FIR ದಾಖಲಿಸಲು ನಿರಾಕರಿಸುವಂತಿಲ್ಲ – ನ್ಯಾ.ಮೊಯಿನುದ್ದೀನ್
FIR ದಾಖಲಿಸಲು ನಿರಾಕರಿಸುವಂತಿಲ್ಲ – ನ್ಯಾ.ಮೊಯಿನುದ್ದೀನ್
ಕಲಬುರ್ಗಿಃ ಅಪರಾಧ ಕುರಿತು ಪೊಲೀಸ್ ಠಾಣಾಧಿಕಾರಿಗಳು ಎಫ್ಐಆರ್ ದಾಖಲಿಸಲು ನಿರಾಕರಣೆ ಮಾಡುವಂತಿಲ್ಲ.
ನಿರಾಕರಿಸಿದಲ್ಲಿ ಠಾಣಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹ್ಮದ್ ಮೊಯಿನುದ್ದೀನ್ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೌಟುಂಬಿಕ ಸಮಸ್ಯೆ ಗಂಡ-ಹೆಂಡತಿ ಜಗಳ, ಆಸ್ತಿ ಮತ್ತು ವಾಣಿಜ್ಯ ವಿವಾದಕ್ಕೆ ಸಂಬಂಧಿಸಿದಂತೆ ದೂರು ಬಂದರೆ ಪೊಲೀಸರು ತಕ್ಷಣ ಎಫ್ಐಆರ್ ದಾಖಲಿಸದೆ, ವಿಚಾರಣೆ, ತನಿಖೆ ನಡೆಸಬಹುದು. ಅಲ್ಲದೆ ಕೌಟುಂಬಿಕ ಸಾಮರಸ್ಯ ದೃಷ್ಟಿಯಿಂದ ಪರಸ್ಪರ ಒಪ್ಪಂದಕ್ಕೆ ಬರುವಂತೆ ಸೂಚಿಸಬಹುದು. ಅದು ಸಾಧ್ಯವಾಗದಿದ್ದಾಗ ಮಾತ್ರ ಪ್ರಕರಣ ದಾಖಲಿಸಬಹುದು ಎಂದರು.
ವಕೀಲ ಎಸ್.ಪಿ.ಸಾತನೂರಕರ್ ಮಾನವ ಹಕ್ಕುಗಳ ರಕ್ಷಣೆ ಮತ್ತು ಪರಿಹಾರ ಮತ್ತು ವಕೀಲ ಎಸ್.ಎಂ.ಹೋಳಿ ಸಾಮಾನ್ಯ ಕಾನೂನುಗಳ ಅರಿವು ನೆರವು ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಪಂಚಾಕ್ಷರಿ ಸಾಲಿಮಠ ಅಧ್ಯಕ್ಷತೆವಹಿಸಿದ್ದರು.
ತಾಲೂಕು ಕಾನುನು ಸೇವಾ ಸಮಿತಿ ಸದಸ್ಯ, ಕಾರ್ಯದರ್ಶಿ ನ್ಯಾಯಧೀಶ ಸುಭಾಶ್ಚಂದ್ರ ರಾಠೋಡ, ವಕೀಲರ ಸಂಘದ ಅಧ್ಯಕ್ಷ ಗಿರಿಧರ ವೈಷ್ಣವ ಸೇರಿದಂತೆ ವಕೀಲರಾದ ಶರಣಗೌಡ ಪಾಟೀಲ್, ವಿ.ಎಸ್.ಪಾಟೀಲ್, ಸಂಗಣ್ಣ ಉಪಸ್ಥಿತರಿದ್ದರು.




