ಕೇಂದ್ರದ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ
ಸಾಹಿತ್ಯ ಶರಣ ಕರದಳ್ಳಿ ಕುರಿತು ಹಾರಣಗೇರಾ ಬರಹ
– ರಾಘವೇಂದ್ರ ಹಾರಣಗೇರಾ
ಸಗರನಾಡಿನ ಹಾಗೂ ಹೈದ್ರಾಬಾದ ಕರ್ನಾಟಕದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಯಾದಗಿರಿ ಜಿಲ್ಲೆಯ ಶಹಾಪುರದ ಚಂದ್ರಕಾಂತ ಕರದಳ್ಳಿ ಅವರು ನಾಡಿನ ಸಾಹಿತ್ಯ ಹಾಗೂ ಸಾಂಸ್ಕøತಿಕ ವಲಯದಲ್ಲಿ ಮಕ್ಕಳ ಸಾಹಿತಿ ಎಂದೇ ಪರಿಚಿತರಾಗಿರುವರು.

1952 ಅಗಸ್ಟ 25ರಂದು ರಾಚಯ್ಯಸ್ವಾಮಿ ಕರದಳ್ಳಿ ಮತ್ತು ಮುರಿಗೆಮ್ಮ ದಂಪತಿಗಳ ಉದರದಲ್ಲಿ ಜನಸಿದರು. ದಾರವಾಢ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್. ಪದವಿ ಪಡೆದು ಶಿಕ್ಷಕರಾಗಿ ಸರಕಾರಿ ಸೇವೆಗೆ ನೇಮಕಗೊಂಡು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪ್ರೌಢಶಾಲಾ ಶಿಕ್ಷಕರಾಗಿ 33 ವರ್ಷಗಳವರೆಗೆ ವೃತ್ತಿಬದ್ದತೆಯಿಂದ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಕಾರ್ಯನಿರ್ವಹಿಸಿ ಆ ಕ್ಷೇತ್ರಗಳಿಗೆ ಹೆಸರು ತಂದುಕೊಟ್ಟವರು. ನಮ್ಮ ಬಿಸಿಲು ನಾಡಿನಲ್ಲಿ ಮಕ್ಕಳ ಸಾಹಿತ್ಯಕ್ಕೆ 25 ಮೌಲಿಕ ಕೃತಿಗಳನ್ನು ನೀಡಿದ ಕರದಳ್ಳಿ ಅವರು ಮಕ್ಕಳ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರೌಢಸಾಹಿತ್ಯದಲ್ಲಿ ಸಂಪಾದನೆಯನ್ನೊಳಗೊಂಡು 25 ಕೃತಿಗಳನ್ನು ಹೊರತಂದಿದ್ದಾರೆ.
ಸಾಹಿತಿ ಚಂದ್ರಕಾಂತ ಕರದಳ್ಳಿ ಅವರು ಪ್ರಧಾನವಾಗಿ ಮಕ್ಕಳ ಸಾಹಿತಿ ಎಂದು ಗುರುತಿಸಿಕೊಂಡರೂ ಸಹ ಅವರ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರ ವಿಸ್ತಾರವಾದುದ್ದು. ಶಿಕ್ಷಕ, ಲೇಖಕ, ಕವಿ, ಸಾಹಿತಿ, ಶಿಶುಸಾಹಿತಿ, ಸಂಪಾದಕ, ಪ್ರಕಾಶಕ, ಶರಣಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿದ ಸಾಂಸ್ಕøತಿಕ ಸಂಘಟಕ ಹೀಗೆ ಹಲವು ವಿಧದಲ್ಲಿ ಅವರ ಕಾರ್ಯಶಕ್ತಿಯನ್ನು ಕಂಡುಬರುತ್ತದೆ.
ಸಗರಾದ್ರಿಯ ಸಾಂಸ್ಕøತಿಕ ಪರಂಪರೆಯ ನೆಲದಲ್ಲಿ ಸಾಹಿತ್ಯ ಕೃಷಿಯ ಮೂಲಕ ಅವರು ಪ್ರಬುದ್ಧವಾದ, ವೈವಿಧ್ಯಮಯವಾದ ಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಚಂದ್ರಕಾಂತ ಕರದಳ್ಳಿ ಅವರು ಮಕ್ಕಳ ಸಂವೇದನೆಗಳೊಂದಿಗೆ ಕಾವ್ಯ, ಕಥೆ, ಕಾದಂಬರಿ, ಶಿಶುಪ್ರಾಸಗಳು, ಒಗಟುಗಳು, ಸಂಪಾದನೆ, ಭಾಷಣಗಳು, ಪ್ರವಾಸಕಥನ, ಚೌಪಾದಿಗಳು ಹೀಗೆ ಬೇರೆ ಬೇರೆ ವಲಯಗಳಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ.
ವಿಷಯ ವೈವಿಧ್ಯತೆಯಲ್ಲಿ, ಪ್ರಯೋಗಶೀಲತೆಯಲ್ಲಿ, ಶೈಲಿಯ ಕಲೆಗಾರಿಕೆಯಲ್ಲಿ ತಮ್ಮದೇ ಆದ ವೈಶಿಷ್ಟತೆಯನ್ನು ತೋರಿದ್ದಾರೆ. ಪ್ರೌಢಸಾಹಿತ್ಯದಲ್ಲಿ ವೈಚಾರಿಕ ಲೇಖನಗಳು, ಚಿಂತನಗಳು, ಜೀವನಚರಿತ್ರೆಗಳು, ಸಂಪಾದನೆಗಳು, ಸ್ಮರಣಗ್ರಂಥಗಳು, ವಚನವ್ಯಾಖ್ಯಾನ, ವಚನಸಾಹಿತ್ಯ, ಶರಣಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರು ನಾಡಿನ ಸಾರಸ್ವತ ಲೋಕಕ್ಕೆ 50 ಕೃತಿಗಳನ್ನು ಅರ್ಪಿಸಿದ್ದಾರೆ.
ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಪ್ರೀತಿ, ಒಲವು, ಅಭಿಮಾನ, ಹೊಂದಿರುವ ಚಂದ್ರಕಾಂತ ಕರದಳ್ಳಿ ಅವರು ನಾಡಿನ ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಡಾ. ಸಿದ್ಧಲಿಂಗಯ್ಯ, ಕುಂವಿ, ಗೊರುಚ ಮುಂತಾದವರೊಂದಿಗೆ ತುಂಬಾ ಆಪ್ತರಾಗಿರಾದ್ದರೆ. ಹೊಸ ತಲೆಮಾರಿನ ಯುವ ಬರಹಗಾರರ ಜೊತೆ ಆಧಾರ ಅಭಿಮಾನದಿಂದ ಕಾಣುವ ಕರದಳ್ಳಿ ಅವರು ಯುವ ಬರಹಗಾರರ ಬರಹಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದಾರೆ.
ಇತರರಿಂದ ಬರೆಸುವ, ಮಾತನಾಡಿಸುವ, ಓದಿಸುವ, ಓದುಗರನ್ನು ಪ್ರೀತಿಸುವ ಅವರು ನಾಡಿನ ಸಾಹಿತ್ಯ ಹಾಗೂ ಸಾಂಸ್ಕøತಿಕ ವಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.
ಕರದಳ್ಳಿ ಅವರ ಮಕ್ಕಳ ಸಾಹಿತ್ಯ ಕೃತಿಗಳು:
ಮಕ್ಕಳ ಕವನಸಂಕಲನಗಳು: ನಲಿದಾಡು ಬಾ ನವಿಲೆ, ಪುಟ್ಟನ ಕನಸು, ನಮ್ಮ ಹಳ್ಳಿ ನಮಗೆ ಚೆಂದ, ಚಂದಮಾಮ ಒಬ್ಬನೆ ಇದ್ದೀಯಾ ? ಮಂಗಳ ಗ್ರಹದಲ್ಲಿ ಮನೆಮನೆ(ಅಚ್ಚಿನಲ್ಲಿ) ಕಥೆಗಳು: ಮಕ್ಕಳಿಗಾಗಿ ಸಣ್ಣ ಕಥೆಗಳು, ಮಾವಿನ ಮರ ಬೆಳೆದದ್ದು ಹೀಗೆ, ಉಪ್ಪಿನಗೊಂಬೆಯ ಹುಟ್ಟೂರು, ಆಕಾಶವೇಕೆ ಮೇಲಿದೆ ? ಕುರುಡ ಮತ್ತು ಕಂದೀಲು ಮತ್ತು ಇತರ ಕಥೆಗಳು.
ಕಾದಂಬರಿಗಳು: ಬಯಲು ಸೀಮೆಯಿಂದ ಕರಾವಳಿಗೆ ಮಹಾಜಿಪುಣ ಮೈದಾಸ, ಉಪ್ಪಿನ ಗೊಂಬೆ, ಮಾಯದ ಗಂಟೆ, ಸಗರಾದ್ರಿ ಚಾರಣ ಕಾಡು ಕನಸಿನ ಬೀಡಿಗೆ, ಶಿಶುಪ್ರಾಸಗಳು: ಆನೆ ಬಂತು ಆನೆ, ಗಾಡಿ ಬಂತು ಗಾಡಿ, ನೂರೊಂದು ಹೊಸ ಒಗಟುಗಳು ಪ್ರವಾಸ ಕಥನ: ಕೊಡಗಿನ ಬೆಡಗು ಮತ್ತು ಮಲೆಯ ಮಹದೇಶ್ವರ, ಸಗರಾದ್ರಿ ಚಾರಣ, ಕಾಡು ಕನಸಿನ ಬೀಡಿಗೆ ಮುಂತಾದವು.
ಪ್ರೌಢಸಾಹಿತ್ಯದ ಕೃತಿಗಳು: ವಿಚಾರ ತರಂಗ, ಮನದಾಳದ ಮಾತುಗಳು, ನುಡಿಯ ಬೆಡಗು, ಲಿಂಗಣ್ಣ ಸತ್ಯಂಪೇಟೆ, ಬಿಸಿಲು ಬದುಕಿನ ಮಧ್ಯೆ, ಬಿ. ಮಹಾದೇವಪ್ಪನವರು, ನಡೆದ ದಾರಿಯ ನೋಟ, ಶಹಾಪುರ ತಾಲ್ಲೂಕಿನ ದರ್ಶನ, ವಚನ ವ್ಯಾಖ್ಯಾನ ಮುಂತಾದವು.
ಶಿಕ್ಷಣ ಹಾಗೂ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು :
‘ಉತ್ತಮ ಶಿಕ್ಷಕ’ ರಾಜ್ಯ ಪ್ರಶಸ್ತಿ, ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಶಿಕ್ಷಣ ಸಿರಿ ಪ್ರಶಸ್ತಿ, ಸಾಕ್ಷಿ ಮಕ್ಕಳ ಸಾಹಿತ್ಯ ಪ್ರಶಸ್ತಿ, ಸಿಸು ಸಂಗಮೇಶ ದತ್ತಿ ಪ್ರಶಸ್ತಿ, ಸಿದ್ಧಾರ್ಥ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಕ್ಕಳ ಚಂದಿರ ಪ್ರಶಸ್ತಿ ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಚಂದ್ರಕಾಂತ ಕರದಳ್ಳಿ ಅವರು ಶಹಾಪುರ ತಾಲ್ಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನದ ಹಾಗೂ ಯಾದಗಿರಿ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಾಡಿನ ತಾಲ್ಲೂಕಾ, ಜಿಲ್ಲಾ, ರಾಜ್ಯಮಟ್ಟದ ಅನೇಕ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕವಿತೆಗಳು, ಚಿಂತನೆಗಳು, ವಿಮರ್ಶೆಗಳು ಮಂಡಿಸಿದ್ದಾರೆ. ಗುಲಬರ್ಗಾ ಆಕಾಶವಾಣಿಯಿಂದ ನೂರಾರು ಚಿಂತನೆಗಳು ಬಿತ್ತರವಾಗಿವೆ.
ಎಲ್ಲರನ್ನು ಪ್ರೀತಿಯ ಹೃದಯವಂತಿಕೆಯಿಂದ ಕಾಣುವ ಚಂದ್ರಕಾಂತ ಕರದಳ್ಳಿ ಅವರು ತಮ್ಮ ಸುತ್ತಮುತ್ತಲಿನ ಜನಜೀವನದ ಕುರಿತು ಜೀವಪರ ಕಾಳಜಿ, ಆದಾರ ಮತ್ತು ಅಭಿಮಾನವನ್ನು ಇಟ್ಟುಕೊಂಡಿರುವ ಅವರು ಕನ್ನಡ ಭಾಷೆಯ ಹಿತವನ್ನು, ಸಾಹಿತ್ಯದ ಹಿತವನ್ನು, ನಾಡಿನ ಹಿತವನ್ನು ಬಯಸಿದವರು ನನ್ನ ಪ್ರತಿಯೊಂದು ಬರಹಗಳನ್ನು ಪ್ರೀತಿಯಿಂದ ಓದಿ ಪ್ರೋತ್ಸಾಹಿಸಿ ಸಲಹೆ ಸೂಚನೆಗಳನ್ನು, ಮಾರ್ಗದರ್ಶನವನ್ನು ನೀಡುವ ಕರದಳ್ಳಿ ಅವರು ನನಗೆ ಶಹಾಪುರ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಯಾವ ಪ್ರಶಸ್ತಿ ಗೌರವಗಳಿಗೆ ಬೀಗದೆ ಎಂದಿನ ತಮ್ಮ ಸಹಜ, ಸರಳ, ಸಾತ್ವಿಕ ಸಮಚಿತ್ತದ ನಡಳಿಕೆಯನ್ನು ಅನುಸರಿಸಿ ನಡೆಯುತ್ತಿದ್ದಾರೆ. ಅಧ್ಯಯನ, ಚಿಂತನೆ, ಬರವಣಿಗೆಯನ್ನು ನಿರಂತರವಾಗಿ ಇಟ್ಟುಕೊಂಡಿರುವ ಚಂದ್ರಕಾಂತ ಕರದಳ್ಳಿ ಅವರು 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೈದ್ರಾಬಾದ ಕರ್ನಾಟಕದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಬಾಲಸಾಹಿತ್ಯ ಪ್ರಶಸ್ತಿ ಪಡೆದ ಮೊದಲಿಗರಾಗಿರುವುದು ಹೈದ್ರಬಾದ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಬತ್ತದ ಜೀವನೋತ್ಸಾಹ, ಅದಮ್ಯ ಜೀವನ ಪ್ರೀತಿಯೊಂದಿಗೆ ಸದಾ ಚೈತನ್ಯಶೀಲರಾಗಿ ಚಟುವಟಿಕೆಯಿಂದ ನಿರಂತರ ಅಧ್ಯಯನ, ಸಾಹಿತ್ಯ ಬರಹಗಳಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಕರದಳ್ಳಿ ಅವರು ಇನ್ನೂ ಹೆಚ್ಚು ಮೌಲಿಕ ಕೃತಿಗಳಿಂದ ನಾಡಿಗೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.
–ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು.
ಬಾಪುಗೌಡ ದರ್ಶನಾಪುರ ಸ್ಮಾರಕ
ಮಹಿಳಾ ಪದವಿ ಕಾಲೇಜು.
ಶಹಾಪುರ ಜಿ: ಯಾದಗಿರಿ
ಮೊ.ನಂ. 9901559873