RYAGING ಮಹಾ ಮಾರಿ ಕಡಿವಾಣ ಅಗತ್ಯ-ನ್ಯಾ.ಬಡಿಗೇರ
ಯಾದಗಿರಿಃ ದೇಶದ ಏಳ್ಗೆಗಾಗಿ ದುಡಿದ ನಾಡಿನ ಇತಿಹಾಸಕಾರರ ಸಂದೇಶಗಳು ಚಿಂತನೆ ಆದರ್ಶಗಳು ನಮ್ಮೆಲ್ಲರಿಗೂ ಅನುಕರಣೀಯ ಅವುಗಳ ಪೈಕಿ ಕೆಲವನ್ನಾದರು ಮೈಗೂಡಿಸಿಕೊಂಡು ದೇಶದ ಸದೃಢತೆಗೆ ಕೈ ಜೋಡಿಸಬೇಕೆಂದು ಹಿರಿಯ ಶ್ರೇಣಿ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಮತ್ತು ರ್ಯಾಗಿಂಗ್ ಕೆಟ್ಟ ಪರಿಣಾಮ ವಿಷಯ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ ನಮಗೇನುಕೊಟ್ಟಿದೆ ಎನ್ನುವದಕ್ಕಿಂತ ದೇಶಕ್ಕಾಗಿ ನಾವೇನು ಕೊಡಬೇಕು ಎನ್ನುವದು ಬಹುಮುಖ್ಯವಾಗಿದೆ. ದೇಶದಲ್ಲಿ ಯುವ ಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತ ಹೋಗುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ರ್ಯಾಗಿಂಗ್ ಮಾಡುವದು ಅಪಾಯಕಾರಿ ಬೆಳವಣಿಗೆಯಾಗಿದೆ. ರ್ಯಾಗಿಂಗ್ ಕೆಟ್ಟ ಚಟ. ಯಾರೇ ಆಗಲಿ ಸ್ವತ: ಅನುಭವಿಸಿದಾಗ ಅದರ ಪರಿಣಾಮ ಅರಿವಾಗಲಿದೆ.
ರ್ಯಾಗಿಂಗ್ ವಿಕೃತ ಮನಸ್ಸಿನ ರೂಪಾಂತರ. ಮತ್ತೊಬ್ಬರಿಗೆ ಹಿಂಸೆ ನೀಡುವ ಮೂಲಕ ವಿಕೃತ ಮನಸ್ಸು ಖುಷಿ ಪಡುವದಾಗಿದೆ. ಇದು ಬಹು ದೊಡ್ಡ ಅಪರಾಧ. ಕಾರಣ ವಿದ್ಯಾರ್ಥಿ ದಿಸೆಯಲ್ಲಿ ಇಂತಹ ಕೆಟ್ಟ ಪ್ರವೃತ್ತಿ ಬೆಳೆಯಕೂಡದು. ಇದಕ್ಕೆ ಕಡಿವಾಣ ಅಗತ್ಯ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳ ಬಾಳು ಹಾಳಾಗಿದೆ.
ಅಲ್ಲದೆ ಹಲವಡೆ ಜೀವ ಕಳೆದುಕೊಂಡು ಉದಹಾರಣೆಗಳಿವೆ. ಕಾರಣ ರ್ಯಾಗಿಂಗ್ ಪ್ರವೃತ್ತಿ ವಿದ್ಯಾರ್ಥಿಗಳಾರು ಅಲವಡಿಸಿಕೊಳ್ಳಬೇಡಿ. ರ್ಯಾಗಿಂಗ್‍ಗೆ ಒಳಪಟ್ಟ ಯುವ ಸಮೂಹ ಮಾನಸಿಕ ಸ್ಥಿಮಿತ ಕಳೆದುಕೊಂಡು ಶೈಕ್ಷಣಿಕ ಸ್ಥಿತಿ ಹದಗೆಟ್ಟಿದ್ದಲ್ಲದೆ ಮಾನಸಿಕವಾಗಿ ವಿಚಿತ್ರ ಖಾಯಿಲೆಗೊಳಪಟ್ಟವರಿದ್ದಾರೆ.
ಕಾರಣ ಇಂತಹ ಕೆಟ್ಟ ಪದ್ಧತಿ ಅಲ್ಲಗಳೆದು ಪರಸ್ಪರರು ಗೌರವದಿಂದ ನಡೆದುಕೊಳ್ಳಬೇಕು. ದೇಶದ ಸಂಪತ್ತಾಗಿರುವ ಯುವ ಶಕ್ತಿ ಬಲಪಡಿಸಲು ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು. ದೇಶದ ಅಭವೃದ್ದಿಗೆ ಕೈಜೋಡಿಸಲು ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಹಿರಿಯ ವಕೀಲರಾದ ಆರ್.ಎಂ.ಹೊನ್ನಾರಡ್ಡಿ, ತಾನು ಎಂಬ ಸಂಕುಚಿತ ಮನೋಭಾವನೆ ಬಿಟ್ಟು ತನ್ನ ಸಮಾಜ ತನ್ನ ದೇಶ ಎಂಬ ವಿಶಾಲ ಅರ್ಥದಲ್ಲಿ ಯುವಕರು ಮುನ್ನಡೆಯಬೇಕಿದೆ. ಒಂದು ದೇಶದ ಯುವ ಜನತೆ ಆ ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಮಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಣಮಂತರಾವ್ ಕುಲಕರ್ಣಿ, ತಾಲ್ಲೂಕ ವಕೀಲರ ಸಂಘದ ಉಪಾಧ್ಯಕ್ಷ ಶರಬಣ್ಣ ರಸ್ತಾಪುರ ಕಾರ್ಯದರ್ಶಿ ಸಂತೋಷ್ ಸತ್ಯಂಪೇಟೆ ಉಪಸ್ಥಿತರಿದ್ದರು. ಶಾಲಾ ಮುಖ್ಯೊಪಾದ್ಯಾಯ ಸಂಗಮೇಶ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಬಿ.ಪಾಟೀಲ ಸ್ವಾಗತಿಸಿದರು. ಜಾನ್ ರಾಜಕುಮಾರ ನಿರೂಪಿಸಿದರು. ವೀಣಾ ನಾಯಕ ವಂದಿಸಿದರು. ವಕೀಲರಾದ ದೇವರಾಜ ಚಟ್ಟಿ, ಪ್ರಭು ಪಾಟೀಲ ಹೋತಪೇಟ ವೇಣುಗೋಪಾಲ ಇದ್ದರು.