ಅಂಕಣ

ಸಗರನಾಡಿನ ‘ಸಾಹಿತ್ಯ ಸಿರಿ’ ಸಗರ ಕೃಷ್ಣಾಚಾರ್ಯರು -ಹಾರಣಗೇರಾ ಲೇಖನ

ನುಡಿಯೊಡತಿಯೆ ನಿನ್ನ ಶಕ್ತಿ ಕೀರ್ತಿಗೆ ನೆಲೆಯಾಗಿದೆ
ಜಡಚೇತನಕ್ಕೆಲ್ಲ ದಿವ್ಯಸ್ಪೂರ್ತಿಯ ಸೆಲೆಯಾಗಿದೆ
ಬಡವರಲ್ಲಿ ನಾವು ಭಾವಶುದ್ದಿಯಲ್ಲಿ ಎನಿಸಿದೆ
ನಡು ನೀರಲಿ ಕೈಯ ಬೀಡದ ರೀತಿಯಲ್ಲಿ ನಡೆಸಿದೆ”

ಇದು ಸಗರನಾಡಿನಲ್ಲಿ ಕನ್ನಡದ ತೇರನ್ನೆಳೆದ ಹಿರಿಯ ಶ್ರೇಷ್ಟ ಸಾಹಿತಿ ಚೇತನ ಸಗರ ಕೃಷ್ಣಚಾರ್ಯರ ಕನ್ನಡ ಭಾಷಾ ಪ್ರೇಮದ ಕಾವ್ಯದ ಸಾಲುಗಳಿವು. ಸಗರನಾಡು ಎಂದು ಕರೆಯಲ್ಪಡುವ ಶಹಾಪೂರ, ಸುರಪುರ ಮತ್ತು ಜೇವರ್ಗಿ ನೆಲದ ತತ್ವಪದಕಾರರನ್ನು, ಶರಣರನ್ನು, ಸಾಹಿತಿಗಳನ್ನು ನೆನೆಯುವುದು  ಎಂದರೆ ಸಗರನಾಡಿನ ಸಾಂಸ್ಕೃತಿಕ ಪ್ರಪಂಚವನ್ನು, ಈ ನಾಡಿನ ನೆಲದಲ್ಲಿ ಸಂಭವಿಸಿದ ಆದ್ಯಾತ್ಮಿಕತೆ, ಸೃಜನಶೀಲತೆ ಮತ್ತು ವೈಚಾರಿಕತೆಯ ಉತ್ಕರ್ಷದ ಪ್ರತಿನಿಧಿಗಳನ್ನು ನೆನೆಪಿಸಿಕೊಳ್ಳವುದು ಎಂದರ್ಥ. ಈ ಹಿನ್ನಲೆಯಲ್ಲಿ ಸಗರನಾಡಿನ ಮುಕುಟಮಣಿಯಂತಿರುವ ಶಹಾಪುರ ತಾಲೂಕಿಗೆ ತಮ್ಮದೆ ವಿಶಿಷ್ಟ ಕೊಡುಗೆಯ ಮೂಲಕ ಸಗರನಾಡಿನ ಸಾಹಿತ್ಯ ಸಿರಿ ಅನ್ನಿಸಿಕೊಂಡಿರುವ ಪ್ರಮುಖ ಹೆಸರು ಸಗರ ಕೃಷ್ಣಚಾರ್ಯರದು.

ಶಹಾಪುರದ ನರಸಿಂಹಚಾರ್ಯ ಮತ್ತು ಗಂಗಾದೇವಿ ಎಂಬ ಸುಸಂಸ್ಕೃತ ಸಂಪನ್ನ ದಂಪತಿಗಳ ಉದರದಲ್ಲಿ 07/06/1917ರಲ್ಲಿ ಜನಿಸಿದ ಕೃಷ್ಣಚಾರ್ಯರು ಬಾಲ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ತಮ್ಮ ಪ್ರತಿಭೆ, ಸಾಮರ್ಥ್ಯ, ಶ್ರಮ, ಪ್ರಯತ್ನಗಳ ಮೂಲಕ ಬಿ.ಎ, ಬಿ.ಎಡ್, ಎಮ್.ಎ ಪದವಿಗಳನ್ನು ಪಡೆದುಕೊಂಡು ಶಿಕ್ಷಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಶಿಕ್ಷಕರಾಗಿ, ಬೆಂಗಳೂರು ವಿಭಾಗದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ, ಕನ್ನಡ ವಿಷಯದ ವೀಕ್ಷಣಾಧಿಕಾರಿಯಾಗಿ, ಪ್ರಾಚಾರ್ಯರಾಗಿ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ವೃತ್ತಿಬದ್ದತೆಯಿಂದ ಕಾರ್ಯನಿರ್ವಹಿಸಿ ಆ ಹುದ್ದೆಗಳಿಗೆ ಗೌರವನ ತಂದುಕೊಟ್ಟರು.

ಇಂದಿರೇಶ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡಿದ ಸಗರ ಕೃಷ್ಣಚಾರ್ಯರು ತೋರಣ, ಅಮೃತಬಿಂದು, ಕನ್ನಡ ದೀಪವದೋ ಕಾಣುತಿಹುದು, ನಿಜವೈತ್ರಿ, ಭಾವೈಕ್ಯತೆ ನೆನಹು ಮುಂತಾದ ಕವನ ಸಂಕಲನಗಳು, ಆದರ್ಶ ಕಥಾಸಂಕಲನ, ಜೀವನ ಸಂಸಾರ, ಮಾಂಧಾತ ಎಂಬ ಕಿರುನಾಟಕಗಳು, ಸ್ಮರಣ ಸಂಜೀವಿನಿ ಭಕ್ತಿಗೀತೆಗಳು, ನನ್ನ ನಾಕಂಡಂತೆ ಎಂಬ ಆತ್ಮ ಚರಿತ್ರೆ, ಕೃತಜ್ಞತೆಯ ಕುರುಹು, ಪ್ರೇಮ ಎಂಬ ಸಾಮಾಜಿಕ ಕಾದಂಬರಿಗಳು ಸೇರಿದಂತೆ 38 ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಕನ್ನಡದ ಸಾರಸ್ವತಲೋಕಕ್ಕೆ ಅರ್ಪಿಸಿದ್ದಾರೆ. 17 ಕ್ಕೂ ಹೆಚ್ಚು ಅವರ ಕೃತಿಗಳು ಅಪ್ರಕಟಿತವಾಗಿಯೇ ಉಳಿದಿವೆ. ಪಂಚಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದ ಕೃಷ್ಣಚಾರ್ಯರು ಉರ್ದು, ಮರಾಠಿಯಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಭಾಷಾ ವಿದ್ವತ್ತು ಆಗಾಧವಾಗಿತ್ತು. ವೈವಿದ್ಯಮಯ ಸಾಹಿತ್ಯ ಕೃತಿಗಳ ಮೂಲಕ ಕೃಷ್ಣಚಾರ್ಯರು ನಾಡಿಗೆ ಸಲ್ಲಿಸಿದ ಸೇವೆ  ಗಣನೀಯವಾಗಿದೆ.

ಲೇಖಕರಾಗಿ, ಮಂದಾಕಿನಿ ಪತ್ರಿಕೆಯ ಸಂಪಾದಕರಾಗಿ,  ಆದರ್ಶ ಶಿಕ್ಷಕರಾಗಿ, ದಕ್ಷ ಅಧಿಕಾರಿಯಾಗಿ, ರಜಾಕರ ಹಾವಳಿಯ ವಿರುದ್ಧದ ಹೋರಾಟಗಾರರಾಗಿ ಸೇವೆ ಸಲ್ಲಿಸಿ ವಿವಿಧ ಸಾಧನೆಗಳ ಮೂಲಕ ಕರ್ನಾಟಕದ ಪ್ರಮುಖ  ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ನಮ್ಮ ಸಗರನಾಡಿನ ಜನಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾಳಜಿ, ಈ ನಾಡಿನ ಸುತ್ತಮುತ್ತಲಿನ ಪರಿಸರದಲ್ಲಿನ ಕೋಟೆ ಕೊತ್ತಲುಗಳು, ಮೂರ್ತಿ ಶಿಲ್ಪಗಳು, ದೇವಾಲಯಗಳು, ಅರಣ್ಯ, ಸಸ್ಯಗಳು, ಜಲಮೂಲಗಳು ಮುಂತಾದವುಗಳ ಬಗ್ಗೆ ಗಾಢ ಪ್ರೀತಿ, ಅಧ್ಯಾತ್ಮಿಕದ ಅಪಾರ ಒಲವು, ಭಕ್ತಿ, ಸಾಂಸ್ಕೃತಿಕ ಪರಂಪರೆಯ ವಿಶಿಷ್ಟತೆಯನ್ನು ಗುರುತಿಸಿ ಹೇಳುವ ಮನೊಭಾವ, ನಾಡು-ನುಡಿಯ ಅಪಾರ ಪ್ರೇಮ, ಜೀವನಾನುಭವ ಮುಂತಾದವುಗಳನ್ನು ಸಗರ ಕೃಷ್ಣಚಾರ್ಯರ ಕೃತಿಗಳಲ್ಲಿ ಕಾಣಬಹುದು.

ಶಹಾಪುರ, ಸುರಪುರ ತಾಲ್ಲೂಕಗಳಲ್ಲಿ ಸಾಹಿತ್ಯ, ಸಂಗೀತ, ವಿಚಾರ ಸಂಕೀರ್ಣ ಮುಂತಾದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವದರೊಂದಿಗೆ ನಾಡಿನಲ್ಲಿ ಉತ್ತಮವಾದ ವಾತವರಣವನ್ನು ನಿರ್ಮಿಸಿದರು. ನಾಡಿನ ಹಿರಿಯ ಸಾಹಿತಿಗಳನ್ನು, ವಿದ್ವಾಂಸರನ್ನು, ಸಂಶೋಧಕರನ್ನು, ರಾಜಕೀಯ ಧುರೀಣರನ್ನು ಆಹ್ವಾನಿಸಿ ಅವರಿಂದ ನಾಡು-ನುಡಿಯ ಸಂಸ್ಕೃತಿಯ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಿ ಜನಜಾಗೃತಿಯನ್ನು ಮೂಡಿಸುತ್ತಿದ್ದರು.

ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಘ ಸ್ಥಾಪಿಸಲು ಮಹತ್ತರ ಪಾತ್ರವಹಿಸಿ ಅದರ ಮೂಲಕ ಉತ್ತಮ ಸಾಹಿತ್ಯ, ಸಾಂಸ್ಕೃತಿಕ ರಚನಾತ್ಮಕ  ಕಾರ್ಯಚಟುವಟಿಕೆಗಳಿಗೆ ನಾಂದಿಯಾಡಿದರು. ಸಗರ ಕೃಷ್ಣಚಾರ್ಯರ ಶಿಷ್ಯ ವಾತ್ಸಲ್ಯ, ಗುರುಗೌರವ, ಅಧ್ಯಯನ, ಅಧ್ಯಾಪನ, ಸಾಹಿತ್ಯ ಬಳಗದ ಅಭಿಮಾನ ಮುಂತಾದವುಗಳಲ್ಲಿ ಅವರ ವ್ಯಕ್ತಿತ್ವ ಮಹತ್ವದ್ದಾಗಿದೆ. ನುಡಿದಂತೆ ನಡೆದು ಶುಚಿ ಜೀವನ ನಡೆಸಿ ಬೇರೆಯವರ ಸಾಧನೆಗಳನ್ನು ಕಂಡು ಖುಷಿ ಪಡುತ್ತ ಎಲ್ಲರ ಕಾರ್ಯವೂ ಸಮಾಜ ಕಲ್ಯಾಣ ಕಾರ್ಯವೇ ಎಂದು ನಂಬಿ ತಮ್ಮ ಸಾಧನೆ ನಿಧಿಗಳಿಂದಲೇ ಜೀವನದ ಸಾರ್ಥಕತೆಯನ್ನು ಕಂಡವರು. ಸರ್ವರ ಏಳಿಗೆ, ಅಭಿವೃದ್ಧಿಯ ಕುರಿತು ಚಿಂತನೆ, ಸಾಹಿತ್ಯ ಕೃಷಿಯೊಂದಿಗೆ ಬಹುಮುಖ ಸೇವೆ ಸಲ್ಲಿಸಿದ ಕೃಷ್ಣಚಾರ್ಯರ ಜೀವನ ಸಾಹಿತ್ಯ ವಾಹಿನಿಯಲ್ಲಿ ಮಿಳಿತವಾಗಿ ಒಂದು ಸಾತ್ವಿಕ ಸಂಸ್ಕೃತಿ ಪರಂಪರೆಯ ಪ್ರಭೆ ಮೂಡಿಸಿ ಹೈದ್ರಾಬಾದ ಕರ್ನಾಟಕದ ಮಾಸ್ತಿ ಎಂದೇ ಹೆಸರುವಾಸಿಯಾಗಿದವರು.  ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ಚಿಂತನೆ ಮತ್ತು ಕೃತಿಗಳ ಮೂಲಕ ಇಂದಿಗೂ ಸಗರನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಬದುಕುಳಿದಿದ್ದಾರೆ.

ಜ್ಞಾನ, ಅನುಭವ, ಸಾಧನೆ, ಮಾನವೀಯ ಚಿಂತನೆ, ಅದ್ಯಾತ್ಮಿಕತೆಯುಳ್ಳ ಮನಸ್ಸು ಹೀಗೆ ವಿವಿಧತೆಯಲ್ಲೂ ಅವರು ನಮ್ಮ ನಾಡಿನ ಸಾಹಿತ್ಯ ಚೇತನವಾಗಿದ್ದಾರೆ. ಬದುಕನ್ನು ಅಪಾರವಾಗಿ ಪ್ರೀತಿಸಿದ ಸಗರ ಕೃಷ್ಣಚಾರ್ಯರು ಬದುಕಿನ ಪ್ರತಿ ಘಳಿಗೆಗಳಲ್ಲಿಯೂ ಅರ್ಥ ಕಾಣುತ್ತ, ಸ್ಪಂದಿಸುತ್ತ, ಭಾವ-ರಾಗಗಳಲ್ಲಿ ಸಮತೋಲನ ಸಾಧಿಸಿ ನಾಡು-ನುಡಿಯ ಸಂಸ್ಕೃತಿಯ ಬಗ್ಗೆ ಅಪಾರ ಕಳಕಳಿಯನ್ನಿಟ್ಟುಕೊಂಡು ದುಡಿದ ಸಾಹಿತಿ, ಚಿಂತಕರಾಗಿದ್ದಾರೆ.  ಸಗರ ಕೃಷ್ಣಚಾರ್ಯರು ನನ್ನ ಗುರುಸ್ವರೂಪಿಗಳು, ಅವರು ಯಾವುದನ್ನು ಬದುಕಿನಿಂದ ಪ್ರತ್ಯೇಕಿಸಿ ನೋಡಲಿಲ್ಲ. ತತ್ವ ಮತ್ತು ಬದುಕು, ಬರಹ ಒಂದೇಯಾಗಿತ್ತು. ಅವರದ್ದು ಎಲ್ಲರು ಬದುಕುವ ತತ್ವವಾಗಿತ್ತು. ಅವರಲ್ಲಿ ಅಪಾರ ಜ್ಞಾನ ಸಂಪತ್ತು ಇತ್ತು. ಶುದ್ಧ ಮತ್ತು ಸರಳ ಜೀವನವನ್ನು ನಡೆಸಿ ನಮ್ಮಂತವರಿಗೆ ಮಾದರಿಯಾಗಿ, ಮಾರ್ಗದರ್ಶಕರಾಗಿದ್ದರು. ಅಂದು ಉರ್ದುವಿನ ಪ್ರಭಾವದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಶ್ರಮಿಸಿದವರು ಎಂದು ಹಿರಿಯ ಸಾಹಿತಿ ಡಿ.ಎನ್.ಅಕ್ಕಿಯವರು ಅಭಿಮಾನದಿಂದ ನುಡಿಯುತ್ತಾರೆ.

ಕೃಷ್ಣಚಾರ್ಯರ ಸಾಹಿತ್ಯಿಕ ಸಾಧನೆ ಮತ್ತು ಸಮಾಜದ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದವು ಸನ್ಮಾನಿಸಿ ಗೌರವಿಸಿವೆ. ಇವರ ಬದುಕು ಬರಹ ಕುರಿತು ಕಲಬುರ್ಗಿಯ ಕನ್ನಡದ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಅನ್ನಪೂರ್ಣ ಪಾಟೀಲ್‍ರವರು ಪ್ರಬಂಧ ಮಂಡಿಸಿ ಕಲಬುರಗಿ ವಿಶ್ವವಿಧ್ಯಾಲಯದಿಂದ ಎಮ್.ಫಿಲ್. ಪದವಿಯನು ಪಡೆದಿದ್ದಾರೆ. ಆದರೆ ಕೃಷ್ಣಚಾರ್ಯರ ಸಿದ್ದಿ-ಸಾಧನೆಗೆ, ಅವರ ಸಾಹಿತ್ಯ ಹಾಗೂ ಸಮಾಜಿಕ ಸೇವೆಗೆ ಸರ್ಕಾರ ಹಾಗೂ ಕೇಂದ್ರ ಸಾಹಿತ್ಯ ಪರಿಷತ್ತು ಗುರುತಿಸಿ ಯಾವುದೇ ಪ್ರಶಸ್ತಿ ಪುರಸ್ಕಾರಗಳು ನೀಡದೆ ಇರುವದು ವಿಷಾದನೀಯ ಸಂಗತಿಯಾಗಿದೆ ಎಂದು ಪತ್ರಕರ್ತ ನಾರಾಯಣಚಾರ್ಯ ಸಗರ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಗರ ಕೃಷ್ಣಚಾರ್ಯರ ಬದುಕು ಬರಹ ಹಾಗೂ ಸಾಧನೆ ಕುರಿತು ಅವಲೋಕಿಸಿದಾಗ ಹೈದ್ರಾಬಾದ ಕರ್ನಾಟಕ ಹಾಗೂ ನಾಡಿನ ಸಾಹಿತ್ಯ ಲೋಕದಲ್ಲಿ ಅವರದು ಸರ್ವಶ್ರುತವಾದ ಹೆಸರು. ಕವಿ, ಕಥೆಗಾರ, ನಾಟಕಕಾರ, ಶಿಕ್ಷಣ ತಜ್ಞ, ಅದ್ಯಾಪಕ, ಹೋರಾಟಗಾರ, ಸಾಂಸ್ಕೃತಿಕ ಸಂಘಟಕರಾಗಿದ್ದ ಕೃಷ್ಣಚಾರ್ಯರು ಕನ್ನಡ  ವಿದ್ವತ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಬಹುಮುಖ ಪ್ರತಿಭೆಯ ಅವರು ನಾಡು-ನುಡಿ ಸಂಸ್ಕೃತಿಗೆ ತಮ್ಮ ಚೇತನವನ್ನೆ ಅರ್ಪಿಸಿದ್ದಾರೆ. ಸಗರನಾಡಿನ ಸಾಹಿತ್ಯ ಲೋಕಕ್ಕೆ ಹಿರಿಮೆ, ಗರಿಮೆಯನ್ನು ತಂದುಕೊಟ್ಟ ಕೃಷ್ಣಚಾರ್ಯರ ಅಮೂಲ್ಯವಾದ ಅಪ್ರಕಟಿತ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಪ್ರಕಟಿಸಿ ಅವುಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ಅರ್ಪಿಸಬೇಕಿದೆ.

-ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು
ಶಹಾಪುರ ಜಿ: ಯಾದಗೀರ
ಮೋ: 9901559873

Related Articles

One Comment

Leave a Reply

Your email address will not be published. Required fields are marked *

Back to top button