ಚುನಾವಣೋತ್ತರ ಸಂಘರ್ಷ : ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಪೆರಿಯಾರ್ ಮತ್ತು ಲೆನಿನ್ ಪ್ರತಿಮೆಗಳು ಭಗ್ನ!
ಕಳೆದ ಚುನಾವಣೆಯಲ್ಲಿ ತ್ರಿಪುರ ರಾಜ್ಯವನ್ನು ಬಿಜೆಪಿ ಗೆದ್ದಿದೆ. ಅಧಿಕಾರದ ಗದ್ದುಗೆ ಏರಲು ಸಕಲ ಸಿದ್ಧತೆ ಮಾಡಿಕೊಳ್ಳತೊಡಗಿದೆ. ಇದೇ ಸಂದರ್ಭದಲ್ಲಿ ಚುನಾವಣೋತ್ತರ ಸಂಘರ್ಷ ಆರಂಭವಾಗಿದೆ. ನಿನ್ನೆಯಷ್ಟೇ ದಕ್ಷಿಣ ತ್ರಿಪುರದಲ್ಲಿ ಕಮ್ಯೂನಿಷ್ಟ ನಾಯಕ ವ್ಲಾಡಿಮರ್ ಲೆನಿನ್ ಅವರ ಪ್ರತಿಮೆಗಳನ್ನು ದುಷ್ಕರ್ಮಿಗಳು ನೆಲಕ್ಕುರುಳಿಸಿದ ಘಟನೆ ನಡೆದಿದೆ. ಕೆಲವು ಕಡೆ ಸಿಪಿಎಂ ಕಚೇರಿಗಳಿಗೂ ಬೆಂಕಿ ಇಡಲಾಗಿದೆ. ಪರಿಣಾಮ ರಾಜ್ಯದ ಹಲವೆಡೆ ನಿಷೇದಾಗ್ನೆ ಜಾರಿಗೊಳಿಸಲಾಗಿದೆ.
ಮತ್ತೊಂದು ಕಡೆ ತಮಿಳುನಾಡಿನ ತಿರುಪತ್ತೂರಿನಲ್ಲಿ ಕೆಲ ದುಷ್ಕರ್ಮಿಗಳು ಸಮಾಜ ಸುಧಾರಕ ಪೆರಿಯಾರ್ ಅವರ ಮೂರ್ತಿ ಭಗ್ನಗೊಳಿಸಿದ ಘಟನೆ ನಡೆದಿದೆ. ಪೆರಿಯಾರ್ ಪ್ರತಿಮೆ ಭಗ್ನಗೊಳಿಸಿದ್ದಕ್ಕೆ ಪ್ರತಿಕಾರ ಎಂಬಂತೆ ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿ ಮೇಲೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಿಪಿಎಂ ಮತ್ತೋರ್ವ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈಶಾನ್ಯ ರಾಜ್ಯಗಳ ಚುನಾವಣೆ ಬಳಿಕ ರಾಜಕೀಯ ಸಂಘರ್ಷ ಆರಂಭವಾಗಿದೆ. ಪರಿಣಾಮ ಸಮಾಜ ಸುಧಾರಕರು, ರಾಜಕೀಯ ನಾಯಕರ ಪ್ರತಿಮೆಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಶಾಂತಿ ಕದಡುವ ಕೃತ್ಯ ಎಸಗುತ್ತಿದ್ದಾರೆ. ಹೀಗಾಗಿ, ಸರ್ಕಾರ, ರಾಜಕೀಯ ಪಕ್ಷಗಳ ನಾಯಕರು ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಶಾಂತಿ, ಸುವ್ಯವಸ್ಥೆ ಕಾಪಾಡಬೇಕಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.