ವಿನಯ ವಿಶೇಷ

ಶಿರವಾಳದಲ್ಲಿ ಇತಿಹಾಸ ಸಾರುತ್ತಿದೆ ಕನ್ನಡ ಶಾಸನ..!

ಸಿರವಾಳದಲ್ಲಿ ಕನ್ನಡ ಶಿಲಾಶಾಸನ ಪತ್ತೆ-ಸಂಶೋಧಕ ಡಾ.ಎಂ.ಎಸ್.ಸಿರವಾಳ

ಶಾಸನದಲ್ಲಿದೆ ರಾಷ್ಟ್ರಕೂಟ ಚಕ್ರವರ್ತಿ ಗೋವಿಂದನ ಗುಣಗಾನ

ಯಾದಗಿರಿ, ಶಹಾಪುರಃ ತಾಲ್ಲೂಕಿನ ಐತಿಹಾಸಿಕ ಗ್ರಾಮ ಸಿರವಾಳದಲ್ಲಿ ಸುಮಾರು ಒಂದು ಸಾವಿರದ ಎರಡು ನೂರು ವರ್ಷಗಳಿಗೂ ಅಧಿಕ ಪುರಾತನವಾದ ರಾಷ್ಟ್ರಕೂಟರ ಕಾಲದ ಕನ್ನಡ ಶಿಲಾ ಶಾಸನ ಒಂದು ಪತ್ತೆಯಾಗಿದ್ದು, ಸ್ಥಳೀಯರಾದ ಸಹಾಯಕ ಖಜಾನಾಧಿಕಾರಿ ಹಾಗೂ ಸಂಶೋಧಕ ಡಾ.ಎಂ.ಎಸ್.ಸಿರವಾಳ ಅವರು ಅದನ್ನು ಶೋಧಿಸಿ ಆಳವಾದ ಅಧ್ಯಯನ ನಡೆಸುವ ಮೂಲಕ ಸಮಗ್ರ ಮಾಹಿತಿಯನ್ನು ಪ್ರಕಟಣೆಗೆ ನಿಡಿದ್ದಾರೆ.

ಸಂಶೋಧಕರು ಇತ್ತೀಚೆಗೆ ಶಾಸನ ಸಂಶೋಧನೆಗಾಗಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಿರವಾಳ ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಐತಿಹಾಸಿಕ ಮಹತ್ವದ ಬಾರಂಬಾವಿಯಲ್ಲಿ ಈ ಶಿಲಾ ಶಾಸನ ಪತ್ತೆ ಮಾಡಿದ್ದಾರೆ.

ಶಾಸನದ ಸ್ವರೂಪ: ಬಾರಂಬಾವಿಯ ದಕ್ಷಿಣದ ಗೋಡೆಯ ಸುಣ್ಣದ ಕಲ್ಲಿನ ಭಿತ್ತಿ ಚಿತ್ರಗಳ ಮಧ್ಯದಲ್ಲಿ 5 ಅಡಿ ಉದ್ದ ಮತ್ತು 2 ಅಡಿ ಅಗಲ ಗಾತ್ರದಲ್ಲಿ ಈ ಶಿಲಾ ಶಾಸನವನ್ನು ಕೊರೆಯಲಾಗಿದೆ.

ಶಾಸನದ ಲಿಪಿ: ವಿಶ್ವದಲಿಪಿಗಳ ರಾಣಿ ಎಂದೆನಿಸಿರುವ ಕನ್ನಡ ಲಿಪಿಯಲ್ಲಿ ಈ ಶಾಸನವನ್ನು 40 ಸಾಲುಗಳಲ್ಲಿ ಸುಂದರವಾಗಿ ಒಂದಿಂಚು ಗಾತ್ರದ ಅಕ್ಷರಗಳಲ್ಲಿ ಕೆತ್ತಲಾಗಿದೆ ಎಂದು ಸಂಶೋಧಕ ಡಾ.ಸಿರವಾಳ ತಿಳಿಸಿದ್ದಾರೆ.
ಶಾಸನದ ಭಾಷೆ: ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದೆನಿಸಿರುವ 9ನೇ ಶತಮಾನದ ಪೂರ್ವದ ಹಳಗನ್ನಡ ಭಾಷೆಯಲ್ಲಿ ಈ ಶಿಲಾ ಶಾಸನವನ್ನು ರಚಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಶಾಸನದ ಕಾಲ: ಈ ಶಿಲಾ ಶಾಸನದಲ್ಲಿ ನೇರವಾಗಿ ತೇದಿಯನ್ನು ಎಲ್ಲಿಯೂ ದಾಖಲಿಸಿರುವುದಿಲ್ಲ. ಆದ ಕಾರಣ ಖಚಿತವಾಗಿ ಕಾಲ ನಿರ್ಣಯ ಕಷ್ಟಸಾಧ್ಯವೆಂದು ತಿಳಿಸಿರುವ ಅವರು, ಇಲ್ಲಿ ಉಲ್ಲೇಖಗೊಂಡಿರುವ ಗೋವಿಂದ ಎಂಬ ಹೆಸರು ಮತ್ತು ವಿವರಿಸಿರುವ ಸಾಧನೆಗಳು ಹಾಗೂ ಬಳಸಿರುವ ಪೂರ್ವದ ಹಳಗನ್ನಡ ಲಿಪ್ಯಕ್ಷರಗಳ ಸ್ವರೂಪ ಮತ್ತು ಗಾತ್ರಗಳ ಆಧಾರದ ಮೇಲೆ ಈ ಶಿಲಾ ಶಾಸನವನ್ನು ಕ್ರಿ.ಶ.ಸು 813 ಎಂದು ಸಂಶೋಧಕ ಡಾ.ಎಂ.ಎಸ್.ಸಿರವಾಳ ಅವರು ಈ ಶಾಸನದ ಕಾಲವನ್ನು ನಿರ್ಣಯ ಮಾಡಿದ್ದಾರೆ.

ಶಿಲಾ ಶಾಸನದ ಅರ್ಥ: ಈ ಶಾಸನವು “ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಗೋವಿಂದನು ವೈರಿಗಳೊಂದಿಗೂ ಸಹ ನೀತಿ ಬಿಟ್ಟು ನಡೆದವನಲ್ಲ. ಪ್ರತಿಯೊಬ್ಬರ ಎದೆಯ ಮೇಲೆ ಎಳೆಯ ಶಿಶುವಿನಂತೆ ನಲಿಯುತ್ತಿದ್ದನು ಹಾಗೂ ನಕ್ಷತ್ರದಂತೆ ಮಿನುಗುತ್ತಿದ್ದನು.

ಸಾಕ್ಷಾತ್ ದೇವರಂತೆ ದೂರ ದೃಷ್ಟಿವುಳ್ಳವನಾಗಿ ಪ್ರಜೆಗಳಲ್ಲಿನ ಭೀತಿಯನ್ನು ಕಳೆದು ಮಾರ್ಗದರ್ಶಕನಾಗಿ ಅವರ ಆತ್ಮಗಳಲ್ಲಿ ಅತ್ಯಲ್ಪ ಕಾಲದಲ್ಲಿಯೇ ನೆಲೆ ನಿಂತನು. ಸರ್ವ ಪ್ರಜೆಗಳ, ಅನಾಥರ ಪಾಪ-ನೋವುಗಳಿಗೆ ತಕ್ಷಣವೇ ಸ್ಪಂದಿಸಿ ಸಂತೃಪ್ತಿ ಪಡಿಸುತ್ತಿದ್ದನು. ಮೌನವಾಗಿದ್ದುಕೊಂಡೇ ಮಾನಿನಿಯರ ಮಾನ ಕಾಪಾಡುತ್ತಿದ್ದನು.

ಮಗಧ-ಮಾಳವರ ಪರಾಕ್ರಮವನ್ನು ಅಡಗಿಸಿ ಅವರ ವಕ್ಷ ಸ್ಥಲ (ಹೃದಯ)ದಲ್ಲಿ ನೆಲೆಸಿದನು. ಜನರ ತಪ್ಪುಗಳನ್ನು ಮನ್ನಿಸುವ ಆತನ ಏಳ್ಗೆಯ ವಿಸ್ತಾರ ಅಳತೆಗೆ ನಿಲುಕದ್ದು. ವೈರಿಗಳಲ್ಲಿ ನಡುಕವನ್ನುಂಟು ಮಾಡಿ ಅವರಿಂದ ಕಪ್ಪ ಕಾಣಿಕೆಗಳನ್ನು ಸಂಗ್ರಹಿಸಿ ತನ್ನ ಕೀರ್ತಿಯನ್ನು ಅಡೆತಡೆಯಿಲ್ಲದಂತೆ ಅತಿಶಯವಾಗಿ ಹೆಚ್ಚಿಸಿಕೊಂಡನು.

ಹೀಗೆ ಆತನ ಒಳ್ಳೆಯ ನಡತೆ, ಸುಶೀಲ ಗುಣ ಒಂದು ಕಡೆ ಹಾಗೂ ಪರಾಕ್ರಮವನ್ನು ಝಳಪಿಸುವ ಖಡ್ಗ ಮತ್ತೊಂದು ಕಡೆ ಆತನ ತೇಜಸ್ಸನ್ನು ಬಹುಬೇಗನೆ ಹೆಚ್ಚಿಸಿ ಕುಹಕವಾಡುವ ಅಪಾರ ಕುಜನರಲ್ಲಿ ನಡುಕವನ್ನು ಹುಟ್ಟಿಸಿದವು” ಎಂಬ ಮಹತ್ವದ ವಿಷಯವನ್ನು ಶಾಸನದಲ್ಲಿ ಉಲ್ಲೇಖಿತವಾಗಿದೆ ಎಂದು ಸಂಶೋಧಕರು ಅರ್ಥೈಸಿದ್ದಾರೆ. ಈ ಶಾಸನವನ್ನು ಬರೆದ ಕವಿ ಹೆಸರು ಕುರೊ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ರಾಜಕೀಯ ಮತ್ತು ರಾಷ್ಟ್ರೀಯ ಮಹತ್ವಃ ವಿಶ್ವದ ನಾಲ್ಕು ಮಹಾ ಸಾಮ್ರಾಜ್ಯಗಳಲ್ಲಿ ಒಂದೆನಿಸಿರುವ ರಾಷ್ಟ್ರಕೂಟರ ಪ್ರಖ್ಯಾತ ಅರಸರಲ್ಲಿ ಓರ್ವನಾಗಿರುವ ಮೂರನೇ ಗೋವಿಂದನ ಗುಣ ಸ್ವಭಾವ ಹಾಗೂ ಸಾಧನೆಗಳನ್ನು ಈ ಶಾಸನ ತಿಳಿಸುತ್ತದೆ.

ಆತ ಉತ್ತರ ಭಾರತದ ಮಗಧ ಮತ್ತು ಪೂರ್ವದ ನಳ ರಿಂದ ಸಹ ಕಪ್ಪ ಕಾಣಿಕೆಗಳನ್ನು ಪಡೆದಿರುವ ವಿಷಯಗಳು ಈ ಶಾಸನದಿಂದ ಪ್ರಥಮ ಬಾರಿಗೆ ತಿಳಿದು ಬರುತ್ತವೆ. “ಹಿಮಾಲಯದ ತಪ್ಪಲ ಹಿಮಕರಗಿದ ನೀರನ್ನು ಗೋವಿಂದನ ಕುದುರೆಗಳು ಕುಡಿದವು, ಅವನ ಗಜಗಳು ಗಂಗಾ ಜಲ ಪಾನ ಮಾಡಿದವು” ಎಂದು ಸಂಜಾನ್ ತಾಮ್ರ ಶಾಸನ ನೀಡುವ ಆತನ ಉತ್ತರ ಭಾರತದ ವಿಜಯೋತ್ಸವದ ಮಾಹಿತಿಗೆ ಸಿರವಾಳದ ಈ ಶಾಸನ ಪೂರಕವಾಗಿದೆ.

ಈವರೆಗೆ ಮೂರನೇ ಗೋವಿಂದನ ಬಗ್ಗೆ ಮಾಹಿತಿ ನೀಡುವ ಬೆರಳೆಣಿಕೆಯ ರಾಷ್ಟ್ರ ಮಟ್ಟದ ಶಾಸನಗಳ ಸಾಲಿಗೆ ಇನ್ನು ಮುಂದೆ ಈ ಶಾಸನ ಹೊಸ ಸೇರ್ಪಡೆಯಾಗುತ್ತದೆ. ಎಂಬ ಹಲವಾರು ಐತಿಹಾಸಿಕ ಸಂಗತಿಗಳು ಈ ಶಾಸನದಿಂದ ಗೊತ್ತಾಗುತ್ತವೆ ಎನ್ನುತ್ತಾರೆ ಸಂಶೋಧಕ ಸಿರವಾಳ.

ನಾಗಬ್ರಹ್ಮಿಣಿ ಶಿಲ್ಪ ಪತ್ತೆ: ಇದೇ ವೇಳೆ ಗ್ರಹಣದ ಸಂದರ್ಭದಲ್ಲಿ ಪ್ರಾಚೀನರು ಹಾಕಿಸುತ್ತಿದ್ದ ಭಗ್ನಗೊಂಡಿರುವ ಕ್ರಿ.ಶ.ಸು.ಹತ್ತನೇ ಶತಮಾನದ ಅಪರೂಪದ ನಾಗಬ್ರಹ್ಮಿಣಿ ಶಿಲ್ಪ ಒಂದನ್ನು ಸಹ ಸಂಶೋಧಕ ಡಾ.ಎಂ.ಎಸ್.ಸಿರವಾಳ ಇದೇ ವೇಳೆ ಪತ್ತೆ ಹಚ್ಚಿದ್ದಾರೆ.

ಅಲ್ಲದೆ ಗ್ರಾಮದಲ್ಲಿ ಇತರೆ ಹಲವಾರು ಮಹತ್ವದ ಶಾಸನ ಸ್ಮಾರಕ, ವೀರಗಲ್ಲು ಶಿಲ್ಪಗಳಿದ್ದು ಅವುಗಳು ಊರ ಜನರ ಅವಜ್ಞೆಗೆ ಗುರಿಯಾಗಿವೆ. ಮತ್ತು ರಾಷ್ಟ್ರಕೂಟರ ಕಾಲದ ಮಹತ್ವ ಪೂರ್ಣ ಶಿಲಾಶಾಸನ ಮತ್ತು ಸ್ಮಾರಕಗಳು ನಿಧಿಗಳ್ಳರ ದಾಳಿಗೆ ತುತ್ತಾಗಿ ವಿನಾಶದ ಅಂಚಿನಲ್ಲಿವೆ. ಸಂಬಂಧಪಟ್ಟ ಇಲಾಖೆಯವರು ಅವುಗಳ ಸಂರಕ್ಷಣೆಗೆ ಮುಂದಾಗ ಬೇಕೆಂದು ಸಂಶೋಧಕ ಡಾ.ಎಂ.ಎಸ್.ಸಿರವಾಳ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button