ರಸ್ತೆ ಅತಿಕ್ರಮಣ ತೆರವು : ಸಣ್ಣ ವ್ಯಾಪಾರಿಗಳ ಬದುಕು ಬಂದಿತು ಬೀದಿಗೆ!
ಶಹಾಪುರಃ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ
ಯಾದಗಿರಿಃ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲೆಯ ಶಹಾಪುರ ನಗರದ ಪ್ರಮುಖ ರಸ್ತೆ ಆಕ್ರಮಿಸಿಕೊಂಡ ಅಂಗಡಿ ಮುಂಗಟ್ಟುಗಳನ್ನು ನಗರಸಭೆ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಬೆಳ್ಳಂಬೆಳಗ್ಗೆ ಏಕಾಏಕಿ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ಕೈಗೊಂಡರು.
ಶಹಾಪುರ ನಗರದ ಮಾರುತಿ ರಸ್ತೆ ಸೇರಿದಂತೆ ಬಸವೇಶ್ವರ ವೃತ್ತದಿಂದ ಕೆಇಬಿ ಕಚೇರಿವರೆಗೆ ರಸ್ತೆ ಹೆದ್ದಾರಿ ಆಕ್ರಮಿಸಿಕೊಂಡ ಅಂಗಡಿ, ಹೊಟೇಲ್, ಪಾನ್ ಶಾಪ್, ಕಿರಾಣಿ ಅಂಗಡಿಗಳನ್ನು ತೆರವುಗೊಳಿಸಲಾಯಿತು. ರಸ್ತೆ ಆವರಿಸಿಕೊಂಡು ಹಾಕಿಕೊಂಡ ಟೀನ್‍ಶೆಡ್‍ಗಳನ್ನು ಜೆಸಿಬಿ ಮೂಲಕ ಹೊಡೆದು ನೆಲಕ್ಕುರಿಳಿಸಲಾಯಿತು. ನಗರಸಭೆ ಪೌರಾಯುಕ್ತ ರಮೇಶ ನಾಯಕ ಹಾಗೂ ನಗರಸಭೆ ಸಿಬ್ಬಂದಿ ಮತ್ತು ಸಿಪಿಐ ಜೆ.ನಾಗರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ವ್ಯಾಪರಸ್ಥರು ಮತ್ತು ಅಧಿಕಾರಿಗಳ ನಡುವೆ ವಾಕ್ ಸಮರ
ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಸಾರ್ವಜನಿಕ ವ್ಯಾಪರಸ್ಥರಿಂದ ವ್ಯಾಪಕ ವಿರೋಧ ವ್ಯಕ್ತವಾದರೂ ಪೊಲೀಸರು, ನಗರಸಭೆ ಅಧಿಕಾರಿಗಳು ಕ್ಯಾರೆ ಅನ್ನದೆ ಕಾರ್ಯಚರಣೆ ಮುಂದುವರೆಸಿದರು.
ತೆರವು ಕಾರ್ಯಾಚರಣೆ ವೇಳೆ ಮೊದಲೇ ನೋಟಿಸ್ ನೀಡಿದರೆ ನಾವೇ ತೆಗೆದುಕೊಳ್ಳುತ್ತಿದ್ದೇವು. ಈಗಲೂ ಸಮಯವಕಾಶ ಕಲ್ಪಿಸಿ ನಾವೇ ತೆಗೆದುಕೊಳ್ಳುತ್ತೇವೆ ಎಂದು ಹಲವಾರು ಜನ ವ್ಯಾಪಾರಸ್ಥರು ಪರಿ ಪರಿಯಾಗಿ ಬೇಡಿಕೊಂಡರು ಅಧಿಕಾರಿಗಳು ಕೇಳದೆ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು. ಹಲವು ಅಂಗಡಿಗಳನ್ನು ಕಿತ್ತೆಸೆಯಲಾಯಿತು. ಮಾರುತಿ ಮಂದಿರದ ಹಿಂಭಾಗದ ಕುಂಕುಮ, ವಿಭೂತಿ ಮರಾಟ ಡಬ್ಬಿಯನ್ನು ಜೆಸಿಬಿ ಯಂತ್ರದ ಸಹಾಯದಿಂದ ಮುಂಭಾಗದ ಟೀನ್ ಶೆಡ್‍ನ್ನು ನೆಲಕ್ಕೆ ಉರುಳಿಸಿದರು.
ಅಂಗಡಿ ಯುವಕ ಎಷ್ಟು ಮನವಿ ಮಾಡಿದರೂ ತಡೆಯದ ಅಧಿಕಾರಿಗಳು ನೆಲಕ್ಕುರಿಳಿಸಿದರು. ಎಷ್ಟು ವರ್ಷದಿಂದ ನಿಮಗೆ ಹೇಳಲಾಗುತ್ತಿದೆ. ಆದರು ರಸ್ತೆ ಅತಿಕ್ರಮ ಮಾತ್ರ ನಿಲ್ಲುತ್ತಿಲ್ಲ. ಇದರಿಂದ ಸಾಕಷ್ಟು ರಸ್ತೆ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ರಸ್ತೆ ತೆರವು ಕಾರ್ಯಾರಣೆಗೆ ಜಿಲ್ಲಾಧಿಕಾರಿಗಳ ಆದೇಶವಿದ್ದ ಕಾರಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಗಿ ಅವರಿಗೆ ಸಂಬಂಧಿಸಿದ ಕಿರಾಣ ಅಂಗಡಿ ಮುಂದಿನ ಆಕ್ರಮಿತ ಪ್ರದೇಶದ ಶೆಡ್ ತೆರವುಗೊಳಿಸುವ ವೇಳೆಗೆ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರ ಮಧ್ಯೆ ವಾಗ್ವಾದ ನಡೆಯಿತು. ಸುತ್ತಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಒಟ್ಟಾಗಿ ಸೇರಿ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಆದಾಗ್ಯು ಪೊಲೀಸರು ಲಘು ಲಾಠಿ ಬೀಸುವ ಮೂಲಕ ಸೇರಿದ್ದ ಜನರನ್ನು ಓಡಿಸಿದರು. ನಂತರ ಕಾರ್ಯಾಚರಣೆ ಮುಂದುವರೆಸಲಾಯಿತು.
ಬೀದಿ ವ್ಯಾಪಾರಸ್ಥರ ರಕ್ಷಣಾ ಕಾಯ್ದೆ ಅನ್ವಯ ಕಾನೂನು ಸಮರ
ಪ್ರಮುಖ ರಸ್ತೆ ಬದಿ ಹಣ್ಣು, ಹೂ ಸೇರಿದಂತೆ ಇತರೆ ಸಣ್ಣಪುಟ್ಟ ವ್ಯಾಪಾರಸ್ಥರ ಡಬ್ಬಿಗಳನ್ನು ತೆರವುಗೊಳಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳ ಸ್ಥಿತಿಯು ಚಿಂತಾಜನಕವಿದೆ. ನಿತ್ಯ ದುಡಿದು ತಿನ್ನುವ ಶ್ರಮಿಕ ಜೀವಿಗಳ ಗತಿ ದೇವರೇ ಬಲ್ಲ. ಹಣ್ಣು, ಹೂ ಮಾರಾಟ ಮಾಡಿ ಬದುಕವವರು ಬಂಡಿ, ಸಣ್ಣ ಡಬ್ಬಿಗಳನ್ನು ರಸ್ತೆಯಿಂದ ತೆಗೆದು ಬೀಸಾಕಿದ್ದು, ಮುಂದಿನ ಅವರ ಬದುಕು ಗಂಭೀರವಾಗಲಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ಬಂಡಿ, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿದ್ದು, ಬೀದಿ ವ್ಯಾಪಾರಿಗಳ ಬದುಕು ಕಂಗಲಾಗಿದೆ. ಸಣ್ಣ ಹೊಟೇಲ್, ಹಣ್ಣು ವ್ಯಾಪಾರಸ್ಥರು ಹೇಗೆ ಬದುಕುವುದು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಬೀದಿ ಬದಿ ವ್ಯಾಪಾರಸ್ಥರ ಅಧ್ಯಕ್ಷ ರಾಜಶೇಖರ ಹೊಸೂರ ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರ ರಕ್ಷಣಾ ಕಾಯ್ದೆ ಅನ್ವಯ ನಮಗೆ ನಗರಸಭೆಯಿಂದ ಪರವಾನಿಗೆ ನೀಡಬೇಕಿದೆ.
ಪುಟ್‍ಪಾತ್ ಮೇಲೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂಬ ನಿಯಮವಿದೆ. ಅಲ್ಲದೆ ನಗರಪ್ರಾಧಿಕಾರ ಮತ್ತು ನಗರಸಭೆ ಕಮಿಷನರ್ ಸೇರಿದಂತೆ ಬೀದಿ ವ್ಯಾಪಾರಿಗಳ ಒಳಗೊಂಡ ಸಮಿತಿ ರಚಿಸಿಬೇಕೆಂಬ ಸರ್ಕಾರ ಸೂಚನೆ ಇದೆ. ಬೀದಿ ಬದಿ ವ್ಯಾಪಾರಿಗಳ ರಕ್ಷಣ ಕಾಯ್ದೆ ಪ್ರಕಾರ ನಮಗೆ ಅನ್ಯಾಯವಾಗಿದೆ. ಹೀಗಾಗಿ ನಾವು ಕಾನೂನು ಹೋರಾಟ ನಡೆಸುತ್ತೇವೆ. ಕಾನೂನಿನ ಮೂಲಕ ಬದುಕಿನ ಹಕ್ಕು ಪಡೆಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.