೆದಿದ್ದರು. ಸಾಮಾಜಿಕ ಜಾಗೃತಿಯಲ್ಲೂ ಪಾಲ್ಗೊಂಡಿದ್ದರು. ಅಂತೆಯೇ ದೇಶಭಕ್ತಿಯಲ್ಲಿ ಸದಾ ಮುಂದು ಅನ್ನುವುದನ್ನು ತಮ್ಮ ನಡೆ-ನುಡಿಯಿಂದಲೇ ತೋರಿಸಿಕೊಟ್ಟವರು ಉಪೇಂದ್ರ ಅನ್ನೋದ ಉಪ್ಪಿ ಅಭಿಮಾನಿಗಳ ಅಭಿಪ್ರಾಯ.
ಉಪೇಂದ್ರ ತಮ್ಮ ಸಿನೆಮಾಗಳ ಮೂಲಕ ಕನಸಿನ ದೇಶ ಕಂಡವರು. ಜನರಲ್ಲಿ ಉತ್ತಮ ದೇಶದ ಪರಿಕಲ್ಪನೆ ಬಿತ್ತಿದವರು. ವಿಭಿನ್ನ ಚಿತ್ರಗಳ ಮೂಲಕ ಸಮಾಜದ ಒಳಿತು-ಕೆಡುಕನ್ನು ಮನಮುಟ್ಟುವಂತೆ ತೋರಿಸುವ ಪ್ರಬುದ್ಧ ನಟ, ನಿರ್ದೇಶಕ ಉಪೇಂದ್ರ ರಾಜಕೀಯ ಪ್ರವೇಶಿದರೆ ಒಳ್ಳೆಯದು. ರಾಜಕೀಯ ರಂಗದಲ್ಲೂ ಬದಲಾವಣೆ ಮೂಡಿಸುವ ಶಕ್ತಿ ಅವರಲ್ಲಿದೆ ಅನ್ನುತ್ತಿದ್ದಾರೆ ಉಪ್ಪಿ ಅಭಿಮಾನಿಗಳು.
ನಾಳೆ ಸುದ್ದಿಗೋಷ್ಠಿ ನಡೆಸಲಿರುವ ನಟ ಉಪೇಂದ್ರ ರಾಜಕೀಯ ರಂಗ ಪ್ರವೇಶಕ್ಕೆ ನಾಂದಿ ಹಾಡಲಿದ್ದಾರೆಯೇ. ಅಥವಾ ಮತ್ತೊಂದು ವಿಭಿನ್ನ ಸುದ್ದಿಯ ಮೂಲಕ ಅಚ್ಚರಿ ಮೂಡಿಸಲಿದ್ದಾರೆಯೇ ಎಂಬುದೀಗ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದೆ.